Advertisement

ಮನೆ ವಿಭಜನೆಯ ಭಜನೆ

12:30 AM Feb 18, 2019 | |

ಮನೆ ಕಟ್ಟುವಾಗ ನಮ್ಮೆಲ್ಲ ಕನಸುಗಳನ್ನು ಒಗ್ಗೂಡಿಸಿ, ಇದು ಅಲ್ಲಿರಲಿ,  ಇದು ಹೀಗಿರಲಿ, ಬೆಡ್‌ ರೂಂ ಹಾಗೇ ಬರಬೇಕು, ಮಕ್ಕಳ ಸ್ಟಡಿ ರೂಂ ಹೀಗೇ ಇರಬೇಕು ಅಂತೆಲ್ಲ ಕಟ್ಟಿಸಿಬಿಡುತ್ತೇವೆ. ಆದರೆ, ಕಾಲಾನಂತರ ನಾವು ಪ್ರೀತಿಯಿಂದ ಕಟ್ಟಿಸಿದ ಮನೆಯಲ್ಲಿ ಎಷ್ಟೋ ಸ್ಥಳಗಳು ಅನಗತ್ಯ ಅನಿಸತೊಡಗುತ್ತವೆ.  ಈ ಸಂದರ್ಭದಲ್ಲಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ. 

Advertisement

ಮನೆ ಕಟ್ಟುವುದು ಒಂದು ದೊಡ್ಡ ಕನಸು. ಹೀಗೆ, ಕನಸು ಈಡೇರಿಸಿಕೊಂಡ ಮೇಲೆ ಶುರುವಾಗುವುದು ಹೊಸ  ಹೊಸ ಸಮಸ್ಯೆ. ಎಷ್ಟೋ ಸಲ ನಾವು ಪ್ರೀತಿಯಿಂದ ಹೀಗೇ ಇರಬೇಕು, ಹೀಗೇ ಕಾಣಬೇಕು ಅಂತ ಕಟ್ಟಿಸಿದ ಸ್ಥಳಗಳು ಒಂದಷ್ಟು ವರ್ಷದ ನಂತರ- ಇದು ಬೇಕೆ? ಅನ್ನೋ ರೀತಿ ಆಗಿಬಿಡುತ್ತವೆ. 

ಆದರೆ ಒಂದು ಸತ್ಯ ಏನೆಂದರೆ, ಒಮ್ಮೆ ಮನೆ ಕಟ್ಟಿದ ಮೇಲೆ ಕೆಲವರ್ಷಗಳಲ್ಲೇ ಬದಲಾವಣೆಗಳನ್ನು ಮಾಡುವುದು, ಸಿಮೆಂಟ್‌, ಗಾರೆ ತಂದು ಸುರಿದು ಗೋಡೆ ಕಟ್ಟುವುದು ಎಲ್ಲವೂ ಕಿರಿಕಿರಿಯ ಸಂಗತಿ.

ಪ್ರತ್ಯೇಕ ಜಾಗ ಅಥವ ಸ್ಪೇಸ್‌ ಓದಲು, ಹಾಡುಗಾರಿಕೆಗೆ, ಚಿಕ್ಕ ಮಕ್ಕಳು ಆಡಲು ಇತ್ಯಾದಿ ಬೇಕಾಗಿರುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಆಡುವ ಸ್ಥಳದ ಅಗತ್ಯ ಇರುವುದಿಲ್ಲ. ಹಾಗೆಯೇ, ಓದು ಮುಗಿಸಿದ ಮೇಲೆ ಅದಕ್ಕೆಂದೇ ಪ್ರತ್ಯೇಕ ಸ್ಥಳದ ಅಗತ್ಯವೂ ಇರುವುದಿಲ್ಲ.  ಹಾಗಾಗಿ,  ಕೆಲವರ್ಷಗಳ ನಂತರ ಅಗತ್ಯಕ್ಕೆ ತಕ್ಕಂತೆ ಸುಲಭದಲ್ಲಿ ಇರುವ ಜಾಗವನ್ನು ಹೆಚ್ಚು ಖರ್ಚು ಹಾಗೂ ತಲೆನೋವು ಇಲ್ಲದೆ  ಭಜನೆ ಮಾಡಿಕೊಂಡರೆ, ಮುಂದೆ ಬದಲಾಯಿಸಲೂ ಕೂಡ ಹೆಚ್ಚು ಶ್ರಮ ಪಡಬೇಕಾಗಿಲ್ಲ.

ಸ್ಪೇಸ್‌ ಡಿವೈಡರ್‌
ಕಿರಿಕಿರಿಯ ವಿಚಾರ ಎಂದರೆ, ಆಫೀಸಿಂದ ಬಂದು ಮನೆಯಲ್ಲಿ ಕೂತಾಗ  ಸಣ್ಣ ಮಕ್ಕಳು ಅವರದೇ ಆದ ಲೋಕದಲ್ಲಿ ವಿಹರಿಸುತ್ತ ಇರುತ್ತಾರೆ. ಅವರ ಗಲಾಟೆ-ಸಂಭ್ರಮ ಹೇಳತೀರದು, ಆದರೆ ದೊಡ್ಡವರಿಗೆ ಅವರ ಖುಷಿ ಅಷ್ಟಾಗಿ ಅರ್ಥ ಆಗದೆ ಗದರಿಸುವುದೇ ಹೆಚ್ಚು. ಏಕೆಂದರೆ, ಮಕ್ಕಳ ಆಟವಾಡುವ ಜಾಗ, ಹಿರಿಯರು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳ ಎರಡೂ ಒಂದೇ ಆಗಿರುತ್ತದೆ. ಹೀಗಾಗಿ, ಸ್ವಲ್ಪ ಹೊತ್ತು ಆರಾಮವಾಗಿರೋಣ ಎಂದರೆ ಮಕ್ಕಳ ಹಿಂಡಿನ ಆಟ, ಟ್ರಾಫಿಕ್‌ ಗದ್ದಲಕ್ಕಿಂತ ದೊಡ್ಡದಾಗಿ ಕೇಳಿಸಿ, ಕಿರಿಕಿರಿ ಮಾಡಬಹುದು. ಆದುದರಿಂದ ಅವರವರಿಗೆ ಅವರವರ ಸ್ಥಳ ದೊರಕಿದರೆ ಇತರರಿಗೆ ಹೆಚ್ಚು ತೊಂದರೆ ಆಗುವುದಿಲ್ಲ. ಸುರಕ್ಷತೆಯ ದೃಷ್ಟಿಯಿಂದ ನೋಡಿದರೆ ಸಣ್ಣ ಮಕ್ಕಳನ್ನು ತೀರ ಹೊರಗೂ ಕಳಿಸಲು ಆಗುವುದಿಲ್ಲ. ಕಣ್ಣಿಗೆ ಸುಲಭದಲ್ಲಿ ಬೀಳುವ ಸ್ಥಳದಲ್ಲಿ ಅಲ್ಲದಿದ್ದರೂ ಅವರ ಗದ್ದಲದಿಂದಾದರೂ ಏನು ನಡೆಯುತ್ತಿದೆ? ಜಗಳ ಆಡಿಕೊಳ್ಳುತ್ತಿದ್ದಾರೆಯೇ? ಎಂದು ತಿಳಿದುಕೊಳ್ಳಲಾದರೂ ಕಣ್ಣೋಟದ ದೂರದಲ್ಲಿ ಮಕ್ಕಳು ಆಡುವ ಸ್ಥಳ ಇರಬೇಕಾಗುತ್ತದೆ. ಆದುದರಿಂದ ಮನೆಯಲ್ಲೇ ಒಂದು ಜಾಗದಲ್ಲಿ ಅವರಿಗೆ ಒಂದಷ್ಟು ಸ್ಥಳಾವಕಾಶ ಮಾಡಿಕೊಟ್ಟರೆ, ಮಕ್ಕಳು ಸ್ವಲ್ಪ ದೊಡ್ಡವರಾಗುವವರೆಗೂ ಅವರದೇ ಆದ ಸ್ಥಳದಲ್ಲಿ ವಿಹರಿಸುತ್ತಾ ಇರಬಹುದು.

Advertisement

ಹಾಲ್‌ – ಲಿವಿಂಗ್‌ ರೂಮ್‌ನ ಒಂದು ಮೂಲೆಯಲ್ಲಿ ಮಕ್ಕಳಿಗೆಂದು ಒಂದಷ್ಟು ಸ್ಥಳವನ್ನ ಎತ್ತಿಟ್ಟು, ಅದಕ್ಕೆ ಒಂದೆರಡು ವಿಭಜಕಗಳ ಮೂಲಕ ಪ್ರತ್ಯೇಕ ಜಾಗ ನಿರ್ಮಿಸಬಹುದು. ಮಕ್ಕಳು ಓದುವ ಪುಸ್ತಕ, ಆಟಿಕೆಗಳನ್ನು ಅಚ್ಚುಕಟ್ಟಾಗಿ ಇಡಲು ಬೇಕಿರುವ ಕಪಾಟನ್ನೇ ವಿಭಜಕವಾಗಿಯೂ ಉಪಯೋಗಿಸಬಹುದು. ಆದರೆ ಇದು ಹೇಳಿಕೇಳಿ ಮಕ್ಕಳು ಆಡುವ ಸ್ಥಳ ಆದಕಾರಣ, ಅವರು ಕಪಾಟುಗಳನ್ನು ಎಳೆಯುವುದು, ದೂಡುವುದೂ ಇದ್ದದ್ದೇ.  ಅಗಲ ಕಡಿಮೆ ಇರುವ ಕಪಾಟಾದರೆ ಸುಲಭದಲ್ಲಿ ಆಯತಪ್ಪಿ ಬಿದ್ದು ಅವಘಡ ಆಗಬಹುದು. ಆದುದರಿಂದ, ಈ ಕಪಾಟುಗಳನ್ನು ಬಡಗಿಗಳ ಸಹಾ¿å ದಿಂದ “ಏಲ್‌’ ಆಕಾರ ಅಂದರೆ ಒಂದು ಕಪಾಟನ್ನು ಉದ್ದಕ್ಕೂ ಮತ್ತೂಂದನ್ನು ಅಡ್ಡಕ್ಕೂ ಅಳವಡಿಸಿದರೆ, ಆಗ ಹೇಗೇ ಎಳೆದಾಡಿದರೂ ಸಾಕಷ್ಟು ಪಾದದ ಅಗಲ ಇರುವುದರಿಂದ ಸುಲಭದಲ್ಲಿ ಬಿದ್ದು ಹೋಗುವುದಿಲ್ಲ. ಈ ಮಾದರಿಯ ವಿಭಜಕ ಕಪಾಟುಗಳನ್ನು ಅಂಗಡಿಗಳಿಂದ ತಂದ ರೆಡಿಮೇಡ್‌ ಕಪಾಟಿನ ಬದಲು ಪ್ಲೆ„ವುಡ್‌ ಇಲ್ಲವೇ ಮರದಲ್ಲಿ ಮಾಡಿಸಿದರೆ, ಹೆಚ್ಚು ಗಟ್ಟಿಮುಟ್ಟಾಗಿ ಇರುತ್ತದೆ. 

ಈ ವಿಭಜಕಗಳನ್ನು ಕಡೇ ಪಕ್ಷ ಒಂದು ಕಡೆಯ ಗೋಡೆಗೆ ಕ್ಲಾಂಪ್‌ಗ್ಳ ಮೂಲಕ ಬಿಗಿದರೆ ಮತ್ತೂ ಹೆಚ್ಚು ದೃಢವಾಗುತ್ತದೆ. ಕೆಲವೊಮ್ಮೆ ಸ್ಥಳದ ಅಭಾವವಿದ್ದು, ಎಲ್‌ ಆಕಾರದಲ್ಲಿ ಮಾಡಲು ಆಗದಿದ್ದರೆ, ಉದ್ದಕ್ಕೆ ಎರಡೆರಡು ಕಪಾಟುಗಳನ್ನು ಸ್ಪೇಸ್‌ ಡಿವೈಡರ್‌ ಆಗಿ ಉಪಯೋಗಿಸಬೇಕೆಂದಿದ್ದರೆ, ಆಗ ಕಡ್ಡಾಯವಾಗಿ ಗೋಡೆಗೆ ಕ್ಲಾಂಪ್‌ಗ್ಳ ಮೂಲಕ ವಿಭಜಕಗಳಿಗೆ ಆಧಾರ ಕಲ್ಪಿಸುವುದು ಒಳ್ಳೆಯದು. 

ಕೆಲವೊಮ್ಮೆ ವಿಭಜಕಗಳನ್ನು ಸಾಕಷ್ಟು ದಪ್ಪವಾಗಿರಲು ಆಗುತ್ತದೆ. ಹಾಗಿದ್ದಲ್ಲಿ, ಒಂದು ಕಡೆ ಲಿವಿಂಗ್‌ ಡೈನಿಂಗ್‌ಗೆ ಬೇಕಾದಂತೆ ಶೋಕೇಸ್‌ ಇಲ್ಲ ಕ್ರಾಕರಿ ಶೆಲ್ಫ್ ಮಾಡಿಕೊಂಡು ಮತ್ತೂಂದು ಕಡೆ ಮಕ್ಕಳ ಶೆಲ್ಪ್ ಮಾಡಿಕೊಳ್ಳಬಹುದು. ಹೀಗೆ ಮಾಡಲು ಕಡೇ ಪಕ್ಷ ಎರಡು ಅಡಿ ಅಗಲದ ವಿಭಜಕ ಬೇಕಾಗುತ್ತದೆ. ಇಷ್ಟೊಂದು ಜಾಗ ಇಲ್ಲದಿದ್ದರೆ ಒಂದು ಅಡಿ ಅಗಲ ಹಾಗೂ ನಾಲ್ಕರಿಂದ ಆರು ಅಡಿ ಉದ್ದದ ವಿಭಜಕಗಳನ್ನೂ ಮಾಡಿಕೊಳ್ಳಬಹುದು. ಈ ಕಪಾಟುಗಳನ್ನು ವೈವಿಧ್ಯಮಯ ವಿನ್ಯಾಸದಲ್ಲಿಯೂ ಮಾಡಿಕೊಳ್ಳ ಬಹುದು. 

ಮಕ್ಕಳಿಗೆ ಓದುವ ಸಮಯಕ್ಕೆಂದು ಒಂದು ಫೋರ್ಟಬಲ್‌ ಟೇಬಲ್‌ ಅಳವಡಿಸಿದರೆ, ಬೇಕಾದಾಗ ತೆರೆದು ಬರೆಯಲು ಉಪಯೋಗಿಸಬಹುದು. ಮಿಕ್ಕವೇಳೆಯಲ್ಲಿ  ಸುಲಭದಲ್ಲಿ ಮಡಚಿಟ್ಟು, ಹೆಚ್ಚು ಜಾಗ ತೆಗೆದುಕೊಳ್ಳದಂತೆ ಮಾಡಬಹುದು. ಮಕ್ಕಳು ತೀರಾ ಸಣ್ಣವರಿದ್ದರೆ, ಮನೆಯೆಲ್ಲ ತೆವಳುತ್ತ, ಎಳೆಯುತ್ತ ಇದ್ದು, ಅವರ ಚಲನಶೀಲತೆಯನ್ನು ಒಂದು ಮಟ್ಟಕ್ಕೆ ನಿಯಂತ್ರಿಸಲು ಆಗದಿದ್ದರೆ, ದಿನಕ್ಕೆರಡು ಬಾರಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದರೆ, ಆಗ ಅನಿವಾರ್ಯವಾಗಿ ಮಕ್ಕಳಿಗಳಿಗೆ ಕ್ರಿಬ್‌ ಮಾದರಿಯ ವಿಭಜಕ ಮಾಡಬೇಕಾಗುತ್ತದೆ.

ತೂಗದ ತೊಟ್ಟಿಲು
ಸಣ್ಣ ಮಕ್ಕಳು, ಇನ್ನೂ ನಡೆದಾಡಲು ಬಾರದ ಪುಟ್ಟ ಮಕ್ಕಗಳಿಗೆ ನಾಲ್ಕು ಅಡಿಗೆ ಆರು ಅಡಿಯ ಸ್ಥಳದಲ್ಲಿ ಅವರಿಗಿಷ್ಟವಾದ ಆಟಿಕೆಗಳನ್ನು ಇಟ್ಟರೆ, ಆರಾಮವಾಗಿ ಅವರು ಒಂದೆರಡು ಗಂಟೆಯಾದರೂ ಆಡಿಕೊಂಡು ಇರುತ್ತಾರೆ. ಈ ಸಮಯದಲ್ಲಿ  ಇತರೆ ಕೆಲಸವನ್ನು ಮಾಡಿಕೊಳ್ಳಬಹುದು. ಸಾಮಾನ್ಯವಾಗಿ, ಈ ಕ್ರಿಬ್‌ ಅನ್ನು ಪ್ರತ್ಯೇಕವಾಗಿ ಮಾಡಲಾಗುತ್ತಾದರೂ ಹಾಲ್‌ ಅಥವಾ ಡೈನಿಂಗ್‌ ರೂಮಿನ ಒಂದು ಭಾಗದಲ್ಲಿ, ಇರುವ ಎರಡು ಗೋಡೆಗಳನ್ನು ಉಪಯೋಗಿಸಿಕೊಂಡು ಎರಡು ಕಡೆ ಮಕ್ಕಳು ಹತ್ತಲಾರದ ಮಟ್ಟ ಅಂದರೆ ಸುಮಾರು ಎರಡು ಅಡಿಗೆ ವಿಭಜಕ ಮಾಡಿದರೂ ಸಾಕಾಗುತ್ತದೆ. ಹೀಗೆ ಮಾಡುವ ವಿಭಜಕಕ್ಕೆ ಕಡ್ಡಾಯವಾಗಿ ಅಡ್ಡಡ್ಡವಾಗಿ ಮರದ ರಿಪೀಸುಗಳನ್ನು ಅಳವಡಿಸಬಾರದು. ಇವನ್ನೇ ಮೆಟ್ಟಿಲಂತೆ ಉಪಯೋಗಿಸಿಕೊಂಡು ಹೊರಗೆ ಬಂದು ಬಿಡುತ್ತಾರೆ. ಆದುದರಿಂದ ಉದ್ದಕ್ಕೆ, ಅಂದರೆ ಹತ್ತಲಾಗದಂತೆ, ನೇರವಾಗಿ ಕಂಬದಂತೆ ನಿಲುವಿನಲ್ಲಿ ಹಾಗೆಯೇ ಅವರ ತಲೆ ತೂರದಂತೆ ಸುಮಾರು ನಾಲ್ಕು ಇಂಚು ಅಂತರದಲ್ಲಿ ಮರದ ಸಪೂರಾದ ರಿಪೀಸುಗಳನ್ನು ಹಾಕಿ ಕ್ರಿಬ್‌ ತಯಾರಿಸಬೇಕು. 

ಸೂ¾ತ್‌ ಫಿನಿಶಿಂಗ್‌ ಇರಲಿ
ಮಕ್ಕಳಿಗಾಗಿ ಇರಲಿ ಎಂದು ನಾವು ಮಾಡುವ ಯಾವುದೇ ಪೀಠೊಪಕರಣ ಅಥವಾ ತಂದಿಡುವ ಆಟಿಕೆ ಚೂಪುಚೂಪಾದ ಮೂಲೆಗಳಿಂದ ಕೂಡಿರಬಾರದು. ಬಿದ್ದಾಗ ತಗುಲಿದರೆ ಬಾವುಗಳೇಳುವುದು ಖಾತರಿ. ಆದುದರಿಂದ ಆದಷ್ಟೂ ಮರದಿಂದ ಅದರಲ್ಲೂ ನುಣ್ಣಗೆ – ಸೂ¾ತ್‌ ಆಗಿ ಫಿನಿಶ್‌ ಮಾಡಿಯೇ ಮಕ್ಕಳಿಗೆ ನೀಡಬೇಕು. ಹಾಗೆಯೇ,  ಮಕ್ಕಳು ಸಹಜವಾಗೇ ಎಲ್ಲವನ್ನೂ ನೆಕ್ಕುವ, ಮುಟ್ಟಿ ಚೀಪುವ ಅಭ್ಯಾಸ ಇರುವುದರಿಂದ ಪೆಂಟ್‌ ಇಲ್ಲ ಪಾಲಿಶ್‌ ಗಳನ್ನು ಮರಗಳಿಗೆ ಫಿನಿಶ್‌ ನೀಡಲು ಬಳಸುವುದು ಉತ್ತಮ. 

ಮಾಹಿತಿಗೆ-98441 32826 

– ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next