ಜುಗಲ್ ಬಂಧಿಯಲ್ಲಿ ತಾಳ್‌ವಾದ್ಯ ಪ್ರದರ್ಶನ ನೆರೆದವರ ಹುಬ್ಬೇರಿಸುವಂತೆ ಮಾಡಿತು. ಹರಿ-ಚೇತನಾ ದಂಪತಿಯೊಂದಿಗೆ ತಂಡದಲ್ಲಿದ್ದ ಅಮೃತಾ ಸೋಮಯ್ಯ, ಅಕ್ಷತಾ ಸೋಮಯ್ಯ, ಯಶಸ್ವಿನಿ, ಅಶ್ವತಿ ನಾಯರ್, ಸುಪ್ರಿಯಾ ರೆಡ್ಡಿ, ಸಂಯುಕ್ತಾ, ಪ್ರಿಯಾಂಕಾ, ವರುಣಿ, ಗಾಯತ್ರಿ ಲಾವಣ್ಯಾ, ಮನು, ಸಾವನ್ ಅವರು ತಾಳಕ್ಕೆ ತಕ್ಕಂತೆ ಸವಾಲ್-ಜವಾಬ್ ಪರಿಯಲ್ಲಿ ಹೆಜ್ಜೆ ಹಾಕಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಈ ಸೃಷ್ಟಿಯಲ್ಲಿ ಪ್ರಕೃತಿ ಮತ್ತು ಭಗವಂತನೇ ಎಲ್ಲಕ್ಕೂ ಮೂಲ ಎಂದು ಸಾರುವ ಸರ್‌ಗಮ್ ಪ್ರದರ್ಶನವೂ ತಂಡದ ಸರ್ವ ಕಲಾವಿದರ ಅಭಿನಯ ಚಾರ್ತುರ್ಯದಿಂದ ಕಲಾ ಲೋಕದಲ್ಲಿ ಹೊಸ ಭರವಸೆಯನ್ನು ಸೃಷ್ಟಿಸಿತು ಎಂದರೆ ಅತಿಶಯೋಕ್ತಿ ಎನಿಸದು. ಏಕೆಂದರೆ ಇಲ್ಲಿ ಹರಿ-ಚೇತನಾ ದಂಪತಿ ಹೊರತುಪಡಿಸಿದರೆ ಉಳಿದೆಲ್ಲರೂ ಇನ್ನೂ ಕಲಿಕಾ ಹಂತದಲ್ಲಿರುವವರೇ. ಪುಟ್ಟ ಬಾಲಕ ಮನುವಿನ ಕಲಾ ಪ್ರತಿಭೆ ಹಲವು ಕಲಾಪ್ರೇಮಿಗಳ ಆಕರ್ಷಣೆಯ ಕೇಂದ್ರ ಬಿಂದುವಾಯಿತು.
Advertisement
ಸುಮಾರು ಐವತ್ತೆದು ನಿಮಿಷಗಳ ಕಥಕ್ ನೃತ್ಯ ಪ್ರದರ್ಶನದಲ್ಲಿ ವಿಶೇಷವಾಗಿ ಆಕರ್ಷಣೆಗೆ ಕಾರಣವಾದದ್ದು ಹರಿ-ಚೇತನಾ ದಂಪತಿಯ ಮಧುರ್ ಮಾಧವ ನೃತ್ಯ. ಕೃಷ್ಣ-ರಾಧೆಯರ ಡಿವೈನ್ ಲವ್‌ನ್ನು ಸಾರುವ ವಾತಿ ತಿರುನಾಳ್ ರಾಜರ ಕೃತಿಯನ್ನು ಕಥಕ್‌ನಲ್ಲಿ ಅಳವಡಿಸಿಕೊಂಡು ಹೆಜ್ಜೆ ಹಾಕಿದ ದಂಪತಿ ಸಾಕ್ಷಾತ್ ಕೃಷ್ಣ-ರಾಧೆಯೇ ಭುವಿಗಿಳಿದು ಬಂದಂತೆ ಭಕ್ತಿ ಮತ್ತು ಪ್ರೀತಿಯ ಕಡಲಿನಲ್ಲಿ ಕಲಾಪ್ರೇಮಿಗಳನ್ನು ತೇಲಾಡಿಸಿದರು. ನೃತ್ಯದುದ್ದಕ್ಕೂ ದಂಪತಿ ಡಿವೈನ್ ಲವ್‌ನ ಬಹುಮುಖೀ ಜಗತ್ತನ್ನು ಅನಾವರಣಗೊಳಿಸಿದರು. ಕೃಷ್ಣನ ಕುಚೇಷ್ಟೆ, ರಾಧೆ ಯಮುನಾ ನದಿಯಲ್ಲಿ ಆಟವಾಡುವುದು, ಚಿಕ್ಕ ಮಕ್ಕಳಂತೆ ಕೆನ್ನೆ ಹಿಂಡುವುದು, ಮುತ್ತಿಕ್ಕುವುದು, ಹುಸಿ ಮುನಿಸು, ಮತ್ತೆ ಪ್ರೇಮಲೋಕದಲ್ಲಿ ತೇಲಾಡುವುದು…ಒಟ್ಟಾರೆಯಾಗಿ ಭಕ್ತಿಯ ಪರಾಕಾಷ್ಠೆಯ ಜೊತೆಗೆ ಪ್ರೀತಿಯ ಮೊಗೆತವನ್ನು ಈ ಇಡೀ ಪ್ರದರ್ಶನ ಕಟ್ಟಿಕೊಟ್ಟಿತು. ಒಂದೇ ಆತ್ಮ, ಎರಡು ದೇಹ ಎಂಬಂತೆ ಕೃಷ್ಣ-ರಾಧೆಯ ಪ್ರೇಮದ ಲೀಲೆ ಈ ಪ್ರದರ್ಶನದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆಯಿತು.
Related Articles
Advertisement
ಧನ್ಯಾ ಬಾಳೆಕಜೆ