Advertisement

ಭಜನಾ ಪದ ಹಾಡುಗಾರನಿಗೆ ಒಲಿದ ಸರಿಗಮಪ ಕಿರೀಟ

10:55 AM Aug 01, 2017 | |

ಸರಿಗಮಪ ಸೀಸನ್‌-13 ರ ವಿನ್ನರ್‌ ಯಾರಾಗುತ್ತಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ಆರು ಮಂದಿ ಗ್ರ್ಯಾಂಡ್‌ ಫಿನಾಲೆ ಪ್ರವೇಶಿಸಿದ್ದರು. ಇದರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ನೆಲೋಗಿ ಗ್ರಾಮದ ಪ್ರತಿಭೆ ಸುನೀಲ ಗುಜಗೊಂಡ ವಿಜೇತರಾಗಿದ್ದಾರೆ. ಸುನೀಲ ಗುಜಗೊಂಡ ಅವರು “ಶ್ರೀಮಂಜುನಾಥ’ ಚಿತ್ರದ “ಒಬ್ಬನೇ ಒಬ್ಬನೇ ಶ್ರೀಮಂಜುನಾಥನೊಬ್ಬನೇ ..’ ಹಾಡು ಹಾಡಿ ಮೂಲಕ ವಿಜಯದ ಮಾಲೆ ಧರಿಸಿದ್ದಾರೆ. 

Advertisement

ಸುನೀಲ ಅತ್ಯಂತ ಕಡುಬಡತನದಲ್ಲಿ ಜನಿಸಿದರೂ ಸಂಗೀತ ಸಾಧನೆಯಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಊರ ಮಂದಿಯ ಖುಷಿಗೆ ಕಾರಣರಾಗಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ತಂದೆ ತೀರಿದ ನಂತರ ತಾಯಿ ಆಸರೆಯಲ್ಲಿ ಬೆಳೆದ ಸುನೀಲ ಗುಡಿ- ಗುಂಡಾರಗಳಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳಲ್ಲಿ ಭಕ್ತಿಪದ ಹಾಡುತ್ತಿದ್ದರು. ಈ ಮೂಲಕ ಸಂಗೀತದ ಕನಸು ಕಂಡವರು ಸುನೀಲ. 

ಸುನೀಲ ತಂದೆ ದಿ. ನಾನಾಗೌಡ ಗುಜಗೊಂಡ ಅವರ ಆಸೆ ಕೂಡ ಸಂಗೀತ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲಿ ಎಂಬುದೇ ಆಗಿತ್ತು. ಕಳೆದ 7 ತಿಂಗಳ ಹಿಂದೆ ಸಂಗೀತ ಕಲಿಯಲು ಗದುಗಿನ ಪಂ| ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಸೇರಿದ್ದ ಸುನೀಲ, ಶ್ರದ್ಧೆ, ನಿಷ್ಠೆಯಿಂದ ಸಂಗೀತಾಭ್ಯಾಸ ಮಾಡುತ್ತಾ, “ಸಿಂಗಿಂಗ್‌ ಸ್ಟಾರ್‌ ಆಫ್‌ ಗದಗ’ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕೂಡ ಪಡೆದಿದ್ದರು. 

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲು ಆಗಮಿಸಿದ್ದ ಹಿನ್ನೆಲೆ ಗಾಯಕ ರಾಜೇಶ ಕೃಷ್ಣ ಅವರು ಸುನೀಲ ಅವರ ಗಾಯನ ಮೆಚ್ಚಿ, ಸರಿಗಮಪ ಸೀಜನ್‌-13ರಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಿಂತ ಮೊದಲು 6 ಕಡೆ ಆಡಿಷನ್‌ ಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಿಗಮಪಕ್ಕೆ ಪ್ರವೇಶ ಪಡೆದ ಸುನೀಲ ಈಗ ವಿಜೇತರಾಗಿದ್ದಾರೆ. 

ಸ್ಪರ್ಧೆಯಲ್ಲಿ ಮೊದ ಮೊದಲು ಹೆದರಿಕೆ, ಭಯದಿಂದ ಹಾಡುತ್ತಿದ್ದ ಸುನೀಲ ನಂತರ ಉತ್ತಮವಾದ ಪ್ರದರ್ಶನ ನೀಡುತ್ತಾ ಬಂದರು.ಈಗ ಪ್ರಥಮ ಸ್ಥಾನ ಪಡೆದು ಊರಿಗೆ ಹೆಮ್ಮೆ ತಂದಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ಮುಖ್ಯ ತೀರ್ಪುಗಾರರಾಗಿ ಆಗಮಿಸಿದ್ದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಸುನೀಲ ಅವರಿಗೆ 5 ಲಕ್ಷ ರೂ.ಮೊತ್ತದ ಚೆಕ್‌ ನೀಡಿ ಅಭಿನಂದಿಸಿದ್ದಾರೆ.  

Advertisement

* ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next