ತಾಳಿಕೋಟೆ: ಸಾಧಿಸಬೇಕೆಂಬ ಛಲವಿದ್ದರೆ ಅಂಗವಿಕಲತೆ ಅಡ್ಡಿಯಾಗದು ಎಂಬದನ್ನು ದ್ವಿತೀಯ ಪಿಯು ವಿದ್ಯಾರ್ಥಿನಿ ಭಾಗಮ್ಮ ಹೆಬ್ಟಾಳ ಕಾಲಿನಿಂದಲೇ ಪರೀಕ್ಷೆ ಬರೆಯುವುದರೊಂದಿಗೆ ತೋರಿಸಿದ್ದಾಳೆ.
ತಾಳಿಕೋಟೆ ಪಟ್ಟಣದ ಎಸ್.ಕೆ. ಪಪೂ ಮಹಾ ವಿದ್ಯಾಲಯದಲ್ಲಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಓದುತ್ತಿರುವ ಮೈಲೇಶ್ವರ ಗ್ರಾಮದ ಭಾಗಮ್ಮ ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ್ದಾರೆ. ಎರಡು ಕೈಗಳಲ್ಲಿ ಶಕ್ತಿ ಇಲ್ಲದ ಕಾರಣ ಕೈಗಳು ಬೆಳವಣಿಗೆ ಕಂಡಿಲ್ಲ.
ಹೀಗಾಗಿ ಚಿಕ್ಕವಳಿರುವಾಗಲೇ ಎಲ್ಲರಂತೆ ನಾನೂ ಶಾಲೆಗೆ ಹೋಗಬೇಕು, ಎಲ್ಲರಂತೆ ನಾನು ಶಿಕ್ಷಣದ ಮೂಲಕ ಸಾಧನೆ ಗುರಿ ಮುಟ್ಟಬೇಕೆಂಬ ಛಲದೊಂದಿಗೆ ಮುನ್ನಡೆದ ಭಾಗಮ್ಮ ಹೆಬ್ಟಾಳ ಪ್ರಾಥಮಿಕ ಹಂತದಲ್ಲಿಯೇ ಬಲ ಕಾಲಿನ ಬೆರಳಲ್ಲಿ ಪೆನ್ನನ್ನು ಹಿಡಿಯುವುದು, ಒಂದೊಂದೇ ಅಕ್ಷರಗಳನ್ನು ಮನಸ್ಸು ಕೊಟ್ಟು ಬಿಡಿಸುವುದನ್ನು ರೂಢಿಸಿಕೊಳ್ಳುತ್ತ ಪ್ರಾಥಮಿಕ ಶಿಕ್ಷಣ ಅಲ್ಲದೇ ಪ್ರೌಢ ಶಿಕ್ಷಣವನ್ನು ದಾಟಿ ತನ್ನ ಅಂಗವಿಕಲತೆ ಮೆಟ್ಟಿ ನಿಂತಿದ್ದಾರೆ.
ಯಾರ ಆಸರೆಯೂ ಇಲ್ಲದೇ ಪರಿಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿನಿ ಭಾಗಮ್ಮ ತನ್ನ ಕಾಲಿನ ಮೂಲಕವೇ ಪುಟ ತೀರುವುದು, ಪ್ರಶ್ನೆ ಪತ್ರಿಕೆಯನ್ನು ನೋಡಿಕೊಳ್ಳುವುದು, ಕಾಲಿನಲ್ಲಿ ಹಿಡಿದ ಪೆನ್ನಿನ ಮೂಲಕವೇ ಉತ್ತರ ಬಿಡಿಸುತ್ತಿರುವದು ಪರಿಕ್ಷಾರ್ಥಿಗಳಿಗೆ ಸಂಚಲವನ್ನು ಮೂಡಿಸಿದೆ.
ಸದ್ಯ ಎಸ್.ಕೆ. ಪಪೂ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯು ಶಿಕ್ಷಣ ಪಡೆದಿದ್ದು ಪಟ್ಟಣದ ಎಚ್.ಎಸ್. ಪಾಟೀಲ ಪಪೂ ಮಹಾ ವಿದ್ಯಾಲಯ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಅಂಗವಿಕಲತೆ ಹೊಂದಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಅವರ ಬೇಡಿಕೆಯಂತೆ ಕೂಡ್ರಲು ಬೆಂಚ್ ಗೋಡೆ ಆಸರೆಯನ್ನು ವಿದ್ಯಾರ್ಥಿನಿ ಭಾಗಮ್ಮ ಹೆಬ್ಟಾಳಗೆ ಎಚ್.ಎಸ್. ಪಾಟೀಲ ವಿದ್ಯಾ ಸಂಸ್ಥೆಯಿಂದ ವ್ಯವಸ್ಥೆ ಮಾಡಿಕೊಡಲಾಗಿದೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ಭಾಗಮ್ಮಳಿಗೆ ಸರ್ಕಾರದಿಂದಲೇ ಉಚಿತ ಶಿಕ್ಷಣ ಹಾಗೂ ಸೌಲಭ್ಯ ದೊರಕಬೇಕಾಗಿದೆ.
ಜಿ.ಟಿ. ಘೋರ್ಪಡೆ