Advertisement

“ಭೈರಪ್ಪನವರು ತಮ್ಮದೇ ಆದ ಒಂದು ಶೈಲಿಯನ್ನು ಹೊಂದಿದ್ದಾರೆ”

01:04 PM May 09, 2021 | Team Udayavani |

ಮುಂಬಯಿ: ಭೈರಪ್ಪನವರ ಬೇರೆ ಬೇರೆ ಕಾದಂಬರಿಗಳಲ್ಲಿ ಭಿನ್ನ ಆಯಾಮಗಳು ತೆರೆದುಕೊಳ್ಳುವುದು. ಓದುಗರು ತಮ್ಮ ಭಾವವನ್ನು ಒಮ್ಮೆ ಮೀಟಿಕೊಂಡರೆ ಧಾರಕಾರವಾಗಿ ಬೇರೆ ಬೇರೆ ಮಗ್ಗಲುಗಳು ಹೊಳೆಯುತ್ತವೆ. ನವೋದಯದ ಮುಂಚೂಣಿಯ ಲೇಖಕರಾದ ಬೇಂದ್ರೆ, ಅಡಿಗ, ಕುವೆಂಪು, ಗೋವಿಂದ ಪೈ ಮೊದಲಾದವರು ತಮ್ಮದಾದ ಒಂದು ಶೈಲಿಗೆ ಬದ್ಧರಾಗಿ ಬರೆಯುತ್ತಿದ್ದರು.

Advertisement

ಅದೇ ರೀತಿ ಭೈರಪ್ಪನವರು ತಮ್ಮದಾದ ಒಂದು ಶೈಲಿಯನ್ನು ಕಾಪಾಡಿಕೊಂಡಿದ್ದಾರೆ. ಅವರು ಕೆಲವು ಸಹಸ್ರಮಾನಗಳಿಗೆ ಸಲ್ಲುವ ಲೇಖಕರು. ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಬರವಣಿಗೆಗಳನ್ನು ಕೇವಲ ಸಾಹಿತ್ಯಾತ್ಮಕವಾದ ದೃಷ್ಟಿಯಿಂದಲ್ಲದೆ ಸಾಮಾಜಿಕವಾದ, ಪರಿಸರವಾದ ಹೀಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ಅಧ್ಯಯನ ಮಾಡುವ ಅವಕಾಶಗಳಿರುವುದರಿಂದ ವಿಶ್ವವಿದ್ಯಾಲಯಗಳು ಇತ್ತ ಗಮನಹರಿಸಬೇಕು ಎಂದು ಶತಾವಧಾನಿ ಡಾ| ಆರ್‌. ಗಣೇಶ್‌ ಅವರು ಅಭಿಪ್ರಾಯಪಟ್ಟರು.

ಮೇ 4ರಂದು ಅವರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆನ್‌ಲೈನ್‌ ಮೂಲಕ ಆಯೋಜಿಸಿದ್ದ ಡಾ| ಉಮಾ ರಾಮ ರಾವ್‌ ಅವರ ಭೈರಪ್ಪನವರ ಪರ್ವ: ಆಯಾಮ ಮತ್ತು ಅನನ್ಯತೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರಜ್ಞಾ ಪ್ರವಹನತಂತ್ರದಿಂದ ಪಾತ್ರಗಳ ಒಳಗನ್ನು ತೆರೆದಿಡುವ ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಅತ್ಯಂತ ಭಿನ್ನವಾದ ನೆಲೆಗಳನ್ನು ಬೆಸೆಯುತ್ತಾರೆ. ಭೈರಪ್ಪನವರ ಪರ್ವ; ಆಯಾಮ ಮತ್ತು ಅನನ್ಯತೆ ಒಂದು ಒಳ್ಳೆಯ ಕೃತಿ. ಪರ್ವದ ಕುರಿತು ಅಧ್ಯಯನ ಮಾಡುವಾಗ ಕುಮಾರವ್ಯಾಸ ಭಾರತದೊಡನೆ ಹೋಲಿಸಿ ನೋಡುವ ಆವಶ್ಯಕತೆಯನ್ನು ವಿವರಿಸಿದರು.

ಪ್ರಾಸ್ತಾವಿಕ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು, ವಿಭಾಗದ ಸಹಸಂಶೋಧಕರಾದ ಡಾ| ಉಮಾರಾಮ ರಾವ್‌ ಅವರ ಸಂಶೋಧನ ಸಂಪ್ರಬಂಧ ಭೈರಪ್ಪನವರ ಪರ್ವ; ಆಯಾಮ ಅನನ್ಯತೆ ಕೃತಿಯನ್ನು ಸಾಹಿತ್ಯ ಭಂಡಾರ, ಬೆಂಗಳೂರು ಅವರು ಪ್ರಕಟಗೊಳಿಸಿದ್ದು ಆ ಕೃತಿ ಇಂದು ಆನ್‌ಲೈನ್‌ ಮೂಲಕ ಬಿಡುಗಡೆಗೊಂಡಿದೆ.

ಕನ್ನಡದಲ್ಲಿ ಬರೆದು ಅಖಂಡ ಭಾರತದಲ್ಲಿ ಸಾಹಿತ್ಯ ಓದುಗರ ಪ್ರೀತಿಗೆ ಪಾತ್ರರಾದವರು ಎಸ್‌. ಎಲ್‌. ಭೈರಪ್ಪನವರು. ಅವರ ಪರ್ವದ ಕುರಿತು ಅನೇಕ ಒಳನೋಟಗಳಿಂದ ಕೂಡಿದ ಮಹತ್ವದ ಅಧ್ಯಯನ ಮಾಡಿದ ಕೃತಿ ಇಂದು ಬಿಡುಗಡೆಗೊಂಡಿದೆ. ಉಮಾ ಅವರದ್ದು ಬಹುಭಾಷಿಕ ಸಂವೇದನೆ. ವ್ಯಾಪಕ ಓದು, ಶಿಸ್ತುಬದ್ದ ಅಧ್ಯಯನದಲ್ಲಿ ಅವರು ನಿರತರಾಗಿದ್ದಾರೆ. ಶತಾವಧಾನಿ ಡಾ| ಆರ್‌.ಗಣೇಶ್‌ ಅವರು ಈ ಕೃತಿಯನ್ನು ಬಿಡುಗಡೆಗೊಳಿಸುರುವುದು ಅಭಿಮಾನದ ಸಂಗತಿ. ಭಾರತೀಯ ಸಾಹಿತ್ಯ, ಸಂಸ್ಕ್ರತಿಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಬೆರಳೆಣಿಕೆಯ ಬಹಳ ದೊಡ್ಡ ವಾಗ್ಮಿ, ವಿದ್ವಾಂಸರು ಗಣೇಶ್‌ ಅವರು ಎಂದು ನುಡಿದರು.

Advertisement

ಕೃತಿಯ ರಚನೆಯ ಕುರಿತು ಮಾತನಾಡಿದ ಡಾ| ಉಮಾರಾವ್‌ ಅವರು, ಡಾ| ಉಪಾಧ್ಯ ಅವರ ಸಮರ್ಥ ಮಾರ್ಗದರ್ಶನ ದೊರೆತಿದ್ದರಿಂದ ನಾನು ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಯಿತು. ಅದೇ ರೀತಿ ಭೈರಪ್ಪನವರು ಎಲ್ಲಿಯೂ ತಮ್ಮ ಅಭಿಪ್ರಾಯಗಳನ್ನು ಹೇರದೇ ನನಗೆ ಮುಕ್ತ ಬರವಣಿಗೆಯನ್ನು ಮಾಡಲು ಪ್ರೇರೇಪಿಸಿದ್ದನ್ನು ಮರೆಯುವಂತಿಲ್ಲ ಎಂದರು.ಕಾರ್ಯಕ್ರಮದಲ್ಲಿ ಡಾ| ಭೈರಪ್ಪನವರು ಉಪಸ್ಥಿತರಿದ್ದರು. ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಂಡರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಭೈರಪ್ಪನವರ ಪರ್ವ; ಆಯಾಮ, ಅನನ್ಯತೆ ಕೃತಿಯ ಕುರಿತು ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.ಬರಹಗಾರರಿಗೆ ಪೂರಕವಾದ ವಾತಾವರಣ ಮುಂಬಯಿಯಲ್ಲಿ ದೊರೆಯುತ್ತದೆ. ಈ ಕೃತಿಯನ್ನು ಬಿಡುಗಡೆಗೊಳಿಸಿದ ಶತಾವಧಾನಿ ಗಣೇಶ್‌ ಹಾಗೂ ಕೃತಿ ರಚಿಸಿದ ಉಮಾರಾವ್‌ ಇಬ್ಬರೂ ವಿಜ್ಞಾನ ಮತ್ತು ತಂತ್ರಜ್ಞಾನದ ಹಿನ್ನೆಲೆಯಿಂದ ಬಂದವರು. ಆದ್ದರಿಂದ ಅವರಲ್ಲಿ ಎಲ್ಲ ವಿಷಯಗಳ ಕುರಿತು ವಿಶ್ಲೇಷಣಾ ಮನೋಭಾವ ಇರುವುದು ಸಹಜ. ಉಮಾ ಅವರು ಪರ್ವವನ್ನು ಅರ್ಥ ಮಾಡಿಕೊಳ್ಳುವ ವಿಧಾನವೇ ಬೇರೆ. ಸಾಹಿತ್ಯದಲ್ಲಿ ಈ ತೆರನಾಗಿ ಸಾಹಿತ್ಯೇತರ ಕ್ಷೇತ್ರಗಳಿಂದ ಜನರು ಬಂದು ಕೃಷಿ ಮಾಡುವುದರಿಂದ ಬರವಣಿಗೆಯ ಕಸುವು ಹೆಚ್ಚುವುದು.-ಎಸ್‌. ಎಲ್‌. ಭೈರಪ್ಪ, ಹಿರಿಯ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next