ಮುಂಬಯಿ: ಭಂಡಾರಿ ಮಹಾ ಮಂಡಲದ ನಿಯೋಗವು ಮಾ. 30 ರಂದು ಸಂಜೆ ಬೆಂಗಳೂರಿನ ಮುಖ್ಯಮಂತ್ರಿಗಳ ಸರಕಾರಿ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಗೈದು ಮೇ 8ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಬಾರ್ಕೂರಿನಲ್ಲಿ ನಡೆಸಲು ಉದ್ದೇಶಿಸಿರುವ ಭಂಡಾರಿ ಮಹಾ ಸಮಾವೇಶದ ಭವ್ಯ ಸಮಾರಂಭವನ್ನು ಉದ್ಘಾಟಿಸುವಂತೆ ವಿನಂತಿಸಿ ಆಹ್ವಾನವನ್ನು ನೀಡಿತು.
ಭಂಡಾರಿ ಮಹಾ ಮಂಡಲದ ಸಂಸ್ಥಾಪಕಾಧ್ಯಕ್ಷ, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚಾರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಿ ಜಗತ್ತಿನಾದ್ಯಂತ ಪಸರಿರುವ ಭಂಡಾರಿ ಸಮುದಾಯವು ತನ್ನ ಕುಲದೇವರನ್ನು ಆರಾಧಿಸಿರುವ ಅಂದಾಜು ಒಂಭತ್ತು ಶತಮಾನಗಳ ಇತಿಹಾಸವುಳ್ಳ ಕಚ್ಚಾರು ಶ್ರೀ ನಾಗೇಶ್ವರ ದೇವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಸಿದ್ಧತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಯು. ಟಿ. ಖಾದರ್ ರಿಪೋರ್ಟರ್ ಗಿಲ್ಡ್ ಅಧ್ಯಕ್ಷ, ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ. ವಿ. ಪ್ರಭಾಕರನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ ದಿನೇಶ್ ಅಮೀನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು. ಅಂತೆಯೇ ಸೊರಬ ಕ್ಷೇತ್ರದ ಶಾಸಕ, ಜಾತ್ಯತೀತ ಜನತಾದಳ (ಜೆಡಿಎಸ್ ಪಕ್ಷ) ನೇತಾರ ಎಸ್. ಮಧು ಬಂಗಾರಪ್ಪ, ಬೆಂಗಳೂರಿನ ಉದ್ಯಮಿ ವಿ. ಕೆ. ಮೋಹನ್ (ಕಪಾಲಿ ಮೋಹನ್) ಅವರನ್ನೂ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಮಹಾ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಮತ್ತು ಸವಿತಾ ಮಾರ್ಗದರ್ಶಿ ಮಾಸಿಕದ ಸಂಪಾದಕ ಸೋಮಶೇಖರ ಎಂ. ಭಂಡಾರಿ, ಉತ್ಸವ ಸಮಿತಿಯ ಅಧ್ಯಕ್ಷ ಡಾ| ಶಿವರಾಮ ಕೆ. ಭಂಡಾರಿ, ಪತ್ರಕರ್ತ ಸೋಮಶೇಖರ್ ಪಿ. ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ – ವರದಿ: ರೋನ್ಸ್ ಬಂಟ್ವಾಳ್