ಸುರತ್ಕಲ್: ನವಮಂಗಳೂರು ಬಂದರಿಗೆ ಹೂಳೆತ್ತಲು ಬಂದ ಡ್ರಜ್ಜರ್ ಭಗವತಿ ಪ್ರೇಮ್ ಬಂದರಿನ ಬ್ರೇಕ್ ವಾಟರ್ ಬಳಿ ಕೆಟ್ಟು ನಿಂತು ಮುಳುಗುವ ಭೀತಿಯಿಂದ ಕಳೆದ ಅಕ್ಟೋಬರ್ ನಲ್ಲಿ ಗುಡ್ಡೆಕೊಪ್ಲ ಬೀಚ್ ಬಳಿ ತಂದು ನಿಲ್ಲಿಸಲಾಗಿದ್ದು, ಅದೀಗ ಒಂದು ವರ್ಷವನ್ನು ಪೂರ್ತಿಗೊಳಿಸಿದೆ. ಆದರೆ ಇದುವರೆಗೂ ಇದರ ವಿಲೇವಾರಿಗೆ ಕ್ರಮ ಜರುಗಿಸಲಾಗಿಲ್ಲ.
2019ರ ಅ.27ರಂದು ಮುಂಬೈ ಮೂಲದ ಮರ್ಕೇಂಟರ್ ಕಂಪನಿಯ ಭಗವತಿ ಪ್ರೇಮ್ ಡ್ರಜ್ಜರ್ ನ ಚುಕ್ಕಾಣಿ ತುಂಡಾಗಿ ಮುಳುಗುವ ಹಂತದಲ್ಲಿತ್ತು. ಬಳಿಕ ಬಂದರಿನ ಟಗ್ ಗಳು ಸುರಕ್ಷಿತವಾಗಿ ಗುಡ್ಡೆಕೊಪ್ಲ ಬೀಚ್ ಬಳಿ ಮುಳುಗದಂತೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದವು. ಇದಕ್ಕೂ ಮುನ್ನ ಆಳಸಮುದ್ರದಲ್ಲಿ ನಿಂತ ಸಂದರ್ಭ ಇದರೊಳಗಿದ್ದ ತೈಲ ಮತ್ತು ಕೀಲೆಣ್ಣೆ ಬ್ಯಾರಲ್ ಗಳನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು. ಹೀಗಾಗಿ ಸಮುದ್ರ ಮಾಲಿನ್ಯದ ಭೀತಿ ದೂರವಾಗಿತ್ತು. ನಿರ್ವಹಣೆ ವೆಚ್ಚ ನೀಡಲು ಡ್ರೆಜ್ಜರ್ ಮಾಲಕತ್ವದ ಕಂಪನಿ ವಿಫಲವಾದ ಬಳಿಕ ಸಮುದ್ರ ಮಾಲಿನ್ಯ ತಪ್ಪಿಸಲು ನವಮಂಗಳೂರು ಬಂದರು ಮಂಡಳಿ ಬೇಕಾದ ಸುರಕ್ಷಾ ಕ್ರಮಗಳನ್ನು ತಾನೇ ವೆಚ್ಚ ಭರಿಸಿತ್ತು.
ಸ್ಥಳೀಯವಾಗಿ ನಾಡದೋಣಿಗೆ ಹೆಚ್ಚಾಗಿ ಮೀನು ಸಿಗುವ ಭಾಗದಲ್ಲಿ ಡ್ರೆಜ್ಜರನ್ನು ನಿಲ್ಲಿಸಿರುವುದರಿಂದ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಡ್ರೆಜ್ಜರ್ ನ್ನು ಸಮುದ್ರ ತೀರದಿಂದ ಸಾಗಿಸಲು ಮೀನುಗಾರ ಮುಖಂಡರು ನಿರಂತರವಾಗಿ ಒತ್ತಾಯಿಸಿದ ಮೇರೆಗೆ ಎನ್ಎಂಪಿಟಿ ಡಿಜಿಸಿಎ ಮೂಲಕ ಮಾತುಕತೆ ನಡೆಸಿ ಹಡಗು ಒಡೆಯಲು ಕ್ರಮವನ್ನು ಕೈಗೊಂಡಿತ್ತು. ಆದರೆ ಮಾಲಿನ್ಯ ಭೀತಿ ಎದುರಾಗಿದ್ದರಿಂದ ಇದಕ್ಕೂ ವಿರೋಧ ವ್ಯಕ್ತವಾಯಿತು. ಇದಕ್ಕಾಗಿ ಟೆಂಡರ್ ಕರೆದು ಜೂ.30 ಕೊನೆಯ ದಿನ ನಿಗದಿಯಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಡ್ರೆಜ್ಜರ್ ನಿರ್ವಹಣೆಯಿಲ್ಲದೆ ತುಕ್ಕು ಹಿಡಿಯುತ್ತಾ ನಿಂತಿದೆ.
ಇದನ್ನೂ ಓದಿ:ಕಲ್ಲಿದ್ದಲು ಗಣಿಯಲ್ಲಿ ಭಾರೀ ದುರಂತ, 23 ಮಂದಿ ದಾರುಣ ಸಾವು, ಓರ್ವ ಪಾರು
ಅರೆಬರೆ ಒಡೆದರೆ ಅಪಾಯಕಾರಿ!
ಹಡಗು ದಡದಲ್ಲಿ ನಿಲ್ಲಿಸಿರುವುದರಿಂದ ಹಡಗು ಸುತ್ತ ನೀರಿನ ಸುಳಿ ಏಳುತ್ತದೆ.ಇಲ್ಲಿ ಪ್ರವಾಸಿಗರೇನಾದರೂ ಈಜಲು ಹೋದರೆ ಸುಳಿಗೆ ಸಿಲುಕಿ ಅಪಾಯಕ್ಕೆ ಈಡಾಗಬಹುದು. ಡಿ.ಜಿ ಶಿಪ್ಪಿಂಗ್ ಒಡೆಯುವ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ ಇದುವರೆಗೂ ಗುತ್ತಿಗೆ ಮಂಜೂರಾತಿ ಆಗಿಲ್ಲ. ಮೀನುಗಾರರು ಮೀನುಗಾರಿಕೆಗೆ ತೆರಳಲು ಸಮಸ್ಯೆ ಎದುರಿಸುತ್ತಿದ್ದಾರೆ. ಒಡೆಯುವ ಸಂದರ್ಭ ಹಾನಿಯಾದರೆ ಸ್ಥಳೀಯ ಮೀನುಗಾರರಿಗೆ ಸರಕಾರ ಪರಿಹಾರ ನೀಡಬೇಕು. ಇಲ್ಲದಿದ್ದರೆ ಈ ಭಾಗದಿಂದ ಇದನ್ನು ತೆರವುಗೊಳಿಸಬೇಕು.
ಈ ಹಿಂದೆ ತಣ್ಣೀರುಬಾವಿ ಭಾಗದಲ್ಲಿ ಹಡಗು ಮುಳುಗಿದಾಗ ಒಡೆದು ತೆಗೆಯಲಾಗಿತ್ತು. ಆದರೆ ಅಡಿ ಭಾಗದಲ್ಲಿ ಅವಶೇಷ ಉಳಿದ ಕಾರಣ ಮೀನುಗಾರಿಕಾ ದೋಣಿಗಳಿಗೆ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಮಾತ್ರವಲ್ಲದೇ ಬಲೆ ಸಿಲುಕಿಕೊಂಡರೆ ಲಕ್ಷಾಂತರ ನಷ್ಟವಾಗುತ್ತದೆ. ಹೀಗಾಗಿ ಒಡೆದು ತೆಗೆದರೂ ಪೂರ್ತಿಯಾಗಿ ಅವಶೇಷ ಬಿಡದೆ ಹಡಗು ತೆಗೆದು ಹಾಕಬೇಕು ಎಂಬುದು ಮೀನುಗಾರ ಮುಖಂಡ ಉಚ್ಚಿಲ ಮಹಾಜನ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಎಚ್. ಅವರ ಅಭಿಪ್ರಾಯ.
ಹಾಟ್ ಸ್ಪಾಟ್ ಆದ ಡ್ರಜ್ಜರ್ ಲಂಗರು ಸ್ಥಳ!
ಕಳೆದ ಒಂದು ವರ್ಷದಿಂದ ಭಗವತಿ ಪ್ರೇಮ್ ಡ್ರಜ್ಜರ್ ಲಂಗರು ಹಾಕಿದ ಸ್ಥಳ ಟೂರಿಸ್ಟ್ ಹಾಟ್ ಸ್ಪಾಟ್ ಆಗಿ ಬದಲಾಗಿದೆ. ಕಳೆದ ಒಂದು ವರ್ಷದಲ್ಲಿ ಲಕ್ಷಾಂತರ ಮಂದಿ ಈ ಸ್ಥಳವನ್ನು ಸಂದರ್ಶಿಸಿದ್ದಾರೆ. ಸಮುದ್ರ ಪಾಚಿ ಮೇಲೆದ್ದು ಸಮುದ್ರ ನೀಲಿ ಬಣ್ಣಕ್ಕೆ ತಿರುಗಿದಾಗ ರಾತ್ರಿ ಲಂಗರು ಹಾಕಿದ ಡ್ರೆಜ್ಜರ್ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಎಲ್.ಎನ್.ರಾವ್