ಭರಮಸಾಗರ: ಕಳೆದ ಒಂದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮೇಲ್ಛಾವಣಿ ಸೋರುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ.
ನಾನಾ ಕಾಯಿಲೆಗಳಿಂದ ಬಳಲುವ ರೋಗಿಗಳು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಆರೈಕೆಗೆ ವಾಡ್೯ಗಳಲ್ಲಿ ದಾಖಲಾಗುತ್ತಾರೆ.
ಆದರೆ ಇಲ್ಲಿನ ಸೋರುವ ವಾಡ್೯ಗಳ ಕಾರಣ ರೋಗಿಗಳು ಆಸ್ಪತ್ರೆಯಲ್ಲಿ ಇರಲಾಗದೆ ಮನೆಗಳಿಗೆ ಚಿಕಿತ್ಸೆ ಯು ಬೇಡ? ಏನು ಬೇಡ ಎಂದು ಓಡಿ ಹೋಗುವ ದುಸ್ಥಿತಿ ಬಂದೊದಗಿದೆ.
ಆಸ್ಪತ್ರೆಯ ಔಷಧ ಕೇಂದ್ರ, ಸ್ಕ್ಯಾನಿಂಗ್ ಸೆಂಟರ್, ಎಕ್ಸರೇ ರೂಂಗಳ ಮೇಲ್ಚಾವಣಿಯಲ್ಲಿ ನೀರು ತೊಟ್ಟಿಕ್ಕುತ್ತಿದೆ. ವಿದ್ಯುತ್ ಸಂಪರ್ಕದ ಸಾಧನಗಳ ಮೇಲೂ ಮಳೆ ನೀರು ಹರಿದಾಡುತ್ತಿದೆ. ಇದರಿಂದ ವಿದ್ಯುತ್ ಅವಘಡ ಗಳಿಗೂ ಆಹ್ವಾನ ನೀಡಿದಂತಾಗಿದೆ.
ವಾಡ್೯ಗಳಲ್ಲಿನ ಮಳೆ ನೀರಿನ ಸೋರುವಿಕೆ ನಿಮಿತ್ತ ರೋಗಿಗಳನ್ನು ಬೇರೆ ಕೊಠಡಿಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇನ್ನೂ ಆಸ್ಪತ್ರೆಯ ಮೇಲ್ಚಾವಣಿ ಸೋರುವಿಕೆ ಸೇರಿದಂತೆ ಇತರೆ ಹಲವು ಸಮಸ್ಯೆಗಳನ್ನು ಆರೋಗ್ಯ ಇಲಾಖೆ ತುರ್ತು ಪರಿಶೀಲಿಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.