Advertisement

ಲಾಕ್‌ಡೌನ್‌ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ

03:45 PM Apr 12, 2020 | Naveen |

ಭಾಲ್ಕಿ: ಕೊರೊನಾ ಸೋಂಕು ತಡೆಗೆ ಸರ್ಕಾರ ಹೊರಡಿಸಿರುವ ಲಾಕ್‌ಡೌನ್‌ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ಕೊರೊನಾ ತಡೆ ಕುರಿತು ಶನಿವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶಾದ್ಯಂತ ವ್ಯಾಪಿಸಿರುವ ಕೊರೊನಾ ತಡೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಸಕ್ರಿಯವಾಗಿ ತೊಡಗಿಸಿಕೊಂಡು ಪ್ರತಿದಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗಾಗಿ ಕೊರೊನಾ ವ್ಯಾಪಕವಾಗಿ ಹರಡಂತೆ ಎಚ್ಚರ ವಹಿಸಬೇಕಿದೆ ಎಂದರು.

ಬೀದರ್‌ನಲ್ಲಿ ಹೊಸದಾಗಿ ಮತ್ತೂಂದು ಕೊರೊನಾ ಪಾಸಿಟಿವ್‌ ಕಾಣಿಕೊಂಡಿದ್ದು ಸೋಂಕಿತರ ಸಂಖ್ಯೆ 11ಕ್ಕೇರಿದೆ. ಸೋಂಕು ನಿಯಂತ್ರಣಕ್ಕೆ ಬರಬೇಕಾದರೆ, ಪ್ರತಿಯೊಬ್ಬರೂ ಸರ್ಕಾರದ ಆದೇಶ ಪಾಲಿಸಿ ಮನೆಯಲ್ಲಿಯೇ ಇರಬೇಕು. ಪಟ್ಟಣ ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಆದ್ದರಿಂದ ಇನ್ಮುಂದೆ ಹಾಗಾಗದಂತೆ ಎಚ್ಚರ ವಹಿಸಿ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ. ತುರ್ತು ಸಂದರ್ಭ ಹೊರತು ಪಡಿಸಿ, ಅನಗತ್ಯವಾಗಿ ಬೈಕ್‌, ಕಾರುಗಳ ಓಡಾಟ ಕಂಡುಬಂದರೆ ವಶಕ್ಕೆ ಪಡೆಯಬೇಕೆಂದು ಸೂಚಿಸಿದರು.

ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಕೊರೊನಾ ಸೋಂಕು 14 ದಿನ ಹೋಮ್‌ ಕ್ವಾರಂಟೈನ್‌ ಪೂರ್ಣಗೊಳಿಸಿದವರಲ್ಲೂ ಕಂಡು ಬರುತ್ತಿದೆ. ಸೋಂಕು ಹರಡುವಿಕೆ ನಿರ್ದಿಷ್ಟವಾಗಿ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿದೇಶ, ಹೊರ ರಾಜ್ಯ, ಜಿಲ್ಲೆ ಸೇರಿದಂತೆ ಮುಂತಾದ ಕಡೆಗಳಿಂದ ಬಂದ ಶಂಕಿತರನ್ನು ಗುರುತಿಸಿ ಕನಿಷ್ಠ 28 ದಿನ ಹೋಮ್‌ ಕ್ವಾರಂಟೈನ್‌ನಲ್ಲಿರಿಸಿ ನಿಗಾ ವಹಿಸಬೇಕು. ಪಟ್ಟಣದ 100 ಹಾಸಿಗೆ ಆಸ್ಪತ್ರೆಯಲ್ಲಿ 3 ವೆಂಟಿಲೇಟರ್‌ ಮಾತ್ರ ಇದ್ದು, ಇನ್ನೂ ಐದು ಒದಗಿಸಬೇಕು. ಶಂಕಿತರ ತಪಾಸಣೆಗಾಗಿ ಸ್ಯಾಂಪಲ್‌ ಸಂಗ್ರಹಿಸುವ ಕಿಟ್‌ ಇಲ್ಲ. ಇದಕ್ಕೆ ಬೀದರಿಗೆ ಕಳುಹಿಸಬೇಕು. ಇನ್ನೂ 100 ತಪಾಸಣಾ ಸ್ಯಾಂಪಲ್‌ ಕಿಟ್‌ ಒದಗಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಮಾರುತಿರಾವ ಮಗರ್‌, ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ್‌, ತಾಲೂಕು ಆರೋಗ್ಯ ಅಧಿಕಾರಿ ಡಾ| ಜ್ಞಾನೇಶ್ವರ ನಿರಗುಡೆ, ತಾಪಂ ಇಒ ಬಸವರಾಜ ನಾಯಕರ್‌, ಡಿವೈಎಸ್ಪಿ ಡಾ| ದೇವರಾಜ. ಬಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next