ಮುಂಬಯಿ: ಭಂಡಾರಿ ಸೇವಾ ಸಮಿತಿ ಮುಂಬಯಿ ವತಿಯಿಂದ ಸೆ. 8ರಂದು ಡೊಂಬಿವಲಿ ಪೂರ್ವದ ರಘುವೀರ ನಗರದ ರೋಟರಿ ಸೇವಾ ಕೇಂದ್ರದ ಆರ್‌ಎಸ್‌ಕೆ ಸಭಾಗೃಹದಲ್ಲಿ ಆರೋಗ್ಯ ಮಾಹಿತಿ ಮತ್ತು ಮಾರ್ಗದರ್ಶನ ಶಿಬಿರ ನಡೆಯಿತು. ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಆರ್. ಎಂ. ಭಂಡಾರಿ ಹಾಗೂ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್. ಭಂಡಾರಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಆರ್. ಎಂ. ಭಂಡಾರಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿ, ಕೌನ್ಸಿಲರ್ ಆರ್. ವಿಜಯನ್ ಮತ್ತು ಹೆಸರಾಂತ ವೈದ್ಯಾಧಿಕಾರಿ ಡಾ| ಸುಜಾತಾ ಕೆ. ಭಂಡಾರೆ ಅವರು ಶಿಬಿರ ನಡೆಸಿ ಆರೋಗ್ಯ ಭಾಗ್ಯಕ್ಕೆ ಮತ್ತು ಸ್ವಸ್ಥ ಜೀವನಕ್ಕೆ ಕೆಲವೊಂದು ಸೂತ್ರಗಳನ್ನು ಹಾಗೂ ವಿವಿಧ ಕಾಯಿಲೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ರೋಗಗಳನು ತಡೆಗಟ್ಟಲು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಜತೆ ಕಾರ್ಯದರ್ಶಿ ನ್ಯಾಯವಾದಿ ಶಾಂತರಾಜ ಡಿ. ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ. ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ. ಭಂಡಾರಿ, ಕೇಶವ ಭಂಡಾರಿ ಸೇರಿದಂತೆ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿಬಿರಕ್ಕಾಗಿ ಸ್ಥಳವಕಾಶವನ್ನು ನೀಡಿದ ಸಮಾಜದ ಹಿರಿಯ, ಕೊಡುಗೈ ದಾನಿ ಭುಜಂಗ ವಿ. ಭಂಡಾರಿ, ಮಕ್ಕಳಿಗೆ ಬಹುಮಾನ ಪ್ರಾಯೋಜಿಸಿದ ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ್ ಡಿ. ಭಂಡಾರಿ ಹಾಗೂ ಲಘು ಉಪಾಹಾರ ನೀಡಿದ ಜತೆ ಕಾರ್ಯದರ್ಶಿಗಳಾದ ರಂಜಿತ್ ಎಸ್. ಭಂಡಾರಿ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು.
ಕಚ್ಚಾರು ಶ್ರೀ ನಾಗೇಶ್ವರ ದೇವರನ್ನು ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಪಾಧ್ಯಕ್ಷ ಪ್ರಭಾಕರ್ ಪಿ. ಭಂಡಾರಿ ಮತ್ತು ಥಾಣೆ ಮತ್ತು ಗೌರವ ಕೋಶಾಧಿಕಾರಿ ಕರುಣಾಕರ ಎಸ್. ಭಂಡಾರಿ ಅವರು ಸಹಕರಿಸಿದವರನ್ನು ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ್ ಡಿ. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಜಿ. ಭಂಡಾರಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೀರಿಯಲ್ ಕಲಾವಿದರುಗಳಾದ ಭರತ್ ಠಾಕೂರ್ ಹಾಗೂ ತೇಜಸ್ ರಜಪೂತ್ ಮಿಮಿಕ್ರಿಯೊಂದಿಗೆ ಸಭಿಕರನ್ನು ರಂಜಿಸಿದರು.