ಭದ್ರಾವತಿ: ಇಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ದುರ್ಗಾಪುರ್ ಹಾಗೂ ಸೇಲಂ ಸ್ಟೀಲ್ ಪ್ಲಾಂಟ್‌ಗಳನ್ನು ಉಳಿಸಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಮುಖಂಡರ ನಿಯೋಗದವರು ಕೇಂದ್ರ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸಂಘದ ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ಕೆಲವು ಮುಖಂಡರು ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಕಾರ್ಮಿಕರೊಂದಿಗೆ ಚರ್ಚಿಸಿ ಕಾರ್ಖಾನೆಯ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಉಕ್ಕು ಪ್ರಾ ಧಿಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದರು. ಆ ಪ್ರಕಾರ ಸಂಘದ ನಿಯೋಗ ಉಕ್ಕು ಸಚಿವರಿಗೆ ಮನವಿ ಸಲ್ಲಿಸಿದೆ.
ಈ ಮೂರು ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದರ ಜೊತೆಗೆ ಕಾರ್ಖಾನೆಗಳನ್ನು ಬಂಡವಾಳ ಹಿಂತೆಗೆತದ ಕ್ರಮದಿಂದ ಹೊರತರಬೇಕು. ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆಗಳನ್ನು ಉಳಿಸಲು ಸದ್ಯಕ್ಕೆ ಅಗತ್ಯ ಅಲ್ಪಾವಧಿ ಕ್ರಮ ಕೈಗೊಂಡು, ನಂತರದ ದಿನಗಳಲ್ಲಿ ಕಾರ್ಖಾನೆ ಅಭಿವೃದ್ಧಿಗೆ ಅಗತ್ಯ ಬಂಡವಾಳ ತೊಡಗಿಸಿ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸುವ ಕ್ರಮ ಕೈಗೊಂಡು ಉದ್ದಿಮೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡ ಬೇಕೆಂದು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಎಲ್. ವಿಶ್ವನಾಥ್ ತಿಳಿಸಿದರು.
ನಿಯೋಗದಲ್ಲಿ ಬಿಎಂಎಸ್ ರಾಷ್ಟ್ರೀಯ ಕಾರ್ಯದರ್ಶಿ ದೇವೇಂದ್ರ ಕುಮಾರ್ ಪಾಂಡೆ, ಸಂಘಟನಾ ಕಾರ್ಯದರ್ಶಿಬಿ. ಸುರೇಂದ್ರನ್, ಕೃಷ್ಣಾನಂದರಾಯ್, ರಾಜೇಂದ್ರ ಮಹಾಂತ, ಬೊಕಾರೋಪ್ಲಾಂಟ್ ರಂಜಾಯ್, ಸೇಲಂಪಲಾಂಟ್ ಎಳಾಂಗ್,ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ರಾಧಾಕೃಷ್ಣನ್, ಕೆ. ಶ್ರೀನಿವಾಸ ರಾವ್ ಇದ್ದರು.