Advertisement

ಭಾಗವತ ನಾರಾಯಣ ಮಾಟೆ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

01:00 AM Jul 13, 2017 | Harsha Rao |

ಕಾಸರಗೋಡು: ಅಡೂರು ಸಮೀಪದ ಮಾಟೆಬಯಲಿನ ಕನ್ನಡ ಮಲೆಯಾಳ ದ್ವಿಭಾಷಾ ಯಕ್ಷಗಾನ ಭಾಗವತ, ಆಕಾಶವಾಣಿ ದೂರದರ್ಶನ ಯಕ್ಷಗಾನ ಭಾಗವತ, ಚಿನ್ಮಯಾ ಯಕ್ಷಗಾನ ಕಲಾ ನಿಲಯದ ಪ್ರಧಾನ ಕಾರ್ಯದರ್ಶಿ ನಾರಾಯಣ ಮಾಟೆ ಅವರಿಗೆ ಈ ವರ್ಷದ ಕೇರಳ ಫೋಕ್‌ಲೋರ್‌ ಅಕಾಡೆಮಿಯು ಯಕ್ಷಗಾನ ಕಲಾವಿದನಿಗಿರುವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Advertisement

ಕಳೆದ ವರ್ಷ ಅವರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಮಹಾರಾಷ್ಟ್ರ ಘಟಕವು ಸೌಹಾರ್ದೋತ್ಸವ ಪ್ರಶಸ್ತಿ ನೀಡಿ ಗೌರವಿ ಸಿತ್ತು. ಕೇರಳದ ಪರಶ್ಶಿನಿಕಡವು ಆಯುರ್ವೇದ ಮೆಡಿಕಲ್‌ ಕಾಲೇಜಿನಲ್ಲಿ, ಬದಿಯಡ್ಕ ಗಡಿನಾಡ ಕಲಾ ಅಕಾಡೆಮಿ, ಮಾಟೆಡ್ಕ ದೇವರ ಮನೆ, ಮಾಟೆಬಯಲು ಶ್ರೀ ರಕ್ತೇಶ್ವರಿ ವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ, ಅಡೂರು ಪದಿ ಕಾಲಡ್ಕ ಕ್ಷೇತ್ರ ಸಮಿತಿಯಿಂದ, ಬದಿಯಡ್ಕದಲ್ಲಿ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಆದೂರು ಪಂಚಲಿಂಗೇಶ್ವರ ಯಕ್ಷಗಾನ ಸಂಘದ ವತಿಯಿಂದ, ಕಯ್ಯಣ್ಣಿ ದೇವರ ಮನೆ, ಕುಂಟಾರು ಶ್ರೀ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ.

ತನ್ನ ಎಳವೆಯಲ್ಲಿಯೇ ತಾಳಮದ್ದಳೆಯ ಓರ್ವ ಸಾಧಾರಣ ಅರ್ಥಧಾರಿಯಾಗಿದ್ದ ಅವರು ದಿ| ಅಡೂರು ಶ್ರೀಧರ ರಾಯರಲ್ಲಿ ತಾಳಮದ್ದಳೆ ಅರ್ಥಗಾರಿಕೆ, ವೇಷ ಗಾರಿಕೆ ಹಾಗೂ ಯಕ್ಷಗಾನದ ಇನ್ನಿತರ ವಿಷಯಗಳನ್ನು ಕರಗತ ಮಾಡಿಕೊಂಡರು. ಅನಂತರ ಭಾಗವತಿಕೆಯತ್ತ ಹೆಚ್ಚಿನ ಒಲವು ಬೆಳೆಸಿಕೊಂಡು ಓರ್ವ ಉತ್ತಮ ಭಾಗವತರಾಗಿ ಮೂಡಿಬಂದರು.

ಪ್ರಸ್ತುತ ಅವರು ತಮ್ಮ ಪರಿಸರದಲ್ಲಿ ಶ್ರೀ ಚಿನ್ಮಯಾ ಯಕ್ಷಗಾನ ಕಲಾನಿಲಯವೆಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೇಲ್ನೋಟಕ ರಾಗಿ ಅದನ್ನು ಬೆಳೆಸುತ್ತಾ ಬರುತ್ತಿದ್ದಾರೆ. ಅಲ್ಲದೆ ಅಲ್ಲಲ್ಲಿ ತಾಳಮದ್ದಳೆ ಕೂಟಗಳನ್ನು, ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಕಾರ್ಯಕ್ರಮಗಳನ್ನಿತ್ತು ಹೆಸರು ಪಡೆದಿರುತ್ತಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ತಮ್ಮ ತಂಡವನ್ನು ನೋಂದಾವಣೆ ಮಾಡಿಸಿ ಕಾರ್ಯಕ್ರಮವೀಯುತ್ತಾ ಪ್ರಸಿದ್ಧಿ ಪಡೆದಿರುತ್ತಾರೆ.

ಅಲ್ಲದೆ ಭಾರತ ಸರಕಾರದ ಸಾಂಗ್‌ ಆ್ಯಂಡ್‌ ಡ್ರಾಮಾ, ಕೇರಳ ಸರಕಾರದ ಏಯ್ಡ್ಸ್ ಕಂಟ್ರೋಲ್‌ ಸೊಸೆ„ಟಿಗಳಲ್ಲಿ ತಮ್ಮ ತಂಡವನ್ನು ನೋಂದಾಯಿಸಿ ದೇಶದ ಜನತೆಗೆ ಕೊಡಬಯಸುವ ಸಂದೇಶಗಳನ್ನು ಯಕ್ಷಗಾನದ ಮೂಲಕ ಕೇರಳದೆಲ್ಲೆಡೆ ತಲುಪಿಸಿ ಜನಪ್ರಿಯ ರಾಗಿದ್ದಾರೆ.

Advertisement

ಮಂಗಳೂರು ಆಕಾಶವಾಣಿ, ಮಡಿಕೇರಿ ಆಕಾಶವಾಣಿಗಳಲ್ಲಿ ಯಕ್ಷಗಾನ ಕಲಾವಿದರಾಗಿರುವ ಅವರು ಕೇರಳದ ಕಲ್ಲಿಕೋಟೆ, ಕಣ್ಣೂರು ಆಕಾಶವಾಣಿ ಯಲ್ಲೂ ಮಲೆಯಾಳ ಭಾಷೆಯಲ್ಲಿ ಭಾಗವತಿಕೆ ನಡೆಸಿಕೊಡುತ್ತಿದ್ದಾರೆ. 
ಓರ್ವ ಉತ್ತಮ ಸಂಘಟಕರೂ ಆಗಿರುವ ಮಾಟೆ ನಾರಾಯಣ ಅವರು ಬಿಡುವಿಲ್ಲದ ಕಲಾವಿದ. ತಮ್ಮ ತಂಡವನ್ನು ತಂಜಾವೂರಿಗೂ ತಲಪಿಸಿ ಪ್ರದರ್ಶನವಿತ್ತು ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next