•
ಜಯರಾಜ ದಾಬಶೆಟ್ಟಿ
ಭಾಲ್ಕಿ: ನಿಟ್ಟೂರ(ಬಿ) ಹೋಬಳಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಹಜನಾಳ ಗ್ರಾಮದ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ತಾಲೂಕು ಕೆಂದ್ರ ಭಾಲ್ಕಿ ಮತ್ತು ಹೋಬಳಿ ಪ್ರದೇಶವಾದ ನಿಟ್ಟೂರ(ಬಿ)ನಿಂದ ಹಜನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಸುಮಾರು ವರ್ಷಗಳಿಂದ ಇದು ಕಚ್ಚಾ ರಸ್ತೆಯಾಗಿಯೇ ಉಳಿದಿದ್ದು, ಮಳೆಗಾಲ ಬಂತೆಂದರೆ ಇಲ್ಲಿ ಸಂಚರಿಸಲು ಹರ ಸಾಹಸ ಪಡಬೇಕಾಗುತ್ತದೆ.
ಶಾಸಕ ಈಶ್ವರ ಖಂಡ್ರೆ ಅವರ ಮುತುವರ್ಜಿಯಿಂದ ತಾಲೂಕಿನ ಮುಖ್ಯ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳು ಉತ್ತಮವಾಗಿದ್ದು, ನಿಟ್ಟೂರ(ಬಿ)ಯಿಂದ ಹಜನಾಳ ವರೆಗಿನ ರಸ್ತೆಮಾತ್ರ ದುರುಸ್ತಿ ಕಂಡಿಲ್ಲ. ಶಾಸಕ ಈಶ್ವರ ಖಂಡ್ರೆಯವರು ವಿವಿಧ ಅನುದಾನಗಳಲ್ಲಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳನ್ನೂ ನಿರ್ಮಿಸಿ ಮಾದರಿ ತಾಲೂಕನ್ನಾಗಿ ಮಾಡಿದ್ದಾರೆ. ಆದರೆ ಈ ಹಜನಾಳ ಗ್ರಾಮದ ರಸ್ತೆ ಮಾತ್ರ ಇದುವರೆಗೆ ದುರಸ್ತಿ ಕಾಣದಿರುವುದಕ್ಕೆ ಇಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಲಿದೆ.
ನಿಟ್ಟೂರ(ಬಿ) ಯಿಂದ ಹಜನಾಳಕ್ಕೆ ಹೋಗುವ ಸುಮಾರು 3 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಯಾವುದೇ ವಾಹನಗಳು ಈ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತವೆ. ಹೀಗಾಗಿ ಗ್ರಾಮಸ್ಥರು ತಮ್ಮ ಗ್ರಾಮದಿಂದ ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಿಗೆ ಯಾವುದೇ ಕೆಲಸಕ್ಕೆ ಬರಬೇಕಾದರೆ ಹರ ಸಾಹಸ ಪಡಬೇಕಾಗಿದೆ.
ಈ ರಸ್ತೆಯಲ್ಲಿ ಬೀದರ ಮಾರ್ಗದ ಎರಡು ಬಸ್‌ಗಳು ಸಂಚರಿಸುತ್ತವೆ. ಜತೆಗೆ ಖಾಸಗಿ ವಾಹನಗಳ ಓಡಾಟವೂ ಹೆಚ್ಚಿದೆ. ಆದರೆ ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲಿ ತಗ್ಗು ಗುಂಡಿಗಳಿರುವುದರಿಂದ ವಾಹನಗಳು ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಹೀಗಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕೂಡ ತಮ್ಮ ಶಾಲೆಗೆ ಸಕಾಲಕ್ಕೆ ಹಾಜರಾಗದೇ ತರಗತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಹಜನಾಳ ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಸಕರು ಎಲ್ಲಾ ಗ್ರಾಮಗಳ ರಸ್ತೆ ಸುಧಾರಣೆ ಮಾಡಿದ್ದಾರೆ. ಹಜನಾಳ ಗ್ರಾಮದ ರಸ್ತೆ ಸುಧಾರಣೆ ಮಾತ್ರ ಮರಿಚೀಕೆಯಾಗಿದೆ. ಇನ್ನು ಮುಂದಾದರೂ ಯಾವುದಾದರೂ ಅನುದಾನದಲ್ಲಿ ಈ ಗ್ರಾಮಕ್ಕೂ ಉತ್ತಮ ರಸ್ತೆಯ ಭಾಗ್ಯ ಬರುವುದೋ ಕಾದು ನೋಡಬೇಕಿದೆ.
ಈ ಹಿಂದೆ ರಸ್ತೆ ದುರಸ್ತಿಗಾಗಿ ಮತ್ತು ಪಕ್ಕಾ ರಸ್ತೆ ನಿರ್ಮಿಸಲು ಗ್ರಾಮಸ್ಥರು ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರು ಸಂಬಂಧಪಟ್ಟವರು ಇತ್ತ ಗಮನ ಹರಿಸಿ ನಮ್ಮ ಗ್ರಾಮದ ನಾಗರಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ.
•
ರಾಜಕುಮಾರ ಹಜನಾಳ,
ಸರ್ಕಾರಿ ನೌಕರರ ಸಂಘದ ನಿರ್ದೇಶಕ