Advertisement

ಕಿರುತೆರೆಯಲ್ಲೂ ಭಗವಾನ್‌ ಎಂಟ್ರಿ

02:41 PM Apr 15, 2019 | Lakshmi GovindaRaju |

ಕಳೆದ ವರ್ಷವಷ್ಟೇ “ಆಡುವ ಗೊಂಬೆ’ ಚಿತ್ರವನ್ನು ನಿರ್ದೇಶಿಸಿ ಅಚ್ಚರಿ ಮೂಡಿಸಿದ್ದ ಹಿರಿಯ ನಿರ್ದೇಶಕ ಭಗವಾನ್‌, ಆ ಬಳಿಕ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ಕೇಳಿದವರಿಗೆ ಅಚ್ಚರಿ ಎಂಬಂತಹ ವಿಚಾರ ಇಲ್ಲಿದೆ.

Advertisement

ಹೌದು, ಭಗವಾನ್‌ ಅವರಿಗೀಗ ವಯಸ್ಸು 85. ಇಷ್ಟಾದರೂ, ವಯಸ್ಸಿಗೆ ಮುಖ ತಿರುಗಿಸಿ, ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಅಪರಂಜಿ’ ಧಾರಾವಾಹಿಯಲ್ಲಿ ಮನೆಯ ಹಿರಿಯರ ಪಾತ್ರದಲ್ಲಿ ಭಗವಾನ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ 40ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಈ ಕುರಿತು ಹೇಳಿಕೊಳ್ಳುವ ಭಗವಾನ್‌, “ನಾನು ಮೊದಲಿಂದಲು ಸುಮ್ಮನೆ ಕೂರುವವನಲ್ಲ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸುವ ಅವಕಾಶ ಬಂತು. ಈ ಪಾತ್ರಕ್ಕೆ ನಾನೇ ಬೇಕು ಅಂದರು. ಹಾಗಾಗಿ, ನಟನೆ ಮಾಡುತ್ತಿದ್ದೇನೆ. ಈ ವಯಸ್ಸಲ್ಲಿ ಬ್ಯುಸಿಯಾಗಿರುವುದು ಒಂಥರಾ ಖುಷಿ, ಆರೋಗ್ಯಕ್ಕೂ ಒಳ್ಳೆಯದು’ ಎನ್ನುತ್ತಾರೆ ಭಗವಾನ್‌.

ಭಗವಾನ್‌ ಅವರಿಗೆ ನಟನೆ ಹೊಸದೇನಲ್ಲ. ಹಾಗೆ ನೋಡಿದರೆ ಇವರು ಚಿತ್ರರಂಗಕ್ಕೆ ಬಂದದ್ದು ಹೀರೋ ಆಗಿ. 1954 ರಲ್ಲಿ ಬಂದ “ಭಾಗ್ಯೋದಯ’ ಚಿತ್ರದಲ್ಲಿ ಎರಡನೇ ಹೀರೋ ಆಗಿದ್ದವರು. ಇನ್ನು 1958 ರಲ್ಲಿ ಬಂದ “ಮಂಗಳಸೂತ್ರ’ ಚಿತ್ರದಲ್ಲೂ ಪೂರ್ಣ ಪ್ರಮಾಣದ ನಾಯಕ ನಟರಾಗಿದ್ದರು. ಆಮೇಲೆ ಅವಕಾಶಕ್ಕಿಂತ ಮುಖ್ಯವಾಗಿ ನಿರ್ದೇಶಕರಿಗೆ ಹೆಚ್ಚಿನ ಸಂಭಾವನೆ ಸಿಗುತ್ತದೆ ಎಂಬ ಕಾರಣಕ್ಕೆ ಅವರು ನಿರ್ದೇಶನದತ್ತ ಮುಖ ಮಾಡಿದ್ದರು.

ಭಗವಾನ್‌ ಅವರಲ್ಲಿ ಇನ್ನೊಂದು ಅಚ್ಚರಿಯೂ ಅಡಗಿದೆ. ಕನ್ನಡ ಚಿತ್ರರಂಗದಲ್ಲಿ ಮೂರು ತಲೆಮಾರಿನ ನಟರ ಜೊತೆ ಭಗವಾನ್‌ ನಟಿಸಿದ್ದಾರೆ. ರಾಜ್‌ಕುಮಾರ್‌, ಅವರ ಮಕ್ಕಳಾದ ಶಿವಣ್ಣ, ರಾಘಣ್ಣ, ಅವರ ಮಕ್ಕಳ ಜೊತೆಯಲ್ಲೂ ನಟಿಸಿದ್ದಾರೆ. ಈಗ ಪುನೀತ್‌ ಅವರ “ಯುವರತ್ನ’ ಚಿತ್ರದಲ್ಲಿ ಜ್ಯೋತಿಷಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಒಂದೇ ಕುಟುಂಬದ, ಮೂರು ತಲೆಮಾರು ನಟರೊಂದಿಗೆ ನಟಿಸಿರುವ ಇವರು ಈಗ ಕಿರುತೆರೆ ಕಡೆ ಮುಖ ಮಾಡಿರುವುದು ವಿಶೇಷ.

Advertisement

“ಮೂರು ತಲೆ ಮಾರಿನಿಂದ ನಟಿಸುತ್ತಿರುವವರು ಸಿಕ್ತಾರೆ. ಆದರೆ, ಒಂದೇ ಕುಟುಂಬದಲ್ಲಿ ಮೂರು ಜನರೇಷನ್‌ ಜೊತೆ ಕೊಂಡಿಯಾಗಿ ನಟಿಸಿದ ಹೆಮ್ಮೆ ನನಗಿದೆ. ರಾಜ್‌ಕಪೂರ್‌ ಕೂಡ ಹೀಗೆ ನಟಿಸಿಲ್ಲ. ಈಗ ಕಿರುತೆರೆಯಲ್ಲೂ ನಟನೆ ಮುಂದುವರಿಸುತ್ತಾ ಕಲೆಯನ್ನು ಎಂಜಾಯ್‌ ಮಾಡುತ್ತಿದ್ದೇನೆ ‘ ಎಂಬ ಖುಷಿ ಭಗವಾನ್‌ ಅವರದು.

Advertisement

Udayavani is now on Telegram. Click here to join our channel and stay updated with the latest news.

Next