ಭಾಲ್ಕಿ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ತಜ್ಞರ ವರದಿಯನ್ನು ಕೇಂದ್ರಕ್ಕೆ ಸಿಫಾರಸು ಮಾಡುವ ಕುರಿತು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸೋಮವಾರ ಲಿಂಗಾಯತ ಅನುಯಾಯಿಗಳು, ಬಸವಾಭಿಮಾನಿಗಳು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಿರಿಯ ಸ್ವಾಮೀಜಿ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ನೂರಾರು ಬಸವಾಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಶ್ರೀಗಳು ಮಾತನಾಡಿ, ತಜ್ಞರ ವರದಿ ಜಾರಿಗೆ ಕೇಂದ್ರಕ್ಕೆ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಐತಿಹಾಸಿಕ ನಿರ್ಣಯ ಕೈಗೊಂಡಿರುವುದು ಶ್ಲಾಘನೀಯ.
ಕೂಡಲೇ ಕೇಂದ್ರ ಸರಕಾರವೂ ಮಾನ್ಯತೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶ್ರೀಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ, ಲಿಂಗಾಯತ ಸಮನ್ವಯ ಸಮಿತಿಯ ಪ್ರಮುಖರಾದ ಕಿರಣ ಖಂಡ್ರೆ, ಜಗದೀಶ ಖಂಡ್ರೆ, ಶ್ರೀಕಾಂತ ಭೋರಾಳೆ, ಸಿದ್ರಾಮಪ್ಪ ವಂಕೆ, ಗಣಪತಿ ಬೋಚರೆ, ಅಮಿತ ಅಷ್ಟೂರೆ, ಆಕಾಶ ರಿಕ್ಕೆ, ಜಯರಾಜ ಪಾತ್ರೆ, ನಾಗಶೆಟೆಪ್ಪ ಲಂಜವಾಡೆ, ಸಂಗಪ್ಪ ಟೋಪಾರೆ, ನಾಗೇಶ ತಮಾಸಂಗೆ, ವಿಜಯಕುಮಾರ ವಾಲೆ, ಬಸವರಾಜ ವಾಲೆ, ಜಯರಾಜ ಕೊಳ್ಳಾ, ಘನಲಿಂಗ ರುದ್ರಸ್ವಾಮಿ, ಸುನಿಲ ವಲಂಡೆ, ಸುಭಾಷ ಮಾಶೆಟ್ಟೆ, ಮಲ್ಲಿಕಾರ್ಜುನ ಡೋಣಗಾಪುರೆ, ದೀಪಕ, ನಂದಕುಮಾರ ಬಕ್ಕಾ ಪಾಲ್ಗೊಂಡಿದ್ದರು.