Advertisement

ದುರಸ್ತಿಗೆ ಕಾಯುತ್ತಿದೆ ಭಕ್ತಕೋಡಿ-ರೆಂಜಲಾಡಿ ರಸ್ತೆ

04:19 PM Nov 11, 2017 | Team Udayavani |

ನರಿಮೊಗರು: ಗ್ರಾಮವಿಕಾಸ ಯೋಜನೆಯಲ್ಲಿ ಸರ್ವೆ ಗ್ರಾಮಕ್ಕೆ 75 ಲಕ್ಷ ರೂ. ಅನುದಾನ ಒದಗಿಸಿರುವ ಶಾಸಕಿ ಶಕುಂತಳಾ ಶೆಟ್ಟಿ ಅವರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಬಹು ಬೇಡಿಕೆಯ ರಸ್ತೆ ಮಾತ್ರ ಇದುವರೆಗೂ ಆಗದ ಕಾರಣ ಇತರ ಅಭಿವೃದ್ಧಿ ಕಾರ್ಯಗಳಿಗೂ ಇದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

Advertisement

ಸರ್ವೆ ಗ್ರಾಮದ ಭಕ್ತಕೋಡಿ-ರೆಂಜಲಾಡಿ ರಸ್ತೆ ಹದಗೆಟ್ಟು ಅದೆಷ್ಟೋ ವರ್ಷಗಳೇ ಕಳೆದಿವೆ. ಅಲ್ಲಲ್ಲಿ ಕಿತ್ತು ಹೋಗಿರುವ ಡಾಮರು, ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳು ಈ ಭಾಗದ ಜನ, ವಾಹನ ಸವಾರರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಭಕ್ತಕೋಡಿಯಿಂದ ರೆಂಜಲಾಡಿ ಮಧ್ಯದ ಎರಡೂವರೆ ಕಿ.ಮೀ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳಿಂದ ವಾಹನ ಚಾಲನೆ ಕಷ್ಟವೆನಿಸಿ ಈಗಾಗಲೇ ಹಲವಾರು ಮಂದಿ ಮುಂಡೂರು ಹಾಗೂ ಸರ್ವೆ ರಸ್ತೆ ಮೂಲಕ ಸುತ್ತುಬಳಸಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಈ ರಸ್ತೆಯ ದುರಸ್ತಿಗಾಗಿ ಸ್ಥಳೀಯರು ಹಲವಾರುಬಾರಿ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರತಿಭಟನೆಯೂ ನಡೆದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ದುರಸ್ತಿಯಾಗದ ಕಾರಣ ತೀವ್ರ ನಿರಾಸೆ ಅನುಭವಿಸಿರುವ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬಗ್ಗೆ ಮಾತನಾಡಲೂ ಶುರುವಿಟ್ಟುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಅಧಿಸೂಚನೆ ಪ್ರಕಟಗೊಂಡ ಮೇಲೆ ಯಾವುದೇ ಅನುದಾನ ಬಿಡುಗಡೆಗೆ ಅವಕಾಶವಿಲ್ಲ. ಹಾಗಾಗಿ ಅದಕ್ಕಿಂತ ಮೊದಲು ಅನುದಾನ ಬಿಡುಗಡೆಯಾದಲ್ಲಿ ಇಲ್ಲಿನವರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಲಿದೆ.

ಸಮಸ್ಯೆಯಲ್ಲಿ ಗ್ರಾಮಸ್ಥರು
ಭಕ್ತಕೋಡಿ ಪರಿಸರದ ಜನರು ಪಡಿತರಕ್ಕಾಗಿ ಕಲ್ಪಣೆಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಅದೇ ರೀತಿ ರೆಂಜಲಾಡಿ, ಕೂಡುರಸ್ತೆ ಮೊದಲಾದ ಕಡೆಗಳಿಂದ ಭಕ್ತಕೋಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಬರುವ ಜನರಿಗೂ ಸಮಸ್ಯೆಯಗುತ್ತಿದೆ. ರೋಗಿಗಳಿಗೆ ಹಾಗೂ ಗರ್ಭಿಣಿಯರಿಗೆ ರಸ್ತೆಯ ಸದ್ಯದ ಪರಿಸ್ಥಿತಿಯಿಂದಾಗಿ ತೀವ್ರ ತೊಂದರೆಯುಂಟಾಗಿದೆ. ಕಲ್ಪಣೆಯಲ್ಲಿ ಡಿ. ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವಿದ್ದು, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಅಲ್ಲಿಗೆ ಬರುವ ವಿದ್ಯಾರ್ಥಿಗಳ ಪೋಷಕರೂ ಸಮಸ್ಯೆಯನ್ನನುಭವಿಸುತ್ತಿದ್ದಾರೆ. ಕಲ್ಪಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ
ಬರುವ ವಿದ್ಯಾರ್ಥಿಗಳು, ಶಿಕ್ಷಕರೂ ತೊಂದರೆ ಅನುಭವಿಸುತ್ತಿದ್ದಾರೆ.

ಭಕ್ತಕೋಡಿ, ತೌಡಿಂಜ, ಕಲ್ಲಗುಡ್ಡೆ ಮತ್ತಿತರ ಕಡೆಗಳಿಂದ ಮುಂಡೂರು ಗ್ರಾಮ ಪಂಚಾಯತ್‌ ಗಾಗಲೀ, ಸಹಕಾರಿ ಬ್ಯಾಂಕ್‌ಗಾಗಲೀ ಹೋಗಬೇಕಾದರೆ ಇದೇ ರಸ್ತೆಯನ್ನು ಅವಲಂಭಿಸಬೇಕಾಗುತ್ತದೆ. ರೆಂಜಲಾಡಿ, ಕಲ್ಪಣೆ ಪರಿಸರದಿಂದ ಪುತ್ತೂರಿನ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೂ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಇತ್ತ ಲಕ್ಷ್ಯ ಹರಿಸುತ್ತಿಲ್ಲ. ಆದಷ್ಟು ಶೀಘ್ರ ಜನಪ್ರತಿನಿಧಿಗಳು ರಸ್ತೆ ದುರಸ್ತಿ ನೆಲೆಯಲ್ಲಿ ಸ್ಪಂದಿಸಿದರೆ ತುಂಬಾ ಸಹಾಯವಾಗಲಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

Advertisement

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರೂ ರಸ್ತೆಯನ್ನು ಈ ಹಿಂದೆ ವೀಕ್ಷಿಸಿ, ದುರಸ್ತಿಯ ಬಗ್ಗೆ ಭರವಸೆ ನೀಡಿದ್ದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಈ ಭಾಗದ ಜನತೆ ಮಾತ್ರ ರಸ್ತೆ ದುರಸ್ತಿಗೆ ಕಾಯುತ್ತಲೇ ಇದ್ದಾರೆ. ಇನ್ನಾದರೂ ಈ ಭಾಗದ ಜನರಿಗೆ ರಸ್ತೆ ದುರಸ್ತಿ ಭಾಗ್ಯ ಲಭಿಸುವುದೇ ಕಾದು ನೋಡಬೇಕಿದೆ.

ಈಡೇರದ ಭರವಸೆ
ಭಕ್ತಕೋಡಿ ರೆಂಜಲಾಡಿ ರಸ್ತೆಯನ್ನು ‘ಒನ್‌ ಟೆ„ಮ್‌ ಯೋಜನೆ’ಯಲ್ಲಿ ಡಾಮರೀಕರಣಕ್ಕೆ ಬರೆದಿದ್ದು, ರಸ್ತೆ ದುರಸ್ಥಿಯಾಗಲಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿಯವರು ಹಲವು ಬಾರಿ ಭರವಸೆ ನೀಡಿದ್ದರು. ಆದರೆ ರಸ್ತೆ ಡಾಮರೀಕರಣಕ್ಕೆ ಯಾವುದೇ ಅನುದಾನ ಇದುವರೆಗೂ ಬಿಡುಗಡೆಗೊಳ್ಳದೆ ರಸ್ತೆಯ ದುರಸ್ತಿ ಮರೀಚಿಕೆಯಾಗಿಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next