Advertisement

ಭಕ್ತಿರಸದ ಧನಶ್ರೀ ನೃತ್ಯ, ಹಾಸ್ಯರಸದ ಕಿಸ್ನ ಸಂಧಾನ 

06:00 AM Apr 06, 2018 | Team Udayavani |

ದೇವಾನುದೇವತೆಗಳನ್ನು ನೃತ್ಯ ಸಂಗೀತದ ಮೂಲಕ ಭಜಿಸುವ, ವಂದಿಸುವ, ಆರಾಧಿಸುವ ಧಾರ್ಮಿಕ ಮಹತ್ವ ಮತ್ತು ಕಲಾ ಸೊಬಗನ್ನು ಹೊಂದಿದ ಭರತನಾಟ್ಯ ಮತ್ತು ಕಥಕ್ಕಳಿ ಒಂದೇ ವೇದಿಕೆಯಲ್ಲಿ ಕಾಣ ಸಿಗುವುದು ಅಪರೂಪ. ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸನ್ನಿಧಿಯಲ್ಲಿ ನಡೆದ ಶತಚಂಡಿಕಾಯಾಗದ ಸಂದರ್ಭದಲ್ಲಿ ಆಯೋಜಿಸಲ್ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧನಶ್ರೀ ಮೋಹನ್‌ ಉಡುಪಿ ಅವರು ಭರತನಾಟ್ಯ ಮತ್ತು ಕಥಕ್‌ ಶೈಲಿಯಲ್ಲಿ ನೃತ್ಯ ಸೇವೆ ನಡೆಸಿ ಕಲಾಭಿಮಾನಿಗಳಲ್ಲಿ ಭಕ್ತಿ ರಸ ಹರಿಸಿದರು. ಪ್ರಾರಂಭದಲ್ಲಿ ಭರತನಾಟ್ಯ ನೃತ್ಯ ಸೇವೆಗೈದ ಧನಶ್ರೀ ನಟರಾಜನಿಗೆ, ದೇವಾನುದೇವತೆಗಳಿಗೆ ವಂದಿಸುವ ಪುಷ್ಪಾಂಜಲಿ ನೃತ್ಯ ಮತ್ತು ನಂತರ ಶಿವಪಾರ್ವತಿಯರ ದ್ವಿತೀಯ ಪುತ್ರ ನಾಗರೂಪಿ ಸ್ಕಂದನನ್ನು ಸ್ತುತಿಸುವ ಸುಬ್ರಹ್ಮಣ್ಯ ಕವಿತ್ಯಂ ನಾಟ್ಯ ಪ್ರಸ್ತುತಪಡಿಸಿದರು. ಅದೇ ವೇದಿಕೆಯಲ್ಲಿ ಭರತನಾಟ್ಯದಷ್ಟೇ ಸೊಗಸಾಗಿ ಕಥಕ್‌ ಶೈಲಿಯಲ್ಲಿ ನಾದ ಪ್ರಿಯ ಗಣಪನನ್ನು ವಂದಿಸುವ ಸದ್ಬುದ್ಧಿ, ಸದ್ಭಕ್ತಿ ದಯಪಾಲಿಸುವಂತೆ ಬೇಡುವ ಗಣಪತಿ ಮೂರತ್‌ ಪ್ರಸ್ತುತಿ ಪಡಿಸಿದಾಗ ವೀಕ್ಷಕರು ನಿಬ್ಬೆರಗಾದರು. ಕೊನೆಯದಾಗಿ ಮೊಗಲ್‌ ಶೈಲಿಯಲ್ಲಿ ಸಂಯೋಜಿಸಿದ ವಿಶಿಷ್ಟ ಕಾಲಿನ ಚಲನೆಯ ದರ್ಬಾರಿ ತರಾನ್‌ ಪ್ರದರ್ಶಿಸಿದರು.

Advertisement

ಉಡುಪಿಯ ಬೈಲೂರಿನ ಕೆ. ಮೋಹನ್‌ ಮತ್ತು ಫ‌ಮೀದ್‌ ಬೇಗಂ ಅವರ ಪುತ್ರಿಯಾದ ಧನಶ್ರೀ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲಾ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಭೂಮಿಗೀತ ಕಲಾತಂಡದಲ್ಲಿ ಕಲಾವಿದೆಯಾಗಿ ಮತ್ತು ದಾಸರಹಳ್ಳಿಯ ಸ್ಟಾಂಡರ್ಡ್‌ ಪಬ್ಲಿಕ್‌ ಸ್ಕೂಲಿನಲ್ಲಿ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಿಸ್ನ ಸಂಧಾನ
    ಊರ್‌ ಮನಿ ಕಲಾವಿದರ ತಂಡ ಕೋಟೇಶ್ವರ ಅವರಿಂದ ಪ್ರದರ್ಶನಗೊಂಡ “ಕಿಸ್ನ ಸಂಧಾನ’ ಹೆಸರೇ ಸೂಚಿಸುವಂತೆ ಮಹಾಭಾರತದ ಶ್ರೀ ಕೃಷ್ಣ ಸಂಧಾನವನ್ನು ಅಚ್ಚ ಕುಂದಗನ್ನಡಕ್ಕೆ ಭಟ್ಟಿ ಇಳಿಸಿದ ನಗೆ ನಾಟಕ. ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ ನಾಟಕದ ಮುಖ್ಯ ಉದ್ದೇಶ ಜನಸಾಮಾನ್ಯರಲ್ಲಿ ಶಿಕ್ಷಣ ಮತ್ತು ಸಾಕ್ಷರತೆಯ ಅರಿವು ಮೂಡಿಸುವುದಾಗಿದೆ. ವಿದ್ಯಾವಿಹೀನ ಪಶು ಸಮಾನ ಎನ್ನುವ ಮಾತಿನಂತೆ ಅಧ್ಯಾಪಕರೊಬ್ಬರು ಊರಿನ ಅವಿದ್ಯಾವಂತರಿಗೆ ಕೃಷ್ಣ ಸಂಧಾನ ನಾಟಕವಾಡಿಸುವ ತರಬೇತಿ ನೀಡಲು ಮುಂದಾದಾಗ ಅವರೆದುರಿಸಿದ ಸವಾಲುಗಳು ಪ್ರೇಕ್ಷಕರಲ್ಲಿ ನಗೆ ಉಕ್ಕಿಸುತ್ತದೆ. ಊರಿನ ಪಟೇಲರಿಗೆ ನಾಟಕದ ಗ್ರ್ಯಾಂಡ್‌ ರಿಹರ್ಸಲ್‌ ಉದ್ಘಾಟಿಸಿ ಕಲೆಯ ಕುರಿತು ಒಂದೆರಡು ಮಾತಾಡಿ ಎಂದಾಗ ಆ ಮಹಾನುಭಾವರು ದೀಪಬೆಳಗಿಸಿ ತಲೆ ಕೆರೆದುಕೊಳ್ಳುತ್ತಾ ಮಾಸ್ಟ್ರೆ ಕಲೆಯ ಕುರಿತು ಇಲ್ಲಿ ಯಾಕೆ ಮಾತಾಡ್ಲಿಕ್ಕೆ ಹೇಳಿದ್ರು ಎಂತ ಗೊತ್ತಾಯಿÇÉೆ ಎನ್ನುತ್ತಾ ಶಾಯಿ ಕಲಿ,ಗೋಯ್‌ ಹಣ್ಣಿನ ಕಲಿ, ಬಾಳಿ ಕಾಯಿ ಸೊನಿ ಕಲಿ ಎಂದು ವಿವಿಧ ಕಲೆ ಹೇಗೆ ನಮ್ಮ ಬಟ್ಟೆ, ಚರ್ಮದ ಮೇಲೆ ಜಪ್ಪಯ್ನಾ ಎಂದರೂ ಹೋಗದೇ ಕುಳಿತು ಬಿಡುತ್ತದೆ ಎಂದು ಭಾಷಣ ಮಾಡಲು ತೊಡಗಿದಾಗ ಮಾಸ್ಟ್ರೆ ತಲೆ ಮೇಲೆ ಕೈ ಹೊತ್ತು ಕುಳಿತು ಬಿಡುತ್ತಾರೆ,ವೀಕ್ಷಕರು ನಗೆಗಡಲಲ್ಲಿ ತೇಲುತ್ತಾರೆ.

ಅನರಕ್ಷರಸ್ಥ ಪಾತ್ರಧಾರಿಗಳಿಗೆ ಗ್ರ್ಯಾಂಡ್‌ ರಿಹರ್ಸಲ್‌ ಹೇಳಿ ಕೊಡುವ ಮಾಸ್ಟ್ರೆ ಒಬ್ಬೊಬ್ಬ ಪಾತ್ರಧಾರಿಯಿಂದಲೂ ಸಂಭಾಷಣೆಯನ್ನು ಹೇಳಿಸಬೇಕಾದರೆ ಉಂಟಾಗುವ ಆವಾಂತರಗಳು ನಕ್ಕು ನಲಿಸುತ್ತದೆ. ಮಾಸ್ಟ್ರೇ ನನ್ನ ಸಿಂಹಾಸನ ಎಲ್ಲರಿಗಿಂತ ಎತ್ತರ ಇರಬೇಕು, ಅದಕ್ಕೆ ಎಷ್ಟು ಖರ್ಚಾದರೂ ನನ್ನಪ್ಪ ಪಟೇಲ ಕೊಡುವ ಎಂದು ಹಠ ಮಾಡುವ ದುರ್ಯೋಧನ, ನಾಟಕದಲ್ಲಿ ತನಗೆ ಹೆಚ್ಚು ಮಾತಾಡಲು ಅವಕಾಶವಿಲ್ಲ, ಅದಕ್ಕಾಗಿ ತಾನೊಂದಿಷ್ಟು ಮಾತನ್ನು ಸೇರಿಸಿಕೊಂಡಿರುವುದಾಗಿ ಹೇಳುವ ದುಶ್ಯಾಸನ ಪಾತ್ರಧಾರಿ, ದೈವ ಪಾತ್ರಿಯ ನಾಟಕದ ಹುಚ್ಚು ಮತ್ತು ಸಂಬಾಷಣೆಯನ್ನು ತನ್ನ ಎಂದಿನ ದೈವ ಮೈ ಮೇಲೆ ಬಂದಂತೆ ಆಡುವ ರೀತಿ, ಭೀಮನ ಪ್ರವೇಶ ಗ್ರ್ಯಾಂಡ್‌ ಆಗಿರಬೇಕು ಎಂದು ಹೇಳಿದ್ದನ್ನು ಅನುಸರಿಸಲು ಸ್ಟೇಜ್‌ ಮುರಿದುಹೋಗುವಂತೆ ಆರ್ಭಟಿಸುತ್ತಾ ವೀರಾವೇಶದಿಂದ ಪ್ರವೇಶಿಸಿದಾಗ ಮಾಸ್ಟ್ರ ಸಹಿತ ಪಾತ್ರಧಾರಿಗಳು ಧರಾಶಾಯಿಯಾಗುವ ಪ್ರಸಂಗಗಳು ಹಾಸ್ಯಮಯ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಕುಡುಕನ ಪಾತ್ರಧಾರಿಯ ನೈಜ ಅಭಿನಯ, ಡೈಲಾಗ್‌ಗಳನ್ನು ಏರಿಳಿಸುವ ಮಾಸ್ಟ್ರ ಸಲಹೆಗಳನ್ನು ಎಡವಟ್ಟು ಮಾಡಿಕೊಳ್ಳುವ ಪಾತ್ರಧಾರಿಗಳು ನಾಟಕಾದಾದ್ಯಂತ ಭರಪೂರ ಮನೋರಂಜನೆ ನೀಡುತ್ತಾರೆ.
           
ಬೈಂದೂರು ಚಂದ್ರಶೇಖರ ನಾವಡ 

Advertisement

Udayavani is now on Telegram. Click here to join our channel and stay updated with the latest news.

Next