Advertisement

ಇಂದು ಬಸ್‌ ಶಾಲೆ ಇರಲ್ಲ; ಭಾರತ ಬಂದ್‌; ರಾಜ್ಯ ಬೆಂಬಲ

06:00 AM Sep 10, 2018 | Team Udayavani |

ಬೆಂಗಳೂರು: ಪೆಟ್ರೋಲ್‌-ಡೀಸೆಲ್‌ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ಕರೆ ನೀಡಿರುವ ಭಾರತ ಬಂದ್‌ ಮುನ್ನಾದಿನ ಮತ್ತಷ್ಟು ಸಂಘ-ಸಂಸ್ಥೆಗಳು ಕೈಜೋಡಿಸಿದ್ದು, ರಾಜ್ಯದಲ್ಲಿ ಇದರ ಕಾವು ಏರ ತೊಡಗಿದೆ. ಪರಿಣಾಮ ಬಂದ್‌ ಬಿಸಿ ತುಸು ಜೋರಾಗಿಯೇ ತಟ್ಟುವ ಸಾಧ್ಯತೆ ಇದೆ. 

Advertisement

ಜೆಡಿಎಸ್‌, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಿವೆ. ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಕೆಲ ಚಿತ್ರ ಪ್ರದರ್ಶಕರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಸೋಮವಾರ ಬೆಳಿಗ್ಗೆ ಮತ್ತು ಮ್ಯಾಟಿನಿ ಶೋ ರದ್ದುಗೊಳಿಸಲು ಮುಂದಾಗಿದ್ದಾರೆ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.  

ಸೇವೆಗಳು ಎಂದಿನಂತೆ 
ಆದರೆ ಲಾರಿ, ಆಟೋ, ಪ್ರವಾಸಿ ವಾಹನಗಳು, ಮ್ಯಾಕ್ಸಿಕ್ಯಾಬ್‌ಗಳು, ಆಹಾರಧಾನ್ಯಗಳ ವರ್ತಕರು, ಹೋಟೆಲ್‌ ಉದ್ಯಮಿಗಳು ಮತ್ತಿತರರು ಕೇವಲ ನೈತಿಕ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ, ಇವುಗಳ ಸೇವೆ ಎಂದಿನಂತೆ ಇರಲಿದೆ ಎಂದು ಆಯಾ ಸಂಘಟನೆಗಳ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್‌ ಸೇವೆಗಳು ಕೂಡ ಮುಂದುವರಿಯಲಿವೆ.

ತೈಲ ಬೆಲೆ ಏರಿಕೆ ವಿರುದ್ಧ ಕರೆ ನೀಡಿರುವ ಬಂದ್‌ಗೆ ಬೆಂಬಲ ವಾಪಸ್‌ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಸೋಮವಾರ ಬೆಳಿಗ್ಗೆಯಿಂದ ಸಂಜೆ 6 ರವರೆಗೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ವಲಯಗಳ ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್‌ ವರ್ಕರ್ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್‌ ಪುನರುತ್ಛರಿಸಿದ್ದಾರೆ. 

ಕೆಲ ಚಿತ್ರಮಂದಿರ ಪ್ರದರ್ಶಕರು ಸ್ವಯಂಪ್ರೇರಿತವಾಗಿ ಮಧ್ಯಾಹ್ನ 3ರವರೆಗೆ ಚಿತ್ರಪ್ರದರ್ಶನ ಸ್ಥಗಿತಗೊಳಿಸಲು ಒಪ್ಪಿದ್ದಾರೆ. ಇನ್ನು ಕಲಾವಿದರ ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿರುವುದರಿಂದ ಹಾಗೂ ಚಿತ್ರೀಕರಣ ದೂರ ಇದ್ದ ಕಡೆಗಳಲ್ಲಿ ಚಿತ್ರೀಕರಣ ನಡೆಯುವುದು ಅನುಮಾನ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ತಿಳಿಸಿದರು. 

Advertisement

ಬಂದ್‌ಗೆ 21 ಪಕ್ಷಗಳ ಬೆಂಬಲ: ಭಾರತ್‌ ಬಂದ್‌ಗೆ 21 ಪಕ್ಷಗಳ ಬೆಂಬಲವಿದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ಕುರಿತು ಭಾನುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾಂಗ್ರೆಸ್‌ ವಕ್ತಾರ ಅಜಯ್‌ ಮಾಕನ್‌, 21 ಪ್ರತಿಪಕ್ಷಗಳು ಮಾತ್ರವಲ್ಲದೆ, ಹಲವು ವಾಣಿಜ್ಯ ಸಂಘಟನೆಗಳು, ವ್ಯಾಪಾರಿ ಒಕ್ಕೂಟಗಳು ಕೂಡ ಬೆಂಬಲ ನೀಡಿವೆ ಎಂದು ತಿಳಿಸಿದ್ದಾರೆ. ಜತೆಗೆ, ಎಲ್ಲೂ ಹಿಂಸಾಚಾರ ನಡೆಯದಂತೆ ಶಾಂತಿಯುತವಾಗಿ ಬಂದ್‌ ನಡೆಸುವಂತೆಯೂ ಅವರು ಕರೆ ನೀಡಿದ್ದಾರೆ. ಇದೇ ವೇಳೆ, ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ, ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್‌) ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಇನ್ನೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌, ರಾಜ್ಯಾದ್ಯಂತ ಸೋಮವಾರ ಪ್ರತಿಭಟನಾ ಮೆರವಣಿಗೆ ಕೈಗೊಳ್ಳುತ್ತೇವೆ. ಆದರೆ, ಸಾರ್ವಜನಿಕ ಸೇವೆಗೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂದಿದೆ.  

ಕೊಡಗು ಬಿಟ್ಟು ಎಲ್ಲ ಜಿಲ್ಲೆಗಳಲ್ಲಿ ರಜೆ
ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಕೊಡಗು ಹೊರತುಪಡಿಸಿದಂತೆ ಎಲ್ಲಾ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಹೀಗಾಗಿ ಭಾನುವಾರ ಸಂಜೆ ವೇಳೆಗೆ ಆಯಾಯ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಆದರೆ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. 

ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿರುವ ಬಂದ್‌ಗೆ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷ ಬೆಂಬಲಿಸಬಾರದು ಎಂಬ ನಿಯಮವೇನೂ ಇಲ್ಲ. ಜನರ ಸಮಸ್ಯೆ, ಅವರಿಗೆ ಆಗುವ ತೊಂದರೆಗಳಿಗೆ ಸ್ಪಂದಿಸುವುದು ಮುಖ್ಯವಾಗುತ್ತದೆ. ರಾಜ್ಯದಲ್ಲಿ ಬಂದ್‌ ಯಶಸ್ವಿಯಾಗಲಿದೆ.
– ಜಿ.ಪರಮೇಶ್ವರ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next