ನವದೆಹಲಿ: ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಗುರುವಾರ(ನವೆಂಬರ್ 26, 2020) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳು ಬಂದ್ ಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.
ಎಲ್ಲಾ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚನೆ ನೀಡಿದ್ದು, ಒಂದು ವೇಳೆ ಮುಷ್ಕರದಲ್ಲಿ ಪಾಲ್ಗೊಂಡರೆ ಸಂಬಳ ಕಡಿತ ಮಾಡುವುದಾಗಿ ತಿಳಿಸಿದೆ.
“ಸರ್ಕಾರಿ ಕಚೇರಿ ಗುರುವಾರ (ನವೆಂಬರ್ 26) ಎಂದಿನಂತೆ ಕಾರ್ಯನಿರ್ವಹಿಸಲಿದೆ. ರಾಜ್ಯ ಸರ್ಕಾರಿ ನೌಕರರ ಹಾಜರಾತಿ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಕೆಲಸಕ್ಕೆ ಗೈರುಹಾಜರಾದರೆ ಆಸ್ಪತ್ರೆಗೆ ದಾಖಲಾಗುವ, ಮಕ್ಕಳ ಆರೈಕೆ, ಹೆರಿಗೆ ಹಾಗೂ ಮೆಡಿಕಲ್ ರಜೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ:ಭೀಕರ ಅಪಘಾತ: 41ಮಂದಿ ದಾರುಣ ಸಾವು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೃತದೇಹಗಳು
ಪಶ್ಚಿಮಬಂಗಾಳದಲ್ಲಿ ಖಾಸಗಿ ಬಸ್ ಗಳು ಬಂದ್ ಗೆ ಬೆಂಬಲ ನೀಡಿದ್ದರಿಂದ ಹೆಚ್ಚುವರಿ ಸರ್ಕಾರಿ ಬಸ್ ಗಳನ್ನು ನಿಯೋಜಿಸಲಾಗಿದೆ ಎಂದು ಪಶ್ಚಿಮಬಂಗಾಳ ಸಾರಿಗೆ ಇಲಾಖೆ ತಿಳಿಸಿದೆ. ಸರ್ಕಾರಿ ಬಸ್ ಚಾಲಕರಿಗೆ ಹೆಲ್ಮೆಟ್ ನೀಡಲಾಗಿದ್ದು, ಒಂದು ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಲ್ಲಿ ರಕ್ಷಣೆಗಾಗಿ ಹೆಲ್ಮೆಟ್ ನೀಡಲಾಗಿದೆ ಎಂದು ವರದಿ ಹೇಳಿದ.ೆ
ಖಾಸಗಿಕರಣ, ರೈತ ಮಸೂದೆ, ಕಾರ್ಮಿಕ ಮಸೂದೆಯನ್ನು ವಿರೋಧಿಸುವುದಾಗಿ ತಿಳಿಸಿರುವ ಪಶ್ಚಿಮಬಂಗಾಳ ಸರ್ಕಾರ, ಯಾವುದೇ ಕಾರಣಕ್ಕೂ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ. ಪಶ್ಚಿಮ ಬಂಗಾಳದ ಕೆಲವೆಡೆ ಪ್ರತಿಭಟನಾಕಾರರು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವುದಾಗಿ ತಿಳಿಸಿದೆ. ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಮಿಕ ಮುಷ್ಕರಕ್ಕೆ ಯಾವುದೇ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ.