Advertisement

ಭಂಕೂರ: ಬಂಡಿ ಓಡಿಸಿ ಕರಿ ಹರಿದರು

04:25 PM Jun 11, 2017 | Team Udayavani |

ಶಹಾಬಾದ: ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸುವುದು ಹಾಗೂ ಕರಿ ಹರಿಯುವ ವಿಶಿಷ್ಟ ಕಾರ್ಯಕ್ರಮ ಕಾರ ಹುಣ್ಣಿಮೆ ನಿಮಿತ್ತ ಶುಕ್ರವಾರ ರಾತ್ರಿ ಅಪಾರ ಭಕ್ತಾ ದಿಗಳ ಮಧ್ಯೆ ಸಂಭ್ರಮದಿಂದ ನಡೆಯಿತು. 

Advertisement

ಶುಕ್ರವಾರ ರಾತ್ರಿ 12:00 ಗಂಟೆಗೆ ದೇವಿ ಮೂರ್ತಿಯನ್ನು ದೇವಸ್ಥಾನದಿಂದ ಮೆರವಣಿಗೆ ಮುಖಾಂತರ ಕಾಗಿಣಾ ನದಿಗೆ ಕರೆದುಹೋಗಿ ಗಂಗಾಸ್ನಾನ ಮಾಡಿಸಲಾಯಿತು. ಬೆಳಗ್ಗೆ ಗ್ರಾಮದ ಅಗಸಿ ಮುಂಭಾಗದಲ್ಲಿ ದೇವಿಯ ಮೂರ್ತಿ ತಂದ ನಂತರ ಗ್ರಾಮಸ್ಥರು ಕಾಯಿ ಮತ್ತು ಕರ್ಪೂರ ಅರ್ಪಿಸಿದರು.

ನಂತರ ಮೂರ್ತಿಯನ್ನು ಮಂದಿರದಕ್ಕೆ ತಂದು ಮರುಸ್ಥಾಪಿಸಲಾಯಿತು. ತದನಂತರ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಅಂಕಲಮ್ಮ ಗುಡಿಯಿಂದ ಮೆರವಣಿಗೆ ಮುಖಾಂತರ ಬಂಡಿಯನ್ನು ದೇವಸ್ಥಾನಕ್ಕೆ ತರಲಾಯಿತು. ಕರಿಹರಿಯುವ ಬ್ರಾಹ್ಮಣ ಹಾಗೂ ಬಂಡಿ ಓಡಿಸುವ ಮಜ್ಜಿಗೆ ಮನೆತನದ ವ್ಯಕ್ತಿ ದೇವಿಯ ದರ್ಶನ ಪಡೆದರು. 

ಬಂಡಿ ಓಡಿಸಿ ಕರಿ ಹರಿದರು: ಕರಿ ಹರಿಯುವುದಕ್ಕಾಗಿ ಸುಮಾರು ದಿನಗಳಿಂದ ಜೋಡೆತ್ತುಗಳನ್ನು ಮೇಯಿಸಿ ಬಂಡಿಗೆ ಕಟ್ಟುತ್ತಾರೆ. ಅದರೂಳಗೆ ಖಡ್ಗದಾರಿಯಾದ ಕುಲಕರ್ಣಿ ಹಾಗೂ ಬಾರಕೋಲು ಹಿಡಿದ ಮಜ್ಜಿಗೆ ಮನೆತನದ ವ್ಯಕ್ತಿ ಪೂಜೆ ಸಲ್ಲಿಸಿ ಸಂಜೆ ಮಂದಿರದ ಗುಡ್ಡದಿಂದ ಬಂಡಿ ಓಡುವ ಮನಮೋಹಕ ದೃಶ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. 

ನಂತರ ಬಂಡಿ ಊರೊಳಗೆ ಪ್ರವೇಶಿಸಿ ಈಶ್ವರ ದೇವಸ್ಥಾನದ ಹತ್ತಿರ ಬಂದು ನಿಂತು ಅಗಸಿಗೆ ಕಟ್ಟಿದ ಸಿಂಗರಿಸಿದ ಹಗ್ಗವನ್ನು (ಕರಿ) ಹರಿಯುವ ರೋಮಾಂಚನ ದೃಶ್ಯ ನೋಡಲು ಸಾವಿರಾರು ಜನರು ನಿಂತಿದ್ದರು. ಖಡ್ಗದಾರಿಯಾದ ಕುಲಕರ್ಣಿ ಹಗ್ಗವನ್ನು ಕಡಿದಾಗ ಎಲ್ಲರೂ ಕರಿಹರಿಯಿತು ಎಂದು ಹರ್ಷೋದ್ಘಾರ ಮಾಡಿದರು. 

Advertisement

ಗ್ರಾಮದ ಮುಖಂಡರಾದ ಚನ್ನವೀರಪ್ಪ ಪಾಟೀಲ, ಶಶಿಕಾಂತ ಪಾಟೀಲ, ನೀಲಕಂಠರಾವ್‌ ಪಾಟೀಲ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಅಜೀತಕುಮಾರ ಪಾಟೀಲ, ಶರಣಬಸಪ್ಪ ಧನ್ನಾ, ಮಲ್ಲಿಕಾರ್ಜುನ ಪೂಜಾರಿ, ಮಹೇಶ ಧರಿ, ಪರಮೇಶ್ವರ ಖಾನಾಪುರ, ಲಕ್ಷ್ಮೀ ಕಂದಗೂಳ ಇತರರು ಪಾಲ್ಗೊಂಡಿದ್ದರು. ಎಲ್ಲ ಜಾತಿ ಜನಾಂಗದವರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದೇ ವಿಶೇಷ.

ದೂರದ ಆಂದ್ರಪ್ರದೇಶ, ಗುಜರಾತ, ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಶಹಾಬಾದ, ವಾಡಿ,ರಾವೂರ, ಮುತ್ತಗಿ, ಶಂಕರವಾಡಿ, ಭಂಕೂರ ವಾಡಾ, ತರಿತಾಂಡಾ, ತೆಗನೂರ ಮುಗುಳನಾಗಾಂವ, ನಂದೂರ, ಅಲ್ದಿಹಾಳ, ಪೇಠಸಿರೂರ, ಗೋಳಾ,ಮಾಲಗತ್ತಿ ಮುಂತಾದ ಗ್ರಾಮದ ಸಮಸ್ತ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆ ನಿಮಿತ್ತ ಸಿಪಿಐ ಅಸ್ಲಾಂಭಾಷಾ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next