ಭಾಲ್ಕಿ: ಖಟಕ ಚಿಂಚೋಳಿ ಗ್ರಾಮದ ಹೊರ ವಲಯದಲ್ಲಿರುವ ಹುಲಿಕುಂಟಿ ಶ್ರೀ ಶಾಂತಲಿಂಗೇಶ್ವರ ಮಠವು ಐತಿಹಾಸಿಕ ಪರಂಪರೆಯುಳ್ಳ ಮಠವಾಗಿದೆ. ಮಠದ ಸುತ್ತಲಿನ ಪರಿಸದರಲ್ಲಿ ಗುಡ್ಡಗಾಡು ಪ್ರದೇಶವಿದ್ದು ಅಲ್ಲಿ ಅನೇಕ ಆಯುರ್ವೇದ ಔಷಧೀಯ ಮರಗಳಿವೆ.
Advertisement
ಸುಮಾರು 15ನೇ ಶತಮಾನದಲ್ಲಿ ಖಟಕಚಿಂಚೋಳಿಯಲ್ಲಿ ಸುಮಾರು ಐದು ಮಠಗಳನ್ನು ಸ್ಥಾಪಿಸಲಾಗಿತ್ತು ಎನ್ನುವ ಪ್ರತೀತಿ ಇದೆ. ಅವುಗಳಲ್ಲಿ ಹುಲಿಕುಂಟಿಯ ಶ್ರೀ ಶಾಂತಲಿಂಗೇಶ್ವರ ಮಠವು ಅತ್ಯಂತ ಪ್ರಸಿದ್ಧಿ ಪಡೆದಿದೆ. ಇವತ್ತಿಗೂ ಖಟಕಚಿಂಚೋಳಿಯಲ್ಲಿರುವ ಹುಗ್ಗೆಳ್ಳಿ ಹಿರೇಮಠ, ಚೌಕಿ ಮಠ, ಕೋರಿಕಾಂತ ಮಠ, ಪರ್ವತ ಮಠಗಳಲ್ಲಿ ಗ್ರಾಮದಿಂದ ಸುಮಾರು 1.5 ಕಿ.ಮೀ. ದೂರದಲ್ಲಿರುವ ಹುಲಿಕುಂಟಿಯ ಶ್ರೀ ಶಾಂತಲಿಂಗೇಶ್ವರ ಮಠವು ವಿಶೇಷತೆ ಹೊಂದಿದೆ.
Related Articles
Advertisement
ಪ್ರಾಚೀನ ಶರಣರಾದ ಅಲ್ಲಮ ಪ್ರಭುಗಳು, ಶ್ರೀ ರೇವಣಸಿದ್ದೇಶ್ವರರು, ಶ್ರೀ ಮಾಣಿಕ ಪ್ರಭುಗಳು, ನಾವದಗಿಯ ಶ್ರೀ ರೇವಪ್ಪಯ್ನಾ ಶಿವಶರಣರು ತಪಸ್ಸು ಮಾಡಿದ ಪುಣ್ಯ ಭೂಮಿ ಇದಾಗಿದೆ. ಹುಲಿಕುಂಠಿ ಮಠದ ಶ್ರೀ ಶಾಂತಲಿಂಗೇಶ್ವರ ದೇವರು, ನಾಡಿನ ಹಲವಾರು ಮನೆತನಗಳ ಮನೆ ದೇವರಾಗಿದ್ದಾರೆ. ಹೀಗಾಗಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಿಂದ ಭಕ್ತಾದಿಗಳು ಈ ಮಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವರು.
ಇಲ್ಲಿಯ ಅರಣ್ಯ ಪ್ರದೇಶದ ರಕ್ಷಣೆ ಇಲ್ಲದ ಕಾರಣ ಇಲ್ಲಿಯ ಹಲವಾರು ಗಿಡ ಮರಗಳನ್ನು ಕಡಿದು, ಆಯುರ್ವೇದ ಮರಗಳ ಮಾರಣ ಹೋಮ ನಡೆಯುತ್ತಿದೆ. ಕಾರಣ ಸರ್ಕಾರ ಇತ್ತ ಗಮನ ಹರಿಸಿ ಇಲ್ಲಿಯ ಮಣ್ಣು ಮತ್ತು ಗಿಡಗಳ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಭಕ್ತಾದಿಗಳ ಆಶಯವಾಗಿದೆ.