ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ಮೆಕ್ಕೆಜೋಳಕ್ಕೆ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳ ಮೂಲಕ ಜೋಳ ಖರಿದೀಸುವ ಗೋಜಿಗೆ ಹೋಗದಿರುವ ಕಾರಣ ರೈತರು ಇದೀಗ ನೇರ ಮಾರುಕಟ್ಟೆಯ ದರಕ್ಕೆ ಜೋಳ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.
ಚಿತ್ರದುರ್ಗ ತಾಲೂಕಿನಲ್ಲಿ 30,685 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಕಳೆದ ವರ್ಷ ಬರಗಾಲ ಉಂಟಾಗಿ ಜೋಳ ಆವಕ ಇಲ್ಲದೆ ಹೋಗಿದ್ದರಿಂದ ಕ್ವಿಂಟಲ್‌ಗೆ 3000 ರೂ. ವರೆಗೆ ದರ ಏರಿಕೆ ಕಂಡಿತ್ತು. ಕಳೆದ ಆಗಸ್ಟ್ ತಿಂಗಳವರೆಗೂ ಕ್ವಿಂಟಲ್‌ಗೆ 2600, 2800, 2900 ರೂ. ಆಸುಪಾಸಿನಲ್ಲಿ ದರವಿತ್ತು. ಪ್ರಸಕ್ತ ವರ್ಷದ ಆರಂಭದಲ್ಲೆ ಹೊಸ ಜೋಳವನ್ನೇ 2200 ರೂ. ಗೆ ವ್ಯಾಪಾರಸ್ಥರು ಖರೀದಿಸಿದ್ದಾರೆ. ಇದೀಗ ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಕೆಲ ವಾರಗಳಲ್ಲಿ ಆದ ದರ ಪಟ್ಟಿ ಗಮನಿಸಿದರೆ 1650 ರೂ.ದಿಂದ ಗರಿಷ್ಠ ಧಾರಣೆ 1791 ರೂ. ಕನಿಷ್ಟ 1526 ರೂ. ಆಸುಪಾಸಿನಲ್ಲಿ ಮೆಕ್ಕೆಜೋಳ ದರ ಏರಿಳಿತ ಕಾಣುತ್ತಿದೆ.
ಇನ್ನೂ ಒಂದು ತಿಂಗಳು ಕಳೆಯುವ ವೇಳೆಗೆ ಮೆಕ್ಕೆಜೋಳ ಕಟಾವು ಮುಗಿದು ಮತ್ತಷ್ಟು ಮೆಕ್ಕೆಜೋಳ ಆವಕ ಮಾರುಕಟ್ಟೆ ಪ್ರವೇಶಿಸಲಿದೆ. ಈಗಿನ ದರ 1000, 1200, 1400ಕ್ಕೆ ಕುಸಿದರೆ ಹೇಗೆ ಎಂಬ ಚಿಂತೆ ರೈತರಲ್ಲಿ ಮನೆ ಮಾಡಿದೆ. ಕಳೆದ ಕೆಲ ವರ್ಷಗಳಲ್ಲಿ ಮೆಕ್ಕೆಜೋಳ ಬೆಳೆಯುವ ರೈತರು ಬೆಳೆಗೆ ಹಾಕುವ ಬಂಡವಾಳದಲ್ಲಿ ಹೆಚ್ಚಳವಾಗಿದೆ. ಎಕರೆಗೆ 20 ರಿಂದ 30, 35 ಸಾವಿರ ಖರ್ಚು ತಗಲುತ್ತದೆ. ಕ್ವಿಂಟಲ್ ಜೋಳಕ್ಕೆ ಕನಿಷ್ಟ 2000 ರೂ. ದೊರೆತರೆ ಒಂದಷ್ಟು ಬೆಳೆಗಾರರ ಸ್ಥಿತಿಗತಿ ಸುಧಾರಣೆ ಆಗುತ್ತದೆ. ಈ ನಡುವೆ ಈ ಬಾರಿಯ ಮಳೆ ಅವಾಂತರಗಳಿಂದ ಬೆಳೆ ನಷ್ಟ ಉಂಟಾಗಿದೆ. ಇಳುವರಿಯಲ್ಲಿ ಉಂಟಾದ ನಷ್ಟವನ್ನು ದರದಲ್ಲಿ ಆದರೂ ಸರಿದೂಗಿಸಿಕೊಳ್ಳಲು ಸರಕಾರದ ಬೆಂಬಲ ಬೆಲೆಯ ಭದ್ರತೆಯೂ ಇಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಕೇಂದ್ರ ಸರಕಾರ ಕಳೆದ ವರ್ಷ ಮೆಕ್ಕೆಜೋಳಕ್ಕಿದ್ದ ಬೆಂಬಲ ಬೆಲೆ 1710 ರೂ.ನ್ನು ಪ್ರಸಕ್ತ ವರ್ಷ 50 ರೂ.ಗಳನ್ನು ಸೇರಿಸಿ 1760 ರೂ. ಬೆಂಬಲ ಬೆಲೆ ಘೋಷಿಸಿದೆ. ಇದಕ್ಕೆ ಒಂದು ಷರತ್ತನ್ನು ವಿಧಿಸಿದೆ. ಅದೆನೆಂದರೆ ಮೆಕ್ಕೆಜೋಳವನ್ನು ಪಿಡಿಎಸ್ (ಸಾರ್ವಜನಿಕ ವಿತರಣಾ ವ್ಯವಸ್ಥೆ ) ಮೂಲಕ ಬಳಸುವುದಾದರೆ ಬೆಂಬಲ ಬೆಲೆಯ ಅನುಮತಿ ನೀಡುತ್ತದೆ ಎನ್ನಲಾಗುತ್ತದೆ. ನಮ್ಮಲ್ಲಿ ಮೆಕ್ಕೆಜೋಳವನ್ನು ಆಹಾರ ಧಾನ್ಯವನ್ನಾಗಿ ಬಳಕೆ ಮಾಡದೆ ಕೋಳಿ ಫಾರಂ ಮತ್ತು ಕ್ಯಾಟಲ್ ಫೀಡ್ ಗೆ ಮಾತ್ರ ಬಳಕೆ ಮಾಡಲಾಗುತ್ತದೆ. ರಾಜ್ಯ ಸರಕಾರ ಕೇಂದ್ರದ ಕಂಡಿಷನ್‌ಗೆ ಒಪ್ಪದೆ ಇರುವ ಕಾರಣ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಕಳೆದ ವರ್ಷ ರಾಜ್ಯದ ಪೌಲ್ಟ್ರಿ ಮಾಲೀಕರು ಬೇರೆ ರಾಜ್ಯಗಳಿಂದ ದುಬಾರಿ ದರಕ್ಕೆ ಮೆಕ್ಕೆಜೋಳ ಖರೀದಿಸಿದ್ದರು. ಹೀಗಾಗಿ ಪ್ರಸಕ್ತ ವರ್ಷ ಆರಂಭದಲ್ಲೇ ಪೌಲಿóಗಳವರು ಜೋಳವನ್ನು ಖರೀದಿಸಿ ಸಂಗ್ರಹಿಸಿಕೊಳ್ಳುವ ಧಾವಂತದಲ್ಲಿ ಇರುವ ಕಾರಣ ಈಗಿನ ಪ್ರಸ್ತುತ 1700 ರೂ. ಆಸುಪಾಸಿನ ದರ ಇಳಿಕೆ ಆಗದು ಎಂಬ ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಒಟ್ಟಾರೆ ಬೆಳೆದ ಬೆಳೆಗೆ ನಿಗದಿ ಬೆಲೆಯಿಲ್ಲದೆ ಬೆಳೆಗಾರರು ಆತಂಕದ ನಡುವೆ ಜೋಳ ಮಾರಾಟ ಮಾಡುತ್ತಿರುವುದು ಎಷ್ಟರಮಟ್ಟಿಗೆ ರೈತರನ್ನು ಆಳುವ ಸರಕಾರಗಳು ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.