ಭಾಲ್ಕಿ: ತಾಲೂಕಿನ ಕಣಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಒಬ್ಬ ವಿದ್ಯಾರ್ಥಿ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾನೆ.
ಕೋವಿಡ್-19 ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳ ಕೇಂದ್ರಗಳ ವಿದ್ಯಾರ್ಥಿಗಳಿಗೆ ಅವರಿರುವ ಗ್ರಾಮದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿಯಂತೆ ಬೇರೆ ಜಿಲ್ಲೆಯ ಮೂಗ, ಕಿವುಡ ವಿದ್ಯಾರ್ಥಿಯ ಅರ್ಥಶಾಸ್ತ್ರ ಪರೀಕ್ಷೆ ಶುಕ್ರವಾರ ನಡೆಯಿತು. ಕಣಜಿ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾನೆ. ಈ ವಿದ್ಯಾರ್ಥಿ ಒಬ್ಬನಿಗಾಗಿಯೇ ತಾಲೂಕು ಆಡಳಿತ ಸಂಪೂರ್ಣ ಕಾರ್ಯೋನ್ಮುಖವಾಗಿತ್ತು.
ಬೆಳಗ್ಗೆ 7 ಗಂಟೆಗೆ ಉಪ ಖಜಾನೆ ಅಧಿಕಾರಿ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಮಾರ್ಗಅಧಿಕಾರಿಗಳ ಮೂಲಕ ರವಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕ, ಪ್ರಶ್ನೆಪತ್ರಿಕೆ ಪಾಲಕ, ಸ್ಥಾನಿಕ ಜಾಗೃತದಳ ಅಧಿಕಾರಿ, ಪರೀಕ್ಷಾ ನೋಡಲ್ ಅಧಿಕಾರಿ, ಪರೀಕ್ಷಾ ಕೊಠಡಿ ಮೇಲ್ವಿಚಾರಕ ಸೇರಿದಂತೆ ಇತರರು ಪರೀಕ್ಷೆ ಮುಗಿಯುವವರೆಗೆ ಕರ್ತವ್ಯ ನಿರ್ವಹಿಸಿದರು.
ನಮ್ಮ ತಾಲೂಕಿನಲ್ಲಿ ಪ್ರಸ್ತುತ ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಲ್ಲ. ಆದರೂ ಬೇರೆ ಜಿಲ್ಲೆಯ ವಿದ್ಯಾರ್ಥಿ ನಮ್ಮ ತಾಲೂಕಿನ ಪರೀಕ್ಷಾ ಕೇಂದ್ರಕ್ಕೆ ವಲಸೆ ಬಂದಿದ್ದರಿಂದ ಆ ಒಬ್ಬನೇ ವಿದ್ಯಾರ್ಥಿಗಾಗಿ ಪರೀಕ್ಷೆ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷೆ ನಡೆಸಲಾಗಿದೆ.
ಸಿದ್ದವೀರಯ್ನಾ ರುದನೂರ,
ಕ್ಷೇತ್ರ ಶಿಕ್ಷಣಾಧಿಕಾರಿ, ಭಾಲ್ಕಿ