ವಾರಾಣಸಿ: ಭಾರತವೆಂದರೆ, ಭಾರತೀಯ ಸಂಸ್ಕೃತಿಯೆಂದರೆ ಪವಿತ್ರ ಎಂಬ ಭಾವ ಅನೇಕ ವಿದೇಶಿಗರದ್ದು. ಎಷ್ಟೋ ಮಂದಿ ಇಲ್ಲಿನ ದೇಗುಲಗಳಿಗೆ ಭೇಟಿಕೊಟ್ಟು, ಗಂಗಾನದಿಯಲ್ಲಿ ಮಿಂದು, ಇಲ್ಲಿಯೇ ಪಿತೃಕಾರ್ಯ ನೆರವೇರಿಸಿ, ವಾಪಸಾದ ಘಟನೆಗಳನ್ನು ಕೇಳಿದ್ದೇವೆ. ಈಗ ಇಂಥ ವಿಸ್ಮಯಕ್ಕೆ ಸಾಕ್ಷಿ ಆದವರು ಪಾಕ್‌ನ ಒಬ್ಬ ಪ್ರಜೆ. ವಾರಾಣಸಿಯ ಕೇಂದ್ರ ಕಾರಾಗೃಹದಲ್ಲಿ 16 ವರ್ಷ ಜೈಲುಶಿಕ್ಷೆ ಅನುಭವಿಸಿ ಈಗ ಬಿಡುಗಡೆ ಆಗಿರುವ ಆತ, ತನ್ನ ತವರಿಗೆ ಭವದ್ಗೀತೆಯನ್ನು ಕೊಂಡೊಯ್ದಿದ್ದಾನೆ! ಈ ಮೂಲಕ ಶ್ರೀಕೃಷ್ಣನ ಸಂದೇಶಗಳೂ ಪಾಕಿಸ್ತಾನವನ್ನು ತಲುಪಿದ ಹಾಗಾಗಿದೆ.
ಆತನ ಹೆಸರು ಜಲಾಲುದ್ದೀನ್. 2001ರಲ್ಲಿ ಆತ ವಾರಾಣಸಿಯ ಕಂಟೋನ್ಮೆಂಟ್ ವಲಯದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ, ಪೊಲೀಸರು ಆತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಭಾರತದ ಪ್ರಮುಖ ಪ್ರದೇಶಗಳ ನಕ್ಷೆಗಳನ್ನೂ ಆತನಿಂದ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ, 16 ವರ್ಷ ಜೈಲು ಶಿಕ್ಷೆಯನ್ನೂ ನ್ಯಾಯಾಲಯ ಪ್ರಕಟಿಸಿತ್ತು. ಆದರೆ, ಪೊಲೀಸರು ಕಂಡಂತೆ ಅಂದು ಸಂಪೂರ್ಣವಾಗಿ ಭಾರತೀಯ ಸಂಸ್ಕೃತಿಯ ದ್ವೇಷಿಯಾಗಿದ್ದ, ಜಲಾಲುದ್ದೀನ್ ಈಗ ಭಗವದ್ಗೀತೆಯಿಂದಲೇ ಮನಃಪರಿವರ್ತನೆ ಮಾಡಿಕೊಂಡು, ಶಾಂತಮೂರ್ತಿಯಂತೆ ತನ್ನ ದೇಶಕ್ಕೆ ಮರಳಿದ್ದಾನೆ.
ಜೈಲಿಗೆ ಕಾಲಿಟ್ಟ ಕೆಲವು ದಿನಗಳ ನಂತರ, ಇತರೆ ಕೈದಿಗಳು ಭಗವದ್ಗೀತೆಯನ್ನು ಪಠಿಸುತ್ತಿದ್ದುದ್ದನ್ನು ನೋಡಿದ ಜಲಾಲುದ್ದೀನ್, ಮೊದ ಮೊದಲು ತಿರಸ್ಕಾರ ಭಾವದಿಂದ ವರ್ತಿಸುತ್ತಿದ್ದನಂತೆ. ಆದರೆ, ಒಬ್ಬ ಸಹಕೈದಿಯು ಭಗವದ್ಗೀತೆಯ ಮಹತ್ವವನ್ನು ತಿಳಿಸಿದ್ದರಿಂದ, ಜಲಾಲುದ್ದೀನ್ ಸಂಪೂರ್ಣವಾಗಿ ಆ ಪವಿತ್ರ ಗ್ರಂಥಕ್ಕೆ ಮನಸೋತಿದ್ದಾನೆ. ಕೆಲ ತಿಂಗಳಿನಲ್ಲಿಯೇ ಸಂಸ್ಕೃತವನ್ನೂ ಅಭ್ಯಸಿಸಿ, ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಕಂಠಪಾಠ ಮಾಡಿದ್ದಾನೆ. “ಮಾನಸಿಕ ಶಾಂತಿಗಾಗಿ ನಾನು ಚಡಪಡಿಸುತ್ತಿದ್ದೆ. ಆದರೆ, ಭಗವದ್ಗೀತೆಯ ಪಠಣದ ನಂತರ ನನ್ನ ಮನಸ್ಸಿಗೆ ಶಾಂತಿ ಲಭಿಸಿದೆ’ ಎಂದು ಪೊಲೀಸರೊಂದಿಗೂ ಆತ ಹೇಳಿಕೊಂಡಿದ್ದಾನೆ.
ಜಲಾಲುದ್ದೀನ್ ಬದುಕಿನಲ್ಲಿ ಇಷ್ಟು ಮಾತ್ರವೇ ಬದಲಾವಣೆಗಳಲ್ಲ. ಬಂಧಿಸುವ ವೇಳೆ ಈತ ಪ್ರೌಢಶಿಕ್ಷಣವನ್ನಷ್ಟೇ ಪೂರೈಸಿದ್ದ. ಭಗವದ್ಗೀತೆಯ ಪಠಣದನ ನಂತರ, ಜೈಲಿನಲ್ಲಿಯೇ ಇದ್ದು ಎಂ.ಎ. ಓದಲು ನಿರ್ಧರಿಸಿದ. ಅದರಂತೆ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಿಂದ ಎಂ.ಎ. ಪದವಿಯನ್ನೂ ಪಡೆದ. ಅಲ್ಲದೇ, ಎಲೆಕ್ಟ್ರಿಷಿಯನ್ ಕೋರ್ಸನ್ನೂ ಮುಗಿಸಿ, ಜೈಲಿನಲ್ಲಿ ವಿದ್ಯುತ್ ಸಮಸ್ಯೆಗಳಿದ್ದರೆ ತಾನೇ ಸರಿಪಡಿಸುತ್ತಿದ್ದ. ಕೈದಿಗಳಿಗೆ ಏರ್ಪಡಿಸುತ್ತಿದ್ದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅಂಪೈರ್ ಆಗುವ ಮೂಲಕ ಅತ್ಯುತ್ತಮ ತೀರ್ಪುಗಳನ್ನೂ ನೀಡುತ್ತಿದ್ದ ಎಂದು ಜೈಲಿನ ಹಿರಿಯ ಅಧಿಕಾರಿ ಅಂಬರೀಶ್ ಗೌಡ್ ಹೇಳಿದ್ದಾರೆ.ಅಂದಹಾಗೆ, ಜಲಾಲುದ್ದೀನ್‌ನನ್ನು ವಾರಾಣಸಿಯ ವಿಶೇಷ ಪೊಲೀಸ್ ತಂಡವು, ಅಮೃತ್‌ಸರಕ್ಕೆ ಕರೆದೊಯ್ದು, ಅಲ್ಲಿನ ವಾಘಾ ಗಡಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.