Advertisement

ಭಾಲ್ಕಿ ವಸತಿ ಅಕ್ರಮ; ಮರು ತನಿಖೆ

05:18 PM Feb 12, 2021 | Team Udayavani |

ಬೀದರ: ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿರುವ ಭಾಲ್ಕಿ ತಾಲೂಕಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಅಕ್ರಮ ಪ್ರಕರಣದ
ಬಗ್ಗೆ ಮರು ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಮತ್ತೂಂದು ಹೊಸ ತಿರುವು ಪಡೆಯುವ ಸಾಧ್ಯತೆ ದಟ್ಟವಾಗಿದೆ.

Advertisement

ಭಾಲ್ಕಿ ತಾಲೂಕಿನಲ್ಲಿ 2015-16 ರಿಂದ 2018-19ರವರೆಗೆ ವಿವಿಧ ವಸತಿ ಯೋಜನೆಗಳಡಿ ಮನೆ ಹಂಚಿಕೆಯಲ್ಲಿ ಗೋಲ್‌ಮಾಲ್‌ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕೆಂದು 2019ರ ಡಿ. 22ರಂದು ಭಾಲ್ಕಿಗೆ ಆಗಮಿಸಿದ್ದ ವಸತಿ ಸಚಿವರಿಗೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಸಚಿವರು ವಿಚಾರಣೆಗೆ ಆದೇಶಿಸಿದ್ದರು. ಅದರಂತೆ ರಾಜೀವ್‌ ಗಾಂಧಿ  ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕರ ನೇತೃತ್ವದ ತಂಡ ಕ್ಷೇತ್ರದಲ್ಲಿ ಸುತ್ತಾಡಿ ತನಿಖೆ ನಡೆಸಿ,
ವರದಿ ಸಲ್ಲಿಸಿತ್ತು. ತಾಲೂಕಿನಲ್ಲಿ 8 ಸಾವಿರಕ್ಕೂ ಅಧಿಕ ಮನೆಗಳು ನಿಯಮಬಾಹಿರ ಹಂಚಿಕೆ ಮಾಡಲಾಗಿದ್ದು, ಸುಮಾರು 91 ಕೋಟಿ ವಸೂಲಿ ಸೇರಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಇತ್ತೀಚೆಗಷ್ಟೇ ಗ್ರಾಪಂ 7 ಪಿಡಿಒಗಳನ್ನು ಅಮಾನತು ಮಾಡಲಾಗಿತ್ತು.

ಜಿಲ್ಲೆಯಲ್ಲಿ ಸದ್ದು ಮಾಡುತ್ತಿದ್ದ ಭಾಲ್ಕಿ ಮನೆ ಹಂಚಿಕೆ ಅವ್ಯವಹಾರ ಕಳೆದ ವಾರ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಧ್ವನಿಸಿತ್ತು. ವಸತಿ ಸಚಿವ ವಿ. ಸೋಮಣ್ಣ ಮತ್ತು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರಲ್ಲದೇ ತನಿಖೆಗೆ ಸದನ ಸಮಿತಿ ರಚನೆಗೆ ಒತ್ತಾಯಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಈಗ ಸರ್ಕಾರ ಹಿಂದಿನ ತನಿಖೆ ಮೇಲೆಯೇ ಮರು ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಆದೇಶಿಸಿರುವುದು,
ವಸತಿ ಗೋಲ್‌ಮಾಲ್‌ ಪ್ರಕರಣ ಎತ್ತ ಕೊಂಡೊಯ್ಯಬಹುದು ಎಂದು ಕುತೂಹಲ ಮೂಡಿಸಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಿ ಭಾಲ್ಕಿ ತಾಲೂಕಿನ ವಸತಿ ಹಂಚಿಕೆ ಬಗ್ಗೆ ಪುನರ್‌ ಪರಿಶೀಲನೆ
ನಡೆಸಿ ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದೆ. ಇದಕ್ಕಾಗಿ ಡಿಸಿ ರಾಮಚಂದ್ರನ್‌ 65 ಅಧಿ ಕಾರಿಗಳ ಪ್ರತ್ಯೇಕ ತಂಡ ರಚಿಸಿದ್ದಾರೆ. ತಂಡದ ಸದಸ್ಯರು ಭಾಲ್ಕಿ ಪಟ್ಟಣ ಮತ್ತು ಎಲ್ಲ 40 ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಮನೆ ಹಂಚಿಕೆ ಭೌತಿಕ ತಪಾಸಣೆ ನಡೆಸಲಿದ್ದಾರೆ. ಶುಕ್ರವಾರದಿಂದಲೇ ಮರು ತನಿಖೆ ಆರಂಭವಾಗುವ ಸಾಧ್ಯತೆ ಇದೆ.

ವಸತಿ ಹಗರಣದ ಮರು ತನಿಖೆ ಆದೇಶದಿಂದಾಗಿ ಸದ್ಯ ಕ್ರಮದ ಭೀತಿಯಿಂದ ಆತಂಕಕ್ಕೆ ಸಿಲುಕಿದ್ದ ಭಾಲ್ಕಿ ತಾಲೂಕಿನ 40 ಗ್ರಾಪಂಗಳ 76 ಪಿಡಿಒಗಳಿಗೆ ರಿಲೀಫ್‌ ಸಿಕ್ಕಂತಾಗಿದೆ. ಇತ್ತೀಚೆಗೆ 7 ಪಿಡಿಒಗಳನ್ನು ಅಮಾನತು ಮಾಡಲಾಗಿತ್ತು. ಈಗ ಮರು ತನಿಖಾ ವರದಿ ಸಲ್ಲಿಕೆಯಾದ ನಂತರವೇ ಮುಂದಿನ ಕ್ರಮದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next