Advertisement

ಚರ್ಚೆಯಿಂದ ಖಂಡ್ರೆ ಪಲಾಯನ: ಖೂಬಾ

04:29 PM Nov 02, 2020 | Suhan S |

ಬೀದರ: ಭ್ರಷ್ಟಾಚಾರ ಮತ್ತು ಜಿಲ್ಲೆಯ ಅಭಿವೃದ್ಧಿ ಕುರಿತು ನ. 5ರಂದು ನಗರದ ರಂಗ ಮಂದಿರದಲ್ಲಿ ಬಹಿರಂಗ ಚರ್ಚೆಗೆ ನಾನು ಒಪ್ಪಿಕೊಂಡು, ಇದೊಂದು ಮಾದರಿ ಚರ್ಚೆಯಾಗಲಿ ಎಂಬುದು ನನ್ನಾಶಯ.

Advertisement

ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈ ಚರ್ಚೆಯನ್ನು ಬೇರೆಡೆ ಕೊಂಡೊಯ್ಯಲು ಪ್ರಯತ್ನಿಸುತ್ತಿರುವುದು ವಿಷಾದನೀಯ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ. ಈ ಕುರಿತು ಈಶ್ವರ ಖಂಡ್ರೆಗೆ ಪತ್ರ ಬರೆದ ಸಂಸದ ಭಗವಂತ ಖೂಬಾ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಜಿಲ್ಲೆಯಲ್ಲಿ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇದು ವೇದಿಕೆಯಾಗಬಾರದು. ನನ್ನನ್ನು ಎರಡು ಬಾರಿ ಲಕ್ಕಿಯಿಂದ ಗೆದ್ದಿದ್ದೀರಿ ಎಂದು ಹೇಳಿದ್ದೀರಿ, ತಾವು ಓಟ್‌ ಬ್ಯಾಂಕ್‌- ತುಷ್ಟೀಕರಣದ ರಾಜಕಾರಣ ಮಾಡಿ 3 ಬಾರಿ ಗೆದ್ದಿದ್ದೀರಿ. ಇದರಲ್ಲಿ ನಿಮ್ಮ ಯಾವ ಪುರಷಾರ್ಥವಿದೆ?. ನಾನು ಈವರೆಗೆ ಭೀಮಣ್ಣಾ ಖಂಡ್ರೆಯವರ ಹೆಸರು ಎಲ್ಲಿಯೂ ತೆಗೆದುಕೊಂಡಿಲ್ಲ, ನಿಮ್ಮ ತಂದೆಯವರ ಹೆಸರು ಸ್ವತಃ ತಾವೇ ಈ ಚರ್ಚೆಯಲ್ಲಿ ಎಳೆದು ತಂದಿರುವಿರಿ ಎಂದಿದ್ದಾರೆ.

ಅಧಿಕಾರಿಗಳ ತನಿಖೆ ಆಧರಿಸಿ ಬಿಜೆಪಿ ರಾಜ್ಯಾಧ್ಯಕ್ಷರು ಭಾಲ್ಕಿ ಕ್ಷೇತ್ರದಲ್ಲಿ ಮನೆ ಹಗರಣ ಕುರಿತು ಮಾತನಾಡಿದ್ದರೆ ವಿನಃ ನನ್ನ ಪ್ರಚೋದನೆಯಿಂದಲ್ಲ. ಗಣೇಶ ಮೈದಾನದಲ್ಲಿ ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದ್ದೀರಿ. ನಾನು ನಗರದ ರಂಗಮಂದಿರದಲ್ಲಿ ಚರ್ಚೆಗೆ ಬರಲು ಒಪ್ಪಿಕೊಂಡಿದ್ದೇ. ಆದರೆ, ಆ ಸ್ಥಳ ತುಂಬ ಚಿಕ್ಕದು ಎಂದು ಹೇಳಿ ಖಂಡ್ರೆಯವರು ಚರ್ಚೆಯಿಂದ ಪಲಾಯನದ ವಾಮಮಾರ್ಗ ಅನುಸರಿಸುತ್ತಿದ್ದೀರಿ ಎಂದು ಹೇಳಿದ್ದಾರೆ.

ನನ್ನ ಆರೋಪಗಳಿಗೆ ಉತ್ತರಿಸುವ ಎದೆಗಾರಿಕೆ ನಿಮಗಿದ್ದರೆ ನೇರವಾಗಿ ಚರ್ಚೆಗೆ ಬನ್ನಿ. ಫಲಾನುಭವಿಗಳಿಗೆ ಉತ್ತರಿಸುವುದು ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ನಿಮ್ಮ ಜವಾಬ್ದಾರಿ. ನಿಮ್ಮ ಚಟ ತೀರಿಸಿಕೊಳ್ಳುವುದು ಬಿಟ್ಟು, ಚರ್ಚೆ ಮಾಡೋಣ ಬನ್ನಿ. ಜನ ಸೇರಿಸುವುದರಲ್ಲಿ ಜನರು ನಮ್ಮಿಬ್ಬರ ಸಾಮರ್ಥ್ಯ ನೋಡಿದ್ದಾರೆ. ನಮ್ಮಿಬ್ಬರ ಕಾರ್ಯಕರ್ತರು ಸೇರಿದ ಮೇಲೆ ಇಬ್ಬರಿಗೂ ಜೈಕಾರ ಹಾಕುತ್ತಾರೆ, ಪರಸ್ಪರ ವಿಷಯಗಳು ಸರಿಯಾಗಿ ಚರ್ಚೆಯಾಗಲಾರವು ಎಂದಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ನಮ್ಮ ವೈಯಕ್ತಿಕ ಭ್ರಷ್ಟಾಚಾರವೂ ಕೂಡ ಚರ್ಚೆಯಾಗಬೇಕು. ತಮ್ಮ  ವಿಚಾರದಲ್ಲಿ ಕಾಂಗ್ರೆಸ್‌ ಸಭೆ ಮಾಡುವುದಾದರೆ ಅದಕ್ಕೆ ನನ್ನ ಸಹಮತಿ ಇರುವುದಿಲ್ಲ. ಸಭೆಯೂ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನಡೆಸೋಣ, ನಿಮಗಿಷ್ಟವಿದ್ದ ಮತ್ತು ನಿಮ್ಮ ಅನುಕೂಲಕ್ಕಾಗಿ ನಾನು ನನ್ನ ಸಮಯ ವ್ಯರ್ಥ ಮಾಡುವುದಿಲ್ಲ, ನನಗೆ ಜನಸೇವೆ ಮಾಡಲು ಬಹಳಷ್ಟು ಕೆಲಸಗಳು ಇವೆ. ಸಮಯದ ಮೌಲ್ಯದ ಅರಿವು ನನಗಿದೆ.

Advertisement

ಬಹಿರಂಗ ಚರ್ಚೆಯನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ನಡೆಸಲು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಂಡೆಪ್ಪ ಖಾಶೆಂಪುರ್‌ ಒಪ್ಪಿಕೊಂಡಿದ್ದಾರೆ. ಆದರೆ, ಖಂಡ್ರೆಯವರಿಗೆ ಚರ್ಚೆಬೇಕಾಗಿಲ್ಲ. ಜನರನ್ನು ಸೇರಿಸಿದಾಗ, ಕಾನೂನು ಸುವ್ಯವಸ್ಥೆ ದಾರಿ ತಪ್ಪುತ್ತದೆ ಮತ್ತು ಕೋವಿಡ್‌ ನಿಯಮ ಗಮನದಲ್ಲಿಟ್ಟುಕೊಂಡು ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಅನುಮತಿ ನೀಡುವುದಿಲ್ಲ. ಆಗ ಸರ್ಕಾರ ಅನುಮತಿ ನೀಡಿಲ್ಲ ಎಂದು ಸರ್ಕಾರದ ಮೇಲೆ ಗೂಬೆ ಕೂರಿಸುವುದು ನಿಮ್ಮ ಕುತಂತ್ರ. ಇದು ಖಂಡ್ರೆಯವರ ಪೂರ್ವನಿಯೋಜಿತ ಯೋಚನೆಯಾಗಿದ್ದು, ಬಹಿರಂಗ ಚರ್ಚೆ ತಪ್ಪಿಸುವ ಹುನ್ನಾರ ಎಂಬುದು ಜನರ ಮಾತಾಗಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next