ಸಿದ್ದಾಪುರ: ಭಜನೆ ಆತ್ಮಕ್ಕೆ ಸುಖ, ಶಾಂತಿ, ನೆಮ್ಮದಿ ನೀಡುತ್ತದೆ. ಭಜನೆ ಇದ್ದ ಕಡೆ ವಿಭಜನೆ ಇಲ್ಲ. ಭಜನೆಯ ಮೂಲಕ ಭಗವಂತನ ಪರಿಪೂರ್ಣ ಆರಾಧನೆಯೊಂದಿಗೆ ಜೀವನದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಭಜನೆ ಭಕ್ತಿಭಾವ ದಿಂದ ಕೂಡಿದ ಶ್ರೇಷ್ಠ ಆರಾಧನೆಯಾಗಿದೆ ಎಂದು ಅವಧೂತ ಶ್ರೀ ವಿನಯ್ ಗುರೂಜಿ ಗೌರಿಗದ್ದೆ ಹೇಳಿದರು.
ಅವರು ಕೊಂಜಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ವತಿಯಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀಧರ ಕಾಮತ್ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು.
ತಂತ್ರಿ ಸದಾಶಿವ ಭಟ್ ಬೇಳಂಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ. ಪ್ರಶಾಂತ ಶೆಟ್ಟಿ ಆರ್ಡಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ. ಸೀತಾರಾಮ ಶೆಟ್ಟಿ ತೊನ್ನಾಸೆ, ಧಾರ್ಮಿಕ ಮುಂದಾಳು ವೈ. ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಅರ್ಚಕ ಅರುಣಾಚಲ ಜೋಯಿಸ್, ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಗಣೇಶ ಆಚಾರ್ಯ, ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಅಧ್ಯಕ್ಷ ಸಂತೋಷ ಶೆಟ್ಟಿ, ಹಿರಿಯ ಸದಸ್ಯ ಲಕ್ಷ್ಮಣ ಆಚಾರ್ಯ ಕೊಂಜಾಡಿ, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
ನವರಾತ್ರಿ ಮಹೋತ್ಸವದ ಪ್ರಯುಕ್ತ ಮೂರ್ತಿ ಪ್ರತಿಷ್ಠೆ, ದುರ್ಗಾ ಹೋಮ, ದುರ್ಗಾಪೂಜೆ, ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ, ಭಜನ ಮಂಡಳಿ ಬಾಲಕರಿಗೆ ಗೌರವ ಸಲ್ಲಿಕೆ, ಅಶೀರ್ವಚನ, ಧಾರ್ಮಿಕ ಪ್ರವಚನ, ಮಹಾಪೂಜೆ, ಅನ್ನ ಸಂತರ್ಪಣೆ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಪಟ್ಲ ಸತೀಶ್ ಶೆಟ್ಟಿ ಹಾಗೂ ಬಳಗದವರಿಂದ ತೆಂಕು ಬಡಗಿನ ಗಾನ ನಾಟ್ಯ ವೈಭವ, ಕ್ರೀಡಾಸ್ಪರ್ಧೆ, ಬಹುಮಾನ ವಿತರಣೆ, ವಿಗ್ರಹ ವಿಸರ್ಜನ ಪೂಜೆ, ಗಂಟುಬೀಳು ಬಳಿ ಹೊಳೆಯಲ್ಲಿ ವಿಗ್ರಹ ಜಲಸ್ಥಂಭನದೊಂದಿಗೆ ಸಂಪನ್ನಗೊಂಡಿತ್ತು. ಗಣೇಶ ಅರಸಮ್ಮಕಾನು, ಸುದರ್ಶನ ಶೆಟ್ಟಿ ಆರ್ಡಿ ನಿರೂಪಿಸಿದರು. ಸಂತೋಷ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.