Advertisement

ಸಿಸಿ ರಸ್ತೆ ಕಾಮಗಾರಿ ಮುಗಿಯೋದ್ಯಾವಾಗ?

12:55 PM Feb 09, 2020 | Naveen |

ಭರಮಸಾಗರ: ಅಳಗವಾಡಿ-ಓಬಳಾಪುರ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ನಡುವಿನ 400 ಮೀಟರ್‌ ಉದ್ದದ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿಸುವ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಜನರು ತೊಂದರೆ ಎದುರಿಸಬೇಕಾಗಿದೆ.

Advertisement

ಕಳೆದ ಎರಡು ತಿಂಗಳುಗಳ ಹಿಂದೆ ಇಲ್ಲಿನ ರಸ್ತೆಯನ್ನು 30 ಲಕ್ಷ ವೆಚ್ಚದಲ್ಲಿ 10 ಇಂಚು ದಪ್ಪನೆಯ 18 ಅಡಿ ಅಗಲದ ಸಿಸಿ ರಸ್ತೆಯನ್ನಾಗಿಸುವ ಕಾಮಗಾರಿ ಭರದಿಂದ ನಡೆದಿತ್ತು. ಕಾಮಗಾರಿ ಇನ್ನೇನು ಮುಗಿದೇ ಬಿಟ್ಟಿತು ಎಂದು ಜನರು ನಿಟ್ಟುಸಿರು ಬಿಡುವ ವೇಳೆಗೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದ ರಸ್ತೆಯ 400 ಮೀಟರ್‌ ಉದ್ದಕ್ಕೂ ಒಂದು ಹಂತದಲ್ಲಿ 9 ಅಡಿ ಅಗಲಕ್ಕೆ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಿದ್ದರೆ ಮತ್ತೂಂದು ಭಾಗದಲ್ಲಿ (9 ಅಡಿ) ಮೆಟಲಿಂಗ್‌ ಕಾಮಗಾರಿ ನಡೆಸಿ ಕಾಂಕ್ರಿಟ್‌ ಹಾಕದೆ ಕೈಬಿಡಲಾಗಿದೆ. ಇದರಿಂದ 400 ಮೀಟರ್‌ ರಸ್ತೆಯನ್ನು ಎರಡು ಭಾಗಗಳನ್ನಾಗಿ ಮಾಡಲಾಗಿರುವ ಈ ಅರೆಬರೆ ಕಾಮಗಾರಿಯಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಬೇಕಾಗಿದೆ. ಸಿಸಿ ರಸ್ತೆ ಎತ್ತರಿಸಿರುವ ಭಾಗಕ್ಕೂ ಇನ್ನೊಂದು ತಗ್ಗಿನ ಭಾಗದ ರಸ್ತೆಗೂ ಹತ್ತು ಇಂಚು ಅಂತರವಿದೆ. ಇದರಿಂದ ವಾಹನಗಳ ಓಡಾಟವನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ.

ಕಳೆದ ಎರಡು ತಿಂಗಳಿಂದ ರೈತರು ಕೆರೆಗಳಿಂದ ತೆಗೆದ ಹೂಳನ್ನು ಜಮೀನುಗಳಿಗೆ ಟ್ರಾÂಕ್ಟರ್‌ ಮತ್ತು ಲಾರಿಗಳ ಮೂಲಕ ಅರೆಬರೆ ಕಾಮಗಾರಿ ನಡೆದಿರುವ ಸಿಸಿ ರಸ್ತೆ ಮೂಲಕವೇ ಸಾಗಿಸುತ್ತಿದ್ದಾರೆ. ಅಲ್ಲದೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ನೂರಾರು ಹಳ್ಳಿಗಳನ್ನು ತಲುಪಲು ಈ ಮಾರ್ಗ ಹತ್ತಿರದ ಮಾರ್ಗವಾಗಿದೆ. ಹೀಗಾಗಿ ನಿತ್ಯ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಇದ್ದೇ ಇರುತ್ತದೆ.

ಇನ್ನಾದರೂ ಇಲ್ಲಿನ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಅಳಗವಾಡಿ, ಓಬಳಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರ ಆಗ್ರಹ.

ಯಕ್ಷಪ್ರಶ್ನೆಯಾದ ದಿಢೀರ್‌ ಸ್ಥಗಿತ
ಹಲವು ದಶಕಗಳಿಂದ ಇಲ್ಲಿನ ರಸ್ತೆ ಭೂ ವಿವಾದದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಣದೆ ಜನರು ರೋಸಿ ಹೋಗಿದ್ದರು. ಇನ್ನೇನು ಎಲ್ಲಾ ಸಮಸ್ಯೆಗಳು ಪೂರ್ಣಗೊಂಡು ರಸ್ತೆ ಸಿದ್ಧವಾಯ್ತು ಎನ್ನುವ ವೇಳೆಗೆ ಅದ್ಯಾವ ಗ್ರಹಣ ಕಾಮಗಾರಿಗೆ ಬಡಿಯಿತೋ ಗೊತ್ತಿಲ್ಲ. ಕಳೆದ ಎರಡು ತಿಂಗಳುಗಳಿಂದ ಕಾಮಗಾರಿ ಏಕಾಏಕಿ ಸ್ಥಗಿತಗೊಂಡಿದೆ. ಹೇಳಿ ಕೇಳಿ ಮಾರ್ಚ್‌ ಕೊನೆ ಬರುವ ವೇಳೆಗೆ ಎಲ್ಲಾ ಕಾಮಗಾರಿಗಳು ಚುರುಕು ಪಡೆಯುತ್ತವೆ. ಆದರೆ ಇಲ್ಲಿನ ಇಲ್ಲಿನ ಕಾಮಗಾರಿ ಮಾತ್ರ ಶುರುವಾಗಿ ದಿಢೀರ್‌ ಸ್ಥಗಿತಗೊಂಡಿರುವುದು ಯಕ್ಷಪ್ರಶ್ನೆಯಾಗಿದೆ.

Advertisement

„ಎಚ್‌.ಬಿ. ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next