ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಡೆಸಲಾಗುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಗವದ್ಗೀತೆ ಮತ್ತು ಕುರಾನ್ ಪಠಣ ಮಾಡಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಗುತ್ತದೆ. ಇದರಡಿ ಹೊಸ ಸೇರ್ಪಡೆಯಾಗಿ ಧಾರ್ಮಿಕ ಪಠಣ ಸ್ಪರ್ಧೆ ಆಯೋಜಿಸುವಂತೆ ಸೂಚನೆ ನೀಡಲಾಗಿದೆ.
ಎಲ್ಲ ಹಂತಗಳಲ್ಲಿ ಈ ಸ್ಪರ್ಧೆ ನಡೆಸಲು ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಉರ್ದು ಮತ್ತು ಇತರ ಅಲ್ಪಸಂಖ್ಯಾಕ ಭಾಷಾ ಶಾಲೆಗಳ ನಿರ್ದೇಶನಾಲಯ ನಿರ್ದೇಶಕಿ ಸಿರಿಯಣ್ಣವರ್ ಲಲಿತಾ ಚಂದ್ರಶೇಖರ್ ಜ್ಞಾಪನಾ ಪತ್ರ ಹೊರಡಿಸಿದ್ದಾರೆ.
ಸ್ಪರ್ಧೆಗಳ ವಿವರ: 1ರಿಂದ 4ನೇ ಮಕ್ಕಳಿಗೆ ಭಗವದ್ಗೀತೆಯ 12ನೇ ಅಧ್ಯಾಯದ 1ರಿಂದ 5ನೇ ಶ್ಲೋಕ, 5ರಿಂದ 7ನೇ ವಿದ್ಯಾರ್ಥಿಗಳಿಗೆ 1ರಿಂದ 10ನೇ ಶ್ಲೋಕ ಮತ್ತು 8ರಿಂದ 10ನೇ ಮಕ್ಕಳಿಗೆ 1ರಿಂದ 15ರ ವರೆಗಿನ ಶ್ಲೋಕ.
ಕುರಾನ್‌ನಲ್ಲಿ 1ರಿಂದ 4ನೇ ತರಗತಿ ಮಕ್ಕಳಿಗೆ ಕುರಾನ್ ಸುರ್ ಎ ಫಾತೆಹ, 5ರಿಂದ 7ನೇ ತರಗತಿ ಮಕ್ಕಳಿಗೆ ಸುರ್ ಎ ರೆಹಮಾನ್, 8ರಿಂದ 10ನೇ ತರಗತಿ ಮಕ್ಕಳಿಗೆ ಸುರ್ ಎ ಯಾಸೀನ್ 4 ಮುಬೀನ್ ವರೆಗೆ ಪಠಣ ಸ್ಪರ್ಧೆ ಹಮ್ಮಿಕೊಳ್ಳುವಂತೆ ತಿಳಿಸಿದೆ.