Advertisement

ಭಾಗ್ಯಲಕ್ಷ್ಮೀ ಯೋಜನೆ 2020 ಮಾರ್ಚ್‌ವರೆಗೆ ವಿಸ್ತರಣೆಗೆ :ಜೆ.ಸಿ. ಮಾಧುಸ್ವಾಮಿ

09:54 AM Dec 13, 2019 | Sriram |

ಬೆಂಗಳೂರು: ಭಾಗ್ಯಲಕ್ಷ್ಮೀ ಯೋಜನೆಯನ್ನು 2020ರ ಮಾರ್ಚ್‌ ಅಂತ್ಯದವರೆಗೂ ಎಲ್‌ಐಸಿ ಸಂಸ್ಥೆಯೊಂದಿಗೆ ಒಪ್ಪಂದ ಮುಂದುವರಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, 2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗೆ ಹಿಂದಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸಕಾರ ನಿರ್ಲಕ್ಷ್ಯ ಮಾಡಿದ್ದರಿಂದ ಯೋಜನೆ ಅನುಷ್ಠಾನದಲ್ಲಿ ಪ್ರಗತಿ ಕಂಡಿರಲಿಲ್ಲ. ಈಗ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾಗ್ಯಲಕ್ಷ್ಮೀ ಯೋಜನೆಯನ್ನು ಸಕ್ರಿಯಗೊಳಿಸಲು ನಿರ್ಧರಿಸಲು ತೀರ್ಮಾನಿಸಲಾಗಿದೆ.

ರಾಜ್ಯ ಸರಕಾರ ಈ ಹಿಂದೆ ಎಲ್‌ಐಸಿಯೊಂದಿಗೆ ಹಣಕಾಸು ಪಾಲುದಾರಿಕೆ ಸಂಸ್ಥೆಯಾಗಿ ಒಪ್ಪಂದ ಮಾಡಿಕೊಂಡಿದ್ದು, ಆ ಒಪ್ಪಂದ 2020 ಅಂತ್ಯವಾಗುವುದರಿಂದ ಮುಂದಿನ ಬಜೆಟ್‌ನಲ್ಲಿ ಮತ್ತೆ ಯೋಜನೆಗೆ ಪ್ರತ್ಯೇಕ ಹಣ ನೀಡಲು ಸರಕಾರ ನಿರ್ಧರಿಸಿದೆ.

ಈ ಬಗ್ಗೆ ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಭಾಗ್ಯಲಕ್ಷ್ಮೀ ಯೋಜನೆಯನ್ನು 2020 ರ ಮಾರ್ಚ್‌ ಅಂತ್ಯದವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಎಲ್‌ಐಸಿಯೊಂದಿಗೆ ಪಾಲುದಾರಿಕೆಯಲ್ಲಿ ಯೋಜನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಪಟ್ಟದಕಲ್ಲು ಐತಿಹಾಸಿಕ ಕೇಂದ್ರವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ತೀರ್ಮಾನಿಸಲಾಗಿದ್ದು, ಪಟ್ಟದಕಲ್ಲು ಅಭಿವೃದ್ಧಿ ದೃಷ್ಟಿಯಿಂದ ಮಲಪ್ರಭಾ ನದಿಯ ದಂಡೆಯಲ್ಲಿ 29.25 ಕೋ. ರೂ. ವೆಚ್ಚದಲ್ಲಿ ವಾಣಿಜ್ಯ ಸಮುತ್ಛಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಪ್ಲಾಜಾದಲ್ಲಿ ರೆಸ್ಟೋರೆಂಟ್‌, ಬಯಲು ರಂಗ ಮಂದಿರ, ಸ್ಥಳೀಯ ಕಲೆಗಳ ಪ್ರದರ್ಶನ ಕೇಂದ್ರ, ಪ್ರವಾಸಿಗರ ವಿಶ್ರಾಂತಿ ಕೇಂದ್ರ ಎಲ್ಲವನ್ನೂ ಒಂದೇ ಸೂರಿನಡಿ ನಿರ್ಮಿಸಲಾಗುವುದು ಎಂದು ಹೇಳಿದರು.

Advertisement

ಈಗಾಗಲೇ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಕಟ್ಟದಲ್ಲಿ ಹಂಪಿ ವಿವಿ ಕೇಂದ್ರ ಇರುವುದನ್ನು ಹೊರತುಪಡಿಸಿ ಬೇರೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಆರ್ಯ ವೈಶ್ಯ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ತೀರ್ಮಾನ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಹಿಂದುಳಿದ ವರ್ಗದ ಆಯೋಗದಿಂದ ವರದಿ ಪಡೆಯಬೇಕಾಗುತ್ತದೆ. ಆನಂತರ ಮೀಸಲಾತಿ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಎಸ್ಸಿ-ಎಸ್ಟಿ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದ್ದು, ಜಗದೀಶ್‌ ಶೆಟ್ಟರ್‌, ಅಶ್ವತ್ಥ್ ನಾರಾಯಣ, ಸುರೇಶ್‌ ಕುಮಾರ್‌ ಮತ್ತು ಶ್ರೀರಾಮುಲು ಸದಸ್ಯರಾಗಿದ್ದಾರೆ ಎಂದು ಹೆಳಿದರು.

ಇನ್ನು ಮಹಿಳಾ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು ಮಂಡ್ಯ, ಚಾಮರಾಜನಗರ, ಕಲಬುರಗಿ, ಕೊಲಾರ, ಹಾಸನ, ಧಾರವಾಡದಲ್ಲಿ ಪ್ರತ್ಯೇಕ ವಸತಿ ನಿಲಯ ಕಟ್ಟಲು 15 ಕೋ. ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಜನವರಿಯಲ್ಲಿ 10 ದಿನ ಜಂಟಿ ಅಧಿವೇಶನ
2020ರ ಮೊದಲ ಜಂಟಿ ಅಧಿವೇಶನವನ್ನು ಜ. 20ರಿಂದ 30ರ ವರೆಗೆ ನಡೆಸಲು ತೀರ್ಮಾನಿಸಲಾಗಿದೆ. ರಜಾ ದಿನಗಳನ್ನು ಹೊರತುಪಡಿಸಿ 10 ದಿನಗಳ ಕಾಲ ಅಧಿವೇಶನ ನಡೆಸಲು ನಿರ್ಧರಿಸಲಾಗಿದ್ದು, ಜಂಟಿ ಅಧಿವೇಶನವಾಗಿರುವುದರಿಂದ ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜಾತಿ ಸಮೀಕ್ಷೆ ವರದಿ ಚರ್ಚೆ ಮುಂದೂಡಿಕೆ
ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಿದ್ದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ವರದಿಯ ಬಗ್ಗೆ ಗುರುವಾರ ನಡೆದ ಸಂಪುಟದಲ್ಲಿ ವಿಷಯ ಪ್ರಸ್ತಾವವಾಯಿತಾದರೂ ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲು ವಿಯಷವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಸಂಪುಟದ ಪ್ರಮುಖ ತೀರ್ಮಾನಗಳು
* ಸಹಕಾರ ಇಲಾಖೆಯಲ್ಲಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‌ಗೆ 1,550 ಕೋ.ರೂ. ಸಾಲಕ್ಕೆ ಸರಕಾರದ ಖಾತರಿ.
* ಅಂಗವಿಕಲರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಖರಿದಿಸಲು 15 ಕೋ.ರೂ. ಅನುದಾನ.
* ಕಲಬುರಗಿ ಜಿಲ್ಲೆಯ ಅಫ‌ಜಲ್‌ಪುರ ತಾಲೂಕಿನ ಭೀಮಾ ನದಿಗೆ ಸೇತುವೆ ಮತ್ತು ಬಾಂದಾರ ನಿರ್ಮಾಣಕ್ಕೆ 72 ಕೋ.ರೂ. ಅನುದಾನ
* ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿ ನೆರಿಯಾ ಹೊಳೆಗೆ ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ 14.97 ಕೋ. ರೂ. ಬಿಡುಗಡೆ
* ಬೆಂಗಳೂರು ಉತ್ತರ ತಾಲೂಕಿನಲ್ಲಿ ಎರಡು ಹೆಸರಘಟ್ಟ ಹಾಗೂ ರಾಜಾನುಕುಂಟೆ ಮಧುರೆ ಮಾರ್ಗವಾಗಿ ಎರಡು ಪರ್ಯಾಯ ರಸ್ತೆಗಳ ಅಭಿವೃದ್ಧಿಗೆ 12 ಕೋ. ರೂ. ಅನುದಾನ ಬಿಡುಗಡೆ.
* ಕೌಶಲಾಭಿವೃದ್ದಿ ಇಲಾಖೆ ವ್ಯಾಪ್ತಿಯಲ್ಲಿ ಕೌಶಲ್ಯ ಒಂದೆ ನಿಗಮದಿಂದ ತರಬೇತಿ ನೀಡಲು ಕೈಗೊಳ್ಳಲು ತೀರ್ಮಾನ.
* ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲುಕಿನ ಗಣಿ ಭಾದಿತ ಗ್ರಾಮಗಳಿಗೆ ತುಂಗಾಭದ್ರಾ ನದಿಯಿಂದ 18 ಕೆರೆಗಳಿಗೆ ಕುಡಿಯುವ ನೀರೊದಗಿಸಲು 243.3 ಕೋ.ರೂ. ಬಿಡುಗಡೆಗೆ ಒಪ್ಪಿಗೆ.
* ವಿಜಯಪುರ ಜಿಲ್ಲೆ ತಿಕೋಟಾ ಗ್ರಾ. ಪಂ. ಮತ್ತು ಕಲಬುರಗಿ ಜಿಲ್ಲೆಯ ಕಮಲಾಪುರ ಗ್ರಾ. ಪಂ.ನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಒಪ್ಪಿಗೆ.
* ರಾಜ್ಯದ 62,580 ಅಂಗನವಾಡಿ ಕಾರ್ಯಕರ್ತೆಯರು, 3,300 ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಸೀರೆ ಖರೀದಿಸಲು ಪ್ರತಿ ಸೀರೆಗೆ 400 ರೂ. ಗಳಂತೆ 10.20 ಕೋ. ರೂ. ಬಿಡುಗಡೆಗೆ ಅನುಮತಿ.
* ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಮೂಲ ಸೌಲಭ್ಯ ಅಭಿವೃದ್ಧಿ ಗೆ 5 ಕೋ. ರೂ. ಕೃಷ್ಣಾ ಜಲ ಭಾಗ್ಯ ನಿಗಮದಿಂದ ನೀಡಲು ತೀರ್ಮಾನ.
* ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 525 ಕೋ. ರೂ. ನೀಡಲು ಒಪ್ಪಿಗೆ.
* ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತ ಇಲಾಖೆಗೆ ಐಟಿಐ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಲು 16.98 ಕೋ. ರೂ. ನೀಡಲು ಒಪ್ಪಿಗೆ.
* ಕರ್ನಾಟಕ ಲೋಕಾಯುಕ್ತರು ತಮಗೆ ತನಿಖೆ ಮಾಡಲು ಆಗದ ಪ್ರಕರಣವನ್ನು ಉಪ ಲೋಕಾಯುಕ್ತಕ್ಕೆ ವರ್ಗಾಯಿಸಲು ಕಾನೂನು ತಿದ್ದುಪಡಿಗೆ ಒಪ್ಪಿಗೆ.

Advertisement

Udayavani is now on Telegram. Click here to join our channel and stay updated with the latest news.

Next