Advertisement

ಕರೊನಾ ಭೀತಿ; ಕಿನಿಕಲ್‌ ಮಾಸ್ಕ್ ಗೆ ಹೆಚ್ಚಿದ ಬೇಡಿಕೆ

01:15 PM Mar 06, 2020 | Naveen |

ಭದ್ರಾವತಿ: ವಿಶ್ವದ ಹಲವು ಭಾಗಗಳಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದು, ಭಾರತಕ್ಕೂ ಕಾಲಿಟ್ಟಿರುವ ಮಾರಕ ಕರೊನಾ ವೈರಸ್‌ ಭೀತಿ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

Advertisement

ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕರೊನಾ ರೋಗ ಪತ್ತೆಯಾಗಿಲ್ಲ ಎಂದು ತಿಳಿಸಿ ನಾಗರಿಕರು ಅನಗತ್ಯಭಯ ಗೊಳ್ಳುವ ಅಗತ್ಯವಿಲ್ಲವೆಂದು ಹಾಗೂ ಸುಳ್ಳು ಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರೂ ಸಹ ಕರೊನಾ ವೈರಸ್‌ ಭೀತಿ ಭದ್ರಾವತಿ ತಾಲೂಕಿನ ಜನರಲ್ಲಿ ಸಹ ಎಲ್ಲೆಡೆಯಂತೆ ಆತಂಕ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗೆ ಕಳೆದ ಎರಡು ದಿನದಿಂದ ಬೇಡಿಕೆ ಹೆಚ್ಚಾಗಿದೆ. ಈ ಕುರಿತಂತೆ ಮಾತನಾಡಿದ ರಂಗಪ್ಪ ವೃತ್ತದ ಬಳಿಯಿರುವ ಸವಿತಾ ಮೆಡಿಕಲ್ಸ್‌ ಮಾಲೀಕರು ಕಳೆದ 15 ದಿನದಿಂದಲೂ ಕ್ಲಿನಿಕಲ್‌ ಮಾಸ್ಕ್ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಮಾಸ್ಕ್ ಪೂರೈಕೆ ಆಗುತ್ತಿಲ್ಲ. ಪೊಲೀಸ್‌ ಇಲಾಖೆ, ನರ್ಸ್‌ತರಬೇತಿ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಂದ ಕ್ಲಿನಿಕಲ್‌ ಮಾಸ್ಕ್ಗೆ
ಅಧಿಕ ಪ್ರಮಾಣದ ಬೇಡಿಕೆ ಇದೆ. ಆದರೆ ನಮ್ಮಲ್ಲಿ ಅವರ ಬೇಡಿಕೆ ಪೂರೈಸುವಷ್ಟರ ಮಟ್ಟಿಗೆ ಸ್ಟಾಕ್ಸ್‌ ಇಲ್ಲ. ಅದಕ್ಕೆ ಕಾರಣ ಈ ಹಿಂದೆ ರೂ.6 ಅಥವಾ 7 ರೂ.ಗಳಿಗೆ ನಮಗೆ ದೊರಕುತ್ತಿದ್ದ ಕ್ಲಿನಿಕಲ್‌ ಮಾಸ್ಕ್ಗೆ ಹೋಲ್‌ಸೇಲ್‌ ಮಾರಾಟಗಾರರು 30 ರೂ. ಗಳಿಗೆ ಮಾರಾಟ ಮಾಡುವ ಪರಿಸ್ಥಿತಿಯಿದೆ ಎಂದು ಹೇಳಿದರು.

ಚೆನ್ನಗಿರಿ ರಸ್ತೆಯಲ್ಲಿರುವ ಗಣೇಶ್‌ ಮೆಡಿಕಲ್ಸ್‌ ಮಾಲೀಕರು ನಮ್ಮಲ್ಲಿ ಈ ಹಿಂದೆ ತರಿಸಿದ್ದ ಸ್ಯಾನಿಟೈಸರ್‌ ಪೈಕಿ ಕೆಲವೇ ಕೆಲವು ಪೀಸ್‌ ಉಳಿದಿದ್ದು ಅವುಗಳನ್ನು 6ರೂ.ಗಳಿಗೆ ಮಾರಾಟ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆಯೂ ಸಹ ಹೆಚ್ಚಾಗಿದ್ದು, ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ ಎಂದು ತಿಳಿಸುತ್ತಾರೆ.

ಶಾಲೆಗಳಲ್ಲಿ ಮುಜಾಗ್ರತೆ ಅರಿವು: ನಗರದ ಪ್ರಮುಖ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಶುಚಿತ್ವದ ಬಗ್ಗೆ ತಿಳಿಸಿ ಕರೊನಾ ರೋಗದ ಗುಣ ಲಕ್ಷಣಗಳನ್ನು ವಿವರಿಸುವುದರ ಜೊತೆಗೆ ಮಕ್ಕಳು ಶುಚಿತ್ವದ ಬಗ್ಗೆ ವಹಿಸಬೇಕಾದ ಅಂಶಗಳನ್ನು ತಿಳಿಸುತ್ತಾ ಇರುವುದರಿಂದ, ಮಕ್ಕಳ ಪೋಷಕರು ಮುಂಜಾಗ್ರತೆಯಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಮಾಸ್ಕ್ ಹಾಕಿ ಕಳುಹಿಸುವ ಚಿಂತನೆ ನಡೆಸಿ ಔಷಧ ಅಂಗಡಿಗಳಲ್ಲಿ ಕ್ಲಿನಿಕಲ್‌ ಮಾಸ್ಕ್ಗಳನ್ನು ಪಡೆಯಲು ವಿಚಾರಿಸುತ್ತಿದ್ದುದು ಕಂಡುಬಂದಿತು.

Advertisement

ಹೋಲ್‌ಸೇಲ್‌ನಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ- ಕೃತಕ ಅಭಾವ ಸೃಷ್ಟಿ?: ಕರೊನಾದ ಅನಗತ್ಯ ಭೀತಿಯಿಂದಾಗಿ ಜಿಲ್ಲೆಯಲ್ಲಿ ಕ್ಲಿನಿಕಲ್‌ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌’ಗೆ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಇದರ ಹೋಲ್‌ಸೇಲ್‌ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆಯೇ?ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಕ್ಲಿನಿಕಲ್‌ ಮಾಸ್ಕ್ ರೀಟೈಲ್‌ ಮಾರಾಟ ದರ 5 ರೂ. ಇರುತ್ತದೆ. ಇದನ್ನು ಹೋಲ್‌ ‘ಸೇಲ್‌ ದರದಲ್ಲಿ ಖರೀದಿ ಮಾಡಿದರೆ 2.5 ರೂ.ನಿಂದ 3.5 ರೂ.ವರೆಗೂ ದೊರೆಯುತ್ತದೆ. ಆದರೆ, ಪ್ರಸ್ತುತ ರೀಟೈಲ್‌ ಮಾರಾಟಗಾರರಿಗೇ ಹೋಲ್‌ ಸೇಲ್‌ ದರದಲ್ಲಿ ಒಂದು ಮಾಸ್ಕ್ಗೆ 20ರಿಂದ 30 ರೂ. ವರೆಗೂ ಹೋಲ್‌ಸೇಲ್‌ ಮಾರಾಟಗಾರರು ದರ ನಿಗದಿಪಡಿಸುತ್ತಿರುವುದರಿಂದ ರೀಟೈಲ್‌ ಮಾರಾಟದಲ್ಲಿ ಮಾಸ್ಕ್ಗಳನ್ನು ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಬೇಡಿಕೆಗೆ ತಕ್ಕಷ್ಟು ಕ್ಲಿನಿಕಲ್‌ ಮಾಸ್ಕ್ಗಳು ಪೂರೈಕೆ ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಜನರಲ್ಲಿನ ಆತಂಕವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವು ಹೋಲ್‌ಸೇಲ್‌ ಮಾರಾಟಗಾರರು ಇಂತಹ ಕೃತ್ಯಕ್ಕೆ ಇಳಿದಿರುವುದನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕಡಿಮೆ ದರದಲ್ಲಿ ಇವುಗಳು ಜನಸಾಮಾನ್ಯರಿಗೆ ದೊರಕಿಸಿಕೊಡುವತ್ತ ಗಮನಹರಿಸಬೇಕಿದೆ ಎಂಬುದು ಸಾಮಾನ್ಯ ನಾಗರಿಕರ ಅಳಲು.

Advertisement

Udayavani is now on Telegram. Click here to join our channel and stay updated with the latest news.

Next