Advertisement

ಒಂದು ಸ್ಪೂರ್ತಿಯ ಕಥೆ: ವಲಸಿಗರ ವಾಸಕ್ಕೆ ಮನೆಯನ್ನೇ ಕೊಟ್ಟ ಫುಟ್ ಬಾಲ್ ತಾರೆ ಭೈಚುಂಗ್ ಭುಟಿಯ

09:33 AM Apr 02, 2020 | keerthan |

ಗ್ಯಾಂಗ್ಟಕ್‌ (ಸಿಕ್ಕಿಂ): ಕೇಂದ್ರಸರ್ಕಾರ ಏಪ್ರಿಲ್‌ 14ರವರೆಗೆ ಇಡೀ ದೇಶವನ್ನೇ ಬಂದ್‌ ಮಾಡಿದೆ. ಬಹುಶಃ ದೇಶದಲ್ಲಿ ಹಿಂದೆಂದೂ ಕಂಡು ಕೇಳರಿಯದ ವಿದ್ಯಮಾನವಿದು. ಕೊರೊನಾದ ಹೊಡೆತದಿಂದ ಪಾರಾಗಲು ತೆಗೆದುಕೊಂಡ ಈ ನಿರ್ಧಾರ, ಕೆಲವರ ಪಾಲಿಗೆ ಅತ್ಯಂತ ಘಾತಕವಾಗಿದೆ. ದೇಶದ ಯಾವುದೋ ಮೂಲೆಯಿಂದ, ಇನ್ನಾವುದೋ ಮೂಲೆಗೆ ದಿನಗೂಲಿ ನೌಕರರಾಗಿ, ಕಟ್ಟಡ ಕಾರ್ಮಿಕರಾಗಿ ತೆರಳಿದ್ದವರು,ಈಗ ಅಲ್ಲಿರಲೂ ಆಗದೇ, ಹಿಂತಿರುಗಲೂ ಆಗದೇ ಪರದಾಡುತ್ತಿದ್ದಾರೆ. ತಾನಿರುವ ಸಿಕ್ಕಿಂ ರಾಜ್ಯದಲ್ಲಿ ಅಂತಹ ದಿನಗೂಲಿಗಳ ದಾರುಣ ಪರಿಸ್ಥಿತಿ ಕಂಡು ಕರಗಿರುವ ಭಾರತ ಫ‌ುಟ್‌ಬಾಲ್‌ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯ, ನಾಲ್ಕೂವರೆ ಮಹಡಿಗಳ ತಮ್ಮ ಮನೆಯನ್ನೇ ಆ ದಿನಗೂಲಿಗಳಿಗೆ ಉಳಿದುಕೊಳ್ಳಲು ಬಿಟ್ಟುಕೊಟ್ಟಿದ್ದಾರೆ.

Advertisement

ದೇಶದಲ್ಲಿ ಎಲ್ಲ ಕಡೆ ಸಾರಿಗೆ ಸಂಚಾರ ಬಂದ್‌ ಆಗಿದೆ. ಆದ್ದರಿಂದ ಅವರಿಗೆ ಹಿಂತಿರುಗಲು ಆಗುತ್ತಿಲ್ಲ. ಹಾಗಂತ ಇರುವ ಜಾಗದಲ್ಲಿ ನೆಲೆಯಿಲ್ಲ, ತಿನ್ನಲು ಅನ್ನವಿಲ್ಲ, ನಿತ್ಯದ ದುಡಿಮೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಗೋಳಿಗೆ ಮಾತಿನ ಮೂಲಕ ಮಾತ್ರವಲ್ಲದೇ, ಕೃತಿಯ ಮೂಲಕವೂ ಭುಟಿಯ ಸ್ಪಂದಿಸಿದ್ದಾರೆ. ತಮ್ಮ ಸಹ ಮಾಲಿಕತ್ವದ ಯುನೈಟೆಡ್‌ ಸಿಕ್ಕಿಂ ಫೇಸ್‌ಬುಕ್‌ ಖಾತೆಯಲ್ಲಿ ಈ ಬಗ್ಗೆ ಒಂದುಪ್ರಕಟಣೆ ಹಾಕಿದ್ದಾರೆ. ತಿನ್ನಲು ಅನ್ನವಿಲ್ಲದೇ, ಇರಲು ಜಾಗವಿಲ್ಲದೇ ಪರದಾಡುತ್ತಿರುವ ದಿನಗೂಲಿಗಳಿದ್ದರೆ ಇಲ್ಲಿ ಸಂಪರ್ಕಿಸಲು ತಿಳಿಸಿ ಎಂದು ಹೇಳಿದ್ದಾರೆ.

ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ನ ತಡಾಂಗ್‌ನ ಲಮ್ಸೆಯಲ್ಲಿ ಅವರೊಂದು ನೂತನ ಮನೆ ಕಟ್ಟಿಸುತ್ತಿದ್ದಾರೆ. ನಾಲ್ಕೂವರೆ ಮಹಡಿಗಳ ಅದು ಬಹುತೇಕ ಪೂರ್ಣವಾಗಿದೆ. ಸದ್ಯ ಅದರಲ್ಲಿ 100ಕ್ಕೂ ಅಧಿಕ ಜನ ವಾಸಿಸಬಹುದು.

ದಿನಗೂಲಿಗಳು ಸಾಮೂಹಿಕ ವಲಸೆ ಹೋಗುವುದು ಅವರ ಜೀವಕ್ಕೇ ಅಪಾಯಕಾರಿ ಎನ್ನುವುದು ಭೈಚುಂಗ್‌ ಅಭಿಪ್ರಾಯ. ಸದ್ಯ ಸಿಕ್ಕಿಂನಲ್ಲಿ ಒಂದೂ ಕೊರೊನಾ ಪ್ರಕರಣಗಳಿಲ್ಲ.

ಅಲ್ಲಿನ ಸರ್ಕಾರ ಸರ್ವಶಕ್ತಿ ಹಾಕಿ, ವೈರಸ್‌ ತಡೆಯಲು ಶ್ರಮಿಸುತ್ತಿದೆ. ಆದರೆ ಹೊರಗಿನ ರಾಜ್ಯಗಳಿಗೆ ಹೋಗುವಾಗ ಕೊರೊನಾ ಅಂಟಿಕೊಂಡರೆ ಸದ್ಯದ ಪರಿಸ್ಥಿತಿಯಲ್ಲಿ ಬದುಕುವುದು ಕಷ್ಟ. ಆರಂಭಿಕ ಹಂತದಲ್ಲಿ ವೈರಸ್‌ ಪತ್ತೆಯಾಗುವುದು ತಡವಾಗುವುದೇ ಕಾರಣ. ಇದನ್ನು ಮನಗಂಡೇ ಭುಟಿಯ ದಿನಗೂಲಿಗಳಿಗೆ ಒಂದು ವ್ಯವಸ್ಥೆ ಮಾಡಿ ಪ್ರಾರ್ಥಿಸುತ್ತಿರುವುದು.

Advertisement

ಊಟ, ವೈದ್ಯಕೀಯ ನೆರವಿಗೆ ಮನವಿ:
ತಡಾಂಗ್‌ನ ಅವರ ನಿವಾಸದಲ್ಲಿ ಆಶ್ರಿತರ ಸಂಖ್ಯೆ ಏರುತ್ತಿದೆ. ಅವರ ಊಟ, ವೈದ್ಯಕೀಯ ಪರೀಕ್ಷೆಗಳಿಗೂ ವ್ಯವಸ್ಥೆಯಾಗಬೇಕಿದೆ. ಅದಕ್ಕೆ ಭುಟಿಯ ಸ್ಥಳೀಯ ಸರ್ಕಾರಿ ಸಂಸ್ಥೆಗಳನ್ನು ಆಶ್ರಯಿಸಿದ್ದಾರೆ. ಇತರೆ ಜನರ ನೆರವನ್ನೂ ಕೇಳಿದ್ದಾರೆ. ತಮ್ಮ ಈ ಕೆಲಸ ದೇಶದ ಉಳಿದವರಿಗೆ ಸ್ಫೂರ್ತಿಯಾಗಬೇಕು, ವಲಸಿಗರನ್ನು ರಕ್ಷಿಸಬೇಕು ಎನ್ನುವುದು ಅವರ ಕಾಳಜಿ. ಅದು ಪ್ರತಿಯೊಬ್ಬರ ಹೃದಯವನ್ನೂ ಹೊಕ್ಕಲಿ ಎನ್ನುವುದು ಎಲ್ಲರ ಅಪೇಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next