Advertisement

ರೈತರ ಬದುಕು ಹಸನಾದರೆದೇಶ ಸುಭಿಕ್ಷ: ರಾಘವೇಂದ್ರ

04:01 PM Mar 02, 2020 | Naveen |

ಭದ್ರಾವತಿ: ರೈತನ ಬದುಕು ಸುಖವಾಗಿದ್ದರೆ ದೇಶವೇ ಸುಖವಾಗಿರುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಶನಿವಾರ ಗೊಂದಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಮಿಲ್ಟ್ರಿಕ್ಯಾಂಪ್‌ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಒಕ್ಕೂಟದ ನೂತನ ಕಟ್ಟಡ ಹಾಗೂ ಗೊಂದಿ ಅಣೆಕಟ್ಟಿನ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಆಹಾರ ಧಾನ್ಯ ಬೆಳೆಯಲು ರೈತನಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ಮರೆಯಬಾರದು. ಎಲ್ಲರಿಗೂ ಅನ್ನ ನೀಡುವ ರೈತನ ಕಷ್ಟವನ್ನು ದೂರಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಆ ಯೋಜನೆಗಳ ಫಲವನ್ನು ರೈತರಿಗೆ ತಲುಪಿಸಿದಾಗ ಸರ್ಕಾರದ ಯೋಜನೆಗಳ ಉದ್ಧೇಶ ಈಡೇರಿದಂತಾಗುತ್ತದೆ. ಕೃಷಿ ಮತ್ತು ತಂತ್ರಜ್ಞಾನಗಳ ಪರಸ್ಪರ ಪೂರಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್‌.ಎಂ.ವಿಶ್ವೇಶ್ವರಯ್ಯ ಈ ನೆಲದಲ್ಲಿ ಕೈಗೊಂಡಿರುವ ಕಾರ್ಯಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಇಂತಹ ಮಹಾನ್‌ ವ್ಯಕ್ತಿಯನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭದ್ರಾ ಜಲಾಶಯ ನಿರ್ಮಿಸುವ ಮೂಲಕ ಇಲ್ಲಿನ ರೈತರ ಬಾಳಿಗೆ ಬೆಳಕು ನೀಡಿದ್ದಾರೆ. ಗೊಂದಿ ಅಣ್ಣೆಕಟ್ಟಿನ ವ್ಯಾಪ್ತಿಯಲ್ಲಿ ಬರುವ ಒಕ್ಕೂಟಗಳು ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಜೊತೆಗೆ ನೀರಾವರಿ ಯೋಜನೆಗಳಿಗೆ ಸಾಕಷ್ಟು ಅನುದಾನ ಸಹ ಬಿಡುಗಡೆಗೊಳಿಸಿದೆ. ಒಕ್ಕೂಟದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

Advertisement

ಶಾಸಕ ಬಿ.ಕೆ. ಸಂಗಮೇಶ್ವರ್‌ ಮಾತನಾಡಿ, ಕ್ಷೇತ್ರದ ರೈತರ ಬೇಡಿಕೆಗಳನ್ನು ಈಡೇರಿಸಿಕೊಡುವ ಜೊತೆಗೆ ವಿಐಎಸ್‌ ಎಲ್‌ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಸದರಿಗೆ ಮನವಿ ಮಾಡುತ್ತೇನೆ ಎಂದರು.

ಒಕ್ಕೂಟದ ಅಧ್ಯಕ್ಷ ಬಿ.ಪಿ. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಜೆ.ಪಿ. ಯೋಗೇಶ್‌, ಎಸ್‌. ಮಣಿಶೇಖರ್‌, ವೀರಭದ್ರಪ್ಪ ಪೂಜಾರಿ, ರೇಖಾ ಉಮೇಶ್‌, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್‌, ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ಡಾ| ಶ್ರೀನಿವಾಸ ಮುದ್ರಕರ್ತ, ಬಿಆರ್‌ಎಲ್‌ಬಿಸಿ ನಂ.4ರ ಅಧೀಕ್ಷಕ ಇಂಜಿನಿಯರ್‌ ಆರ್‌. ರವಿಚಂದ್ರ, ಒಕ್ಕೂಟದ ಉಪಾಧ್ಯಕ್ಷ ಫರೀದ್‌ ಖಾನ್‌, ತಾಪಂ ಸದಸ್ಯ ಮಂಜುನಾಥ್‌ ಕೆ. ಕದಿರೇಶ್‌, ಮುಖಂಡರಾದ ಮಂಗೋಟೆ ರುದ್ರೇಶ್‌, ಕದಿರೇಶ್‌, ಜಿ. ಆನಂದಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next