ಭದ್ರಾವತಿ: ಲಾಕ್‌ಡೌನ್ ಮುಗಿಯಲು ಕೆಲವೇ ದಿನ ಬಾಕಿ ಉಳಿದಿದ್ದು ಕ್ಷೇತ್ರದ ಜನತೆ ಎಂದಿನಂತೆ ಮನೆಯೊಳಗಿದ್ದು ಕೋವಿಡ್ ನಿಯಂತ್ರಿಸಲು ಸಹಕಾರ ನೀಡಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಮನವಿ ಮಾಡಿದರು.
ಕೋವಿಡ್ ಕುರಿತಂತೆ ನಗರಸಭೆ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ನಿಯಂತ್ರಿಸುವಲ್ಲಿ ತಾಲೂಕು ಆಡಳಿತ ಸಾಕಷ್ಟು ಶ್ರಮ ವಹಿಸುತ್ತಿದೆ. ತಾಲೂಕಿನ ಗಡಿ ಭಾಗಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ರೈತರಿಗೆ, ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಲಾರಿ ಮಾಲೀಕರಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ವರ್ತಕರು ಅಂಗಡಿ ತೆರೆಯುವ ವಿಚಾರದಲ್ಲಿಯೂ ಕೆಲವು ಗೊಂದಲಗಳಿವೆ. ಕೆಲವು ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವುದಾಗಿ ಕೇಳಿ ಬರುತ್ತಿದೆ. ಅವುಗಳನ್ನು ಸಂಬಂಧಿಸಿದ ಅ ಧಿಕಾರಿಗಳು ಪರಿಹರಿಸಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
ತಾಲೂಕು ಆರೋಗ್ಯಾ ಧಿಕಾರಿ ಡಾ| ಎಂ.ಆರ್. ಗಾಯತ್ರಿ ಮಾತನಾಡಿ, ವಿದೇಶದಿಂದ ಬಂದಿದ್ದ 87 ಜನರಲ್ಲಿ 86 ಜನರ ಕ್ವಾರಂಟೈನ್ ಮುಗಿದಿದ್ದು ಅಂತರ ರಾಜ್ಯದಿಂದ 342 ಜನ ಬಂದಿದ್ದು 245 ಜನರು ಮುಗಿಸಿದ್ದಾರೆ, ಹೊರಜಿಲ್ಲೆಯಿಂದ 6559 ಜನ ಬಂದಿದ್ದು 5048 ಜನ ಕ್ವಾರಂಟೈನ್ ಮುಗಿಸಿದ್ದು ಇನ್ನುಳಿದ 1491 ಜನರ ಕ್ವಾರಂಟೈನ್ ಮುಗಿಯಬೇಕಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿ ಬಿ.ಸಿ. ಶಶಿಧರ್ ಮಾತನಾಡಿ, ತಾಲೂಕಿನಲ್ಲಿ ಭತ್ತ ಕಟಾವು ಹಂತಕ್ಕೆ ಬಂದಿದ್ದು ಕಟಾವು ಮಾಡಲು ತಮಿಳುನಾಡಿನಿಂದ ಕಟಾವು ಯಂತ್ರದ ಲಾರಿಗಳು ಬರುತ್ತಿವೆ. ಆದರೆ ಕೆಲ ಲಾರಿಗಳಿಗೆ ತಾಲೂಕಿನ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆಹಿಡಿಯುತ್ತಿದ್ದಾರೆ ಎಂದು ದೂರಿದರು. ತಹಶೀಲ್ದಾರ್ ಸೋಮಶೇಖರ್ ಮಾತನಾಡಿ, ತಮಿಳು ನಾಡಿನಿಂದ ಬರುವ ಲಾರಿ ಡ್ರೈವರ್ ಹಾಗೂ ಸಹಾಯಕರೊಂದಿಗೆ ಸ್ಥಳೀಯ ರೈತರು ನೇರವಾಗಿ ಮಾತುಕತೆಗಳು ನಡೆಸದಂತೆ ನೋಡಿಕೊಳ್ಳಿ, ಲಾರಿ ಚಾಲಕರು ಇಲ್ಲಿನ ಟ್ರಾನ್ಸ್‌ಪೋರ್ಟ್ ಆಪೀಸಿನಲ್ಲಿ ಉಳಿದುಕೊಂಡಲ್ಲಿ ಅವರನ್ನು ಇಲ್ಲಿಯ ಜನರೊಂದಿಗೆ ರೆಯದಂತೆ ನೋಡಿಕೊಳ್ಳಿ. ಎಲ್ಲರ ಆರೋಗ್ಯ ತಪಾಸಣೆ ಕಡ್ಡಾಯ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಕಾಂತರಾಜ್ ಮಾತನಾಡಿ, ಎಲ್ಲೆಡೆ ಬಾಳೆ ಬೆಳೆ ಅಧಿಕವಾಗಿದೆ. ಕೊಳ್ಳಲು ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ. ಕೆಜೆ ಬಾಳೆಹಣ್ಣಿನ ಬೆಲೆ 10 ರೂ. ಆಗಿದೆ. ಟ್ರಾನ್ಸ್‌ಪೊàರ್ಟ್ ಖರ್ಚು ಸಹ ತುಂಬಲು ಸಾಧ್ಯವಾಗದಂತಾಗಿದೆ. ಎಪಿಎಂಸಿಯಲ್ಲಿಯೂ ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತನೇ ನೇರವಾಗಿ ಮಾರಾಟ ಮಾಡಲು ಹೋದರೆ ಪೊಲೀಸರಿಂದ ತೊಂದರೆಯಾಗುತ್ತಿದೆ ಎಂದರು. ತಾಪಂ ಇಒ ತಮ್ಮಣ್ಣಗೌಡ, ಪೌರಾಯುಕ್ತ ಮನೋಹರ್ ಮಾತನಾಡಿದರು. ಸಭೆಯಲ್ಲಿ ಡಿವೈಎಸ್‌ಪಿ ಸುಧಾಕರ್ ನಾಯ್ಕ, ಶಿಶು ಅಭಿವೃದ್ಧಿ ಅಧಿಕಾರಿ ಸುರೇಶ್, ತಾಲೂಕು ವೈದ್ಯಾ ಧಿಕಾರಿ ಡಾ| ಮಲ್ಲಪ್ಪ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.