Advertisement
ಉತ್ತರಿಸಿದ ಪುತ್ತೂರು ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್, ನಿರ್ದಿಷ್ಟ ಯುನಿಟ್ ದಾಟಿದರೆ ಅದಕ್ಕೆ ಬಿಲ್ ಕಟ್ಟಬೇಕು. ಇಲ್ಲದಿದ್ದರೆ ನಾವು ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯ. ಮಾನವೀಯ ನೆಲೆಯಲ್ಲಿ ಅವರು ಕಂತಿನಲ್ಲಿ ಹಣ ಪಾವತಿಸಲಿ. ನಾವು ಮರು ಸಂಪರ್ಕ ನೀಡುತ್ತೇವೆ ಎಂದರು.
ಶಾಸಕ ಅಂಗಾರ ಮಾತನಾಡಿ, ಇಲಾಖೆ ನಿಯಮ ಮತ್ತು ಚುನಾವಣೆ ವೇಳೆ ರಾಜಕಾರಣಿಗಳು ಫ್ರೀ ವಿದ್ಯುತ್ ಎಂಬ ಪ್ರಚಾರ ನೀಡಿ ಮತ ಗಳಿಸುವ ತಂತ್ರ ಮಾಡುತ್ತಾರೆ. ಫಲಾನುಭವಿಯು ಬಿಲ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ಅವರು, ತಿಂಗಳಿಗೊಮ್ಮೆ ಬಿಲ್ ನೀಡುವಂತೆ ಸೂಚನೆ ನೀಡಿದರು. ಇದಕ್ಕೆ ಅಧಿಕಾರಿ ಒಪ್ಪಿಗೆ ಸೂಚಿಸಿದರು. ವಿದ್ಯುತ್ ಲೈನ್ ಹಾದು ಹೋಗಿರುವ ಸ್ಥಳದಲ್ಲೇ ಅರಣ್ಯ ಇಲಾಖೆ ಗಿಡ ನೆಡುತ್ತಿದೆ. ಗಿಡ ಬಲಿತಾಗ ಕಡಿಯಬೇಕಾಗುತ್ತದೆ. ದೂರದೃಷ್ಟಿ ಹೊಂದಿ ಕಾರ್ಯನ್ಮುಖವಾಗಬೇಕು ಎಂದು ಎ.ವಿ. ತೀರ್ಥರಾಮ ಹೇಳಿದರು. ಗ್ರಾಮಾಂತರ ಪ್ರದೇಶದಲ್ಲಿ ಲೈನ್ ಅಡಿಯಲ್ಲಿ ರಬ್ಬರ್ ಗಿಡಗಳು ಇದ್ದು, ತೆರವಿಗೆ ನೋಟಿಸ್ ನೀಡಬೇಕು ಎಂದು ಕೃಪಾಶಂಕರ ತುದಿಯಡ್ಕ ಆಗ್ರಹಿಸಿದರು. ಗ್ರಾ.ಪಂ.ಗಳಿಂದ ವಿದ್ಯುತ್ ಬಿಲ್ ಬಾಕಿ ಕುರಿತಂತೆ ಇರುವ ಸಮಸ್ಯೆಗಳ ಬಗ್ಗೆ ವೆಂಕಟ ವಳಲಂಬೆ ಅವರು ಎತ್ತಿದ ವಿಚಾರ ಕೆಲ ಕಾಲ ಚರ್ಚೆಗೆ ಗ್ರಾಸವಾಯಿತು. ಬಾಕಿ ಇರುವ ಮೊತ್ತ, ಬಡ್ಡಿಯಲ್ಲಿನ ಲೋಪ, ಮೆಸ್ಕಾಂ ಲೆಕ್ಕಾಧಿಕಾರಿ ಬಳಿ ಮಾಹಿತಿ ಕೊರತೆ ಬಗ್ಗೆ ಪ್ರಸ್ತಾವಿಸಲಾಯಿತು. ಮುಂದೆ ಎರಡು ತಿಂಗಳಿಗೊಮ್ಮೆ ಮೆಸ್ಕಾಂ ಗೆ ಬಿಲ್ ಪಾವತಿಸಲು ಸೂಕ್ತ ನಿರ್ದೇಶನ ನೀಡುವಂತೆ ತಾ.ಪಂ. ಅಧಿಕಾರಿಗೆ ಶಾಸಕರು ಸೂಚಿಸಿದರು.ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿ ಫಲಾನುಭವಿಯೊಬ್ಬರಿಗೆ ನ.ಪಂ. ನೀಡಬೇಕಾದ ಮೊತ್ತ ಪಾವತಿಸಿಲ್ಲ ಎಂದು ವಿನಯ ಕುಮಾರ್ ಕಂದಡ್ಕ ಗಮನ ಸೆಳೆದರು. ನಮ್ಮಲ್ಲಿ ಬಾಕಿ ಇಲ್ಲ. ಎಲ್ಲ ಪಾವತಿಸಿದ್ದೇವೆ ಎಂದು ಮುಖ್ಯಾಧಿಕಾರಿ ಉತ್ತರಿಸಿದರು. ಬಾಕಿ ಇದೆ ಅನ್ನುವುದಕ್ಕೆ ನಮ್ಮಲ್ಲಿ ದಾಖಲೆ ಇದೆ ಎಂದು ಕಂದಡ್ಕ ಮರು ಉತ್ತರಿಸಿದರು. ಈ ಬಗ್ಗೆ ಚರ್ಚೆ ನಡೆದಾಗ ಮಧ್ಯ ಪ್ರವೇಶಿಸಿದ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಅಧಿಕಾರಿಯಾಗಿ ನೀವು ಸೌಜನ್ಯದಿಂದ ವರ್ತಿಸಬೇಕು. ನಿಮ್ಮ ಮಾತಿನಲ್ಲಿ ಅದು ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೋಡಿಯಾಲಬೈಲು ನಿವಾಸಿ ಕೆಂಚ ಅವರ ಮನೆ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಹಾನಿ ಆಗಿದ್ದು, 9 ಸಾವಿರ ರೂ. ಮಾತ್ರ ಪರಿಹಾರ ಸಿಕ್ಕಿದೆ ಎಂದು ಹರೀಶ್ ರೈ ಉಬರಡ್ಕ ಸಭೆಯ ಗಮನ ಸೆಳೆದರು. ಈ ಬಗ್ಗೆ ಗಮನ ಹರಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.
Related Articles
ಸ್ಕಿಲ್ ಗೇಮ್ ನಿಯಂತ್ರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಂಗಾರ ಸೂಚನೆ ನೀಡಿದ ಸಂದರ್ಭ ಪ್ರತಿಕ್ರಿಯಿಸಿದ ಎಸ್.ಐ. ಮಂಜುನಾಥ, ಸ್ಕಿಲ್ ಗೇಮ್‌ಗೆ ನಗರದಲ್ಲಿ ನ.ಪಂ., ಗ್ರಾಮ ಮಟ್ಟದಲ್ಲಿ ಗ್ರಾ.ಪಂ. ಪರವಾನಿಗೆ ನೀಡುತ್ತವೆ. ಇಲ್ಲಿ ಪೊಲೀಸ್ ಇಲಾಖೆ ಏನೂ ಮಾಡುವಂತಿಲ್ಲ. ಅನಧಿಕೃತವಾಗಿ ಇದ್ದರೆ ಮಾಹಿತಿ ನೀಡಿ. ತತ್ ಕ್ಷಣ ತೆರವು ಮಾಡುತ್ತೇವೆ. ಪರವಾನಿಗೆ ಇದ್ದ ಕಡೆ ಏನು ಮಾಡುವಂತಿಲ್ಲ ಎಂದು ಉತ್ತರಿಸಿದರು.
Advertisement
ಜಾಲ್ಸೂರಿನಲ್ಲಿ ಸ್ಕಿಲ್ ಗೇಮ್ ಆರಂಭಿಸುವ ಮೊದಲೇ ಅವಕಾಶ ನೀಡದಂತೆ ಸ್ಥಳೀಯ ಗ್ರಾ.ಪಂ.ಗೆ ಮನವಿ ಮಾಡಿದ್ದೇವು. ಆದರೆ ಅಲ್ಲಿ ಅವಕಾಶ ಕೊಡಲಾಗಿದೆ. ನಗರದೊಳಗೆ ಇನ್ನೊಂದು ಹೊಸದಾಗಿ ಆರಂಭಗೊಳ್ಳುವ ಮಾಹಿತಿ ಇದೆ. ಈ ಬಗ್ಗೆ ದಾಖಲೆ ನೀಡುತ್ತೇವೆ ಎಂದು ಎಸ್.ಐ. ಖಡಕ್ ನುಡಿಗೆ ಸಭೆಯಲ್ಲಿದ್ದವರು ಪ್ರತಿಕ್ರಿಯಿಸಲಿಲ್ಲ.ಈ ಬಗ್ಗೆ ನ.ಪಂ. ಮುಖ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅಂಗಾರ, ಸ್ಕಿಲ್ ಗೇಮ್ ಗೆ ಪರವಾನಿಗೆ ಕೊಟ್ಟಿಲ್ಲ ಎಂದು ಸಭೆಗೆ ತಪ್ಪು ಮಾಹಿತಿ ನೀಡಬಾರದು. ಈ ಹಿಂದಿನ ಅವಧಿಯಲ್ಲಿ ಏನಾಗಿದೆ ಎಂದು ಮಾಹಿತಿ ಸಂಗ್ರಹಿಸಿ ಉತ್ತರಿಸುವುದನ್ನು ರೂಢಿಸಿಕೊಳ್ಳಿ ಎಂದರು. ಸ್ಕಿಲ್ ಗೇಮ್ ನಿಯಂತ್ರಣಕ್ಕೆ ಮಹೇಶ್ ಕುಮಾರ್ ಮೇನಾಲ ಆಗ್ರಹಿಸಿದರು.