Advertisement

ವಿಐಎಸ್‌ಎಲ್ ಖಾಸಗೀಕರಣ ಬೇಡ

11:51 AM Jul 06, 2019 | Naveen |

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣ ಮಾಡಬಾರದು ಮತ್ತು ಕಾರ್ಖಾನೆ ಅಭಿವೃದ್ಧಿ ಹೊಂದಲು ಕೇಂದ್ರ ಸರ್ಕಾರ ಅಗತ್ಯ ಬಂಡವಾಳ ತೊಡಗಿಸುತ್ತದೆ ಎಂಬ ಆಶಾಭಾವನೆಯಿಂದ ಬಿ.ವೈ. ರಾಘವೇಂದ್ರ ಅವರನ್ನು ಇಲ್ಲಿನ ಜನತೆ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಕಾರ್ಖಾನೆ ಖಾಸಗೀಕರಣಕ್ಕೆ ಟೆಂಡರ್‌ ಕರೆಯುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌ ಹೇಳಿದರು.

Advertisement

ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣ ಮಾಡಲು ಭಾರತೀಯ ಉಕ್ಕು ಪ್ರಾಧಿಕಾರ ಅಧಿಕೃತ ಟೆಂಡರ್‌ ಪ್ರಕಟಣೆ ಹೊರಡಿಸಿರುವುದನ್ನು ಖಂಡಿಸಿ ಕಾರ್ಮಿಕರು ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದ ವೇಳೆ ಕಾರ್ಮಿಕರನ್ನುದ್ದೇಶಿಸಿ ಅವರು ಮಾತನಾಡಿದರು.

ಸಂಸದರು ಆಡಿದ ಮಾತನ್ನು ಉಳಿಸಿಕೊಳ್ಳದಿರುವುದರಿಂದ ಅವರು ಆ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಸಂಸದರನ್ನಾಗಿ ಮಾಡಿರುವ ನಮಗೆ ರಾಜೀನಾಮೆ ಕೇಳುವ ಅಧಿಕಾರವೂ ಇದೆ ಎಂದರು.

7 ರಂದು ಬಿವೈಆರ್‌- ಬಿಎಸ್‌ವೈ ಮನೆ ಮುಂದೆ ಧರಣಿ: ಚುನಾವಣೆ ಪೂರ್ವದಿಂದಲೂ ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸುವಲ್ಲಿ ಕೇಂದ್ರ ಸರ್ಕಾರದ ಮನವೊಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಲೇ ಬಂದರು. ಆದರೆ ಅವರು ಕಾರ್ಮಿಕರಿಗೆ ನೀಡಿದ ಮಾತಿನಂತೆ ವಿಐಎಸ್‌ಎಲ್ ಕಾರ್ಖಾ ನೆಗೆ ಬಂಡವಾಳ ತೊಡಗಿ ಸುವಲ್ಲಿ ಕೇಂದ್ರ ಸರ್ಕಾರದ ಮನವೊಲಿಸಲು ವಿಫಲ ರಾದ ಕಾರಣ ಇದನ್ನು ಪ್ರಶ್ನಿಸಿ ಕಾರ್ಖಾನೆಯ ಕಾರ್ಮಿಕರು ಕುಟುಂಬ ಸಮೇತವಾಗಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸದ ಮುಂದೆ ಜು.7ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಧರಣಿ ನಡೆಸಲು ತೆರಳುತ್ತಿದ್ದೇವೆ ಎಂದರು.

ಮಾಡು ಇಲ್ಲವೆ ಮಡಿ ಹೋರಾಟ ಅನಿವಾರ್ಯ: ಯಾವುದೇ ಕಾರಣಕ್ಕೂ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಚುನಾವಣಾ ಸಂದರ್ಭದಲ್ಲಿ ಹೇಳಿದವರು ಕಾರ್ಖಾನೆಯನ್ನು ಸಾರ್ವಜನಿಕ ಉದ್ಯಮದಲ್ಲಿ ಉಳಿಸಿಕೊಳ್ಳಲಾಗದಿದ್ದ ಮೇಲೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದರು.

Advertisement

ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಅದಿರಿನ ಗಣಿಯನ್ನು ಒದಗಿಸಿದೆ. ಅದೇ ರೀತಿ ಕೇಂದ್ರ ಸರ್ಕಾರ ಕಾರ್ಖಾನೆಗೆ ಅಗತ್ಯವಾದ ಬಂಡವಾಳ ತೊಡಗಿಸಬೇಕಿತ್ತು. ಆದರೆ ಇದೀಗ ಬಂಡವಾಳ ತೊಡಗಿಸಬೇಕಾದ ಸಂದರ್ಭದಲ್ಲಿ ಕಾರ್ಖಾನೆ ಖಾಸಗಿಯವರಿಗೆ ಮಾರಾಟ ಮಾಡಲು ಭಾರತೀಯ ಉಕ್ಕು ಪ್ರಾಧಿಕಾರ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ಸೈಲ್ ಆಡಳಿತ ಕಾರ್ಖಾನೆಯನ್ನು ಮಾರಾಟ ಮಾಡಲು ವ್ಯವಸ್ಥಿತ ಪಿತೂರಿ ನಡೆಸಿದ್ದು, ಎಂಪಿಎಂ ಕಾರ್ಖಾನೆಗೆ ಆದ ಸ್ಥಿತಿ ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕರಿಗೂ ಆಗುವುದರಲ್ಲಿ ಅನುಮಾನವಿಲ್ಲ. ಇದೀಗ ಕಾರ್ಮಿಕರಿಗೆ ಮಾಡು ಇಲ್ಲವೇ ಮಡಿ ಹೋರಾಟ ಅನಿವಾರ್ಯವಾಗಿದೆ. ಹೋರಾಟದ ಅಂಗವಾಗಿ ನಗರದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು ಹಾಗೂ ನಾಗರಿಕರ ಸಹಕಾರ ಪಡೆದು ನಗರವನ್ನು ಬಂದ್‌ ಮಾಡುವ ಮೂಲಕ ರಸ್ತೆ ತಡೆ, ರೈಲುತಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಖಾಸಗೀಕರಣ ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ಕಂಪನಿಯ ಋಣವಿರುವ ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮಳೆಯಲ್ಲಿಯೇ ಪ್ರತಿಭಟನೆ: ಪ್ರತಿಭಟನೆ ಲೆಕ್ಕಿಸದೆ ಕಾರ್ಖಾನೆಯೊಳಗೆ ಕೆಲಸಕ್ಕೆ ತೆರಳುತ್ತಿದ್ದ ಕೆಲವು ನೌಕರರು ಹಾಗೂ ಅಧಿಕಾರಿಗಳನ್ನು ಪ್ರತಿಭಟನಾಕಾರರು ತಡೆದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಬೆಳಗ್ಗೆ 6-30 ರಿಂದ ಕಾರ್ಮಿಕರು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್‌. ಚಂದ್ರಹಾಸ್‌ ಕಾರ್ಮಿಕ ಮುಖಂಡ ರಾದ ಬಸಂತಕುಮಾರ್‌, ರಾಘವೇಂದ್ರ, ಅಮೃತ್‌ಕುಮಾರ್‌, ಮೋಹನ್‌, ಕಾಂಗ್ರೆಸ್‌ನ ಚಂದ್ರೇಗೌಡ, ಕರುಣಾ ಮೂರ್ತಿ, ಧರ್ಮಪ್ರಸಾದ್‌ ಮತ್ತಿತರರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next