Advertisement

ದ.ಕ., ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ

12:35 AM Sep 28, 2021 | Team Udayavani |

ಮಂಗಳೂರು/ಉಡುಪಿ: ಕೇಂದ್ರ ಸರಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಅಖೀಲ ಭಾರತ ರೈತರ ಸಂಯುಕ್ತ ಮೋರ್ಚಾ ನೀಡಿದ್ದ ಸೋಮವಾರದ ಭಾರತ ಬಂದ್‌ಗೆ ಕರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಬಸ್‌, ಆಟೋ ಸೇರಿದಂತೆ ವಾಹನಗಳ ಓಡಾಟ ಅಬಾಧಿತವಾಗಿತ್ತು. ಅಂಗಡಿ ಮುಂಗಟ್ಟುಗಳು, ಖಾಸಗಿ, ಸರಕಾರಿ ಸೇವಾ ಸಂಸ್ಥೆಗಳು ಕೂಡ ಎಂದಿನಂತೆ ಕಾರ್ಯನಿರ್ವಹಿಸಿದವು. ಮಂಗಳೂರಿನ ಕ್ಲಾಕ್‌ಟವರ್‌ ಬಳಿ ಬೆಳಗ್ಗೆ ಕೆಲ ಹೊತ್ತು ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರಕ್ಕೆ ಸ್ವಲ್ಪ ತೊಡಕಾಯಿತು.

ಪ್ರತಿಭಟನೆ
ಬಂದ್‌ ಬೆಂಬಲಿಸಿ ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಎಸ್‌ಡಿಪಿಐ ನೇತೃತ್ವದಲ್ಲಿ ಕ್ಲಾಕ್‌ಟವರ್‌ ಬಳಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಯಿತು. ಮಂಗಳೂರಿನ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಬಂದರು ಸಗಟು ಮಾರುಕಟ್ಟೆಯ ಕಾರ್ಮಿಕರ ಕಟ್ಟೆ ಬಳಿ ಪ್ರತಿಭಟನೆ ಜರಗಿತು.

ರಾಷ್ಟ್ರೀಯ ಹೆದ್ದಾರಿ ತಡೆ
ಬಂಟ್ವಾಳ: ಬಂದ್‌ ಕರೆಗೆ ಬೆಂಬಲ ಸೂಚಿಸಿ ದ.ಕ. ಜಿಲ್ಲಾ ರೈತ, ದಲಿತ, ಕಾರ್ಮಿಕ, ಜನಪರ ಚಳವಳಿಗಳ ಒಕ್ಕೂಟದ ವತಿಯಿಂದ ಬಿ.ಸಿ.ರೋಡಿನಲ್ಲಿ 5 ನಿಮಿಷಗಳ ಕಾಲ ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಯಿತು.

ಮಿನಿ ವಿಧಾನಸೌಧದ ಮುಂಭಾಗದಿಂದ ಪ್ರತಿಭಟನಾ ಜಾಥಾ ನಡೆಯಿತು.

Advertisement

ಇದನ್ನೂ ಓದಿ:ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಉಡುಪಿಯಲ್ಲಿ
ಉಡುಪಿ ಜಿಲ್ಲಾ ಕಾಂಗ್ರೆಸ್‌, ಜಿಲ್ಲಾ ಮುಸ್ಲಿಮ್‌ ಒಕ್ಕೂಟ, ಕಿಸಾನ್‌ ಘಟಕ, ಸಿಐಟಿಯು, ಪಿಎಫ್ಐ, ಎಸ್‌ಡಿಪಿಐ, ದಸಂಸ, ಸಾಲಿಡಾರಿಟಿ ಯೂತ್‌ ಮೂಮೆಂಟ್‌ ಸಹಿತ ಕೆಲವೊಂದು ಸಂಘಟನೆಗಳು ಬೆಂಬಲ ಸೂಚಿಸಿ ನಗರದ ಜೋಡುಕಟ್ಟೆಯಿಂದ ಅಜ್ಜರಕಾಡು
ಹುತಾತ್ಮ ಸ್ಮಾರಕದ ವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದವು.

ಹರತಾಳ: ಕಾಸರಗೋಡು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತ
ಕಾಸರಗೋಡು: ಕೇಂದ್ರ ಸರಕಾರದ ಕೃಷಿ ನೀತಿಯನ್ನು ಪ್ರತಿಭಟಿಸಿ ರೈತ ಸಂಘಗಳು ನೀಡಿದ ಭಾರತ್‌ ಬಂದ್‌ ಕರೆಯಂತೆ ಕಾಸರಗೋಡು ಜಿಲ್ಲೆಯಲ್ಲಿ ನಡೆದ ಹರತಾಳದಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳು ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಿ ದ್ದವು. ಎಡರಂಗ ಒಕ್ಕೂಟ ಹಾಗೂ ಕೆಲವು ಕಾರ್ಮಿಕ ಸಂಘಟನೆಗಳು ಹರತಾಳದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸರಕಾರಿ ಮತ್ತು ಖಾಸಗಿ ಬಸ್‌ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಜಿಲ್ಲೆಯಲ್ಲಿ ಅಂಗಡಿಗಳು ಬಹುತೇಕ ಮುಚ್ಚಿದ್ದವು.

ವಾಹನ ಸಂಚಾರಕ್ಕೆ ಅಡ್ಡಿ
ಮಂಜೇಶ್ವರ, ಕುಂಬಳೆ, ಕಾಸರಗೋಡು, ಬದಿಯಡ್ಕ, ಹೊಸದುರ್ಗ, ನೀಲೇಶ್ವರ ಸಹಿತ ಕೆಲವು ಕಡೆಗಳಲ್ಲಿ ಹರತಾಳ ಬೆಂಬಲಿಗರು ವಾಹನಗಳನ್ನು ತಡೆದ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next