Advertisement
ಅಂದಹಾಗೆ, ಇದು “ಮಿಸ್ಟರ್ ಎಲ್‌ಎಲ್‌ಬಿ’ ಅಲಿಯಾಸ್ ಲ್ಯಾಂಡ್ ಲಾರ್ಡ್ ಭದ್ರ ಎಂಬ ಮಹಾನ್ ಪುಢಾರಿಯ ಒನ್‌ಲೈನ್ ಪರಿಚಯವಷ್ಟೇ. ಚಿತ್ರ ನೋಡಿದವರಿಗೆ, ಇಂಥಾ ವ್ಯಕ್ತಿತ್ವದವರೂ ಇರ್ತಾರ ಅನ್ನುವಷ್ಟರ ಮಟ್ಟಿಗೆ ಕಾಟ ಕೊಡುವ ಪಂಟ. ಇಲ್ಲಿ ಕಥೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷವಿಲ್ಲದಿದ್ದರೂ, ಕಟ್ಟಿಕೊಟ್ಟಿರುವ ಚಿತ್ರಕಥೆಯಲ್ಲಿ ಒಂದಷ್ಟು ಹೊಸತನವಿದೆ, ಅಲ್ಲಲ್ಲಿ ಮಜವೂ ಇದೆ.
Related Articles
Advertisement
ಒಂದು ಸಾಮಾನ್ಯ ಕಥೆಗೆ, ಎಷ್ಟು ಬೇಕೋ ಅಷ್ಟು ರುಚಿಕಟ್ಟಾದ ಚಿತ್ರಕಥೆಯ ಹೂರಣ ತುಂಬಿರುವ ನಿರ್ದೇಶಕರು, ಇಲ್ಲಿ ಪ್ರೀತಿ ಮತ್ತು ಸಂಬಂಧದ ಮೌಲ್ಯಗಳನ್ನು ಸಾರಿದ್ದಾರೆ. ಆ ಮೌಲ್ಯ ತಿಳಿದುಕೊಳ್ಳುವ ಕುತೂಹಲವಿದ್ದರೆ, ಮಿಸ್ಟರ್ ಎಲ್‌ಎಲ್‌ಬಿ ಕೊಡುವ ಕ್ವಾಟ್ಲೆ ಸಹಿಸಿಕೊಂಡು, ಚಿತ್ರ ನೋಡಲು ಯಾವುದೇ ಅಭ್ಯಂತರವಿಲ್ಲ. ಭದ್ರ (ಶಿಶಿರ್)ನನ್ನು ಎಲ್ಲರೂ ಮಿಸ್ಟರ್ ಎಲ್‌ಎಲ್‌ಬಿ ಅಂತಾನೇ ಕರೀತಾರೆ. ಅದು ಅವನೇ ಇಟ್ಟುಕೊಂಡ ಹೆಸರು.
ಊರ ಜನರನ್ನು ಯಾಮಾರಿಸಿ, ಕಾಲ ಕಳೆಯೋ ಭದ್ರನನ್ನೇ ಆ ಊರ ಜನ ಊರಿಂದ ಹೊರ ಹಾಕುತ್ತಾರೆ. ಊರ ಜನರ ಒತ್ತಾಯಕ್ಕೆ ಮಣಿಯುವ ಭದ್ರನ ಅಪ್ಪ ಗೌಡ, “ನೀನು, ಬದಲಾಗಿದ್ದೇನೆ ಅಂತ ಅನಿಸಿದ ಕೂಡಲೇ ಈ ಊರಿಗೆ ಕಾಲಿಡು. ಅಲ್ಲಿಯವರೆಗೆ ಬರಲೇಬೇಡ’ ಅಂತ ಹೇಳಿ ಮಗನನ್ನು ಊರ ಹೊರ ಹಾಕುತ್ತಾನೆ. ಹಳ್ಳಿ ಜನರ ಕೋಪಕ್ಕೆ ತುತ್ತಾಗಿ, ಊರು ಬಿಡುವ ಭದ್ರ, ಸಿಟಿಗೆ ಹೋಗಿ, ಅಲ್ಲಿಂದ ಮೂರೇ ದಿನದಲ್ಲಿ ಹಿಂದಿರುಗುತ್ತಾನೆ.
ಆದರೆ, ಬಂದಾಗ, ಅವನು ಬದಲಾಗಿರುತ್ತಾನಾ, ಇಲ್ಲವಾ ಅನ್ನೋದೇ ಕಥೆ. ಅವನು ಸಡನ್ ಆಗಿ ಯಾಕೆ ಬಂದ ಅನ್ನುವುದಕ್ಕೊಂಡು ಟ್ವಿಸ್ಟ್ ಕೊಟ್ಟು ಟೆಸ್ಟ್ ಮಾಡಲಾಗಿದೆ. ಅದೇ ಕಥೆಯ “ತಿರುವು’. ಆ ತಿರುವಿನಲ್ಲಿ ನಿಂತು ನೋಡುವ ಮನಸ್ಸಿದ್ದರೆ, ಭದ್ರನ ಯೋಗ, ಕ್ಷೇಮ ವಿಚಾರಿಸಿ ಬರಬಹುದು. ಶಿಶಿರ್ ಪಕ್ಕಾ ಹಳ್ಳಿಯವನಂತೆ ಕಾಣುವುದು ಕಷ್ಟ. ಆದರೆ, ಡ್ಯಾನ್ಸ್ ಮತ್ತು ನಟನೆಯಲ್ಲಿ ಯಾವುದೇ ದೂರುಗಳಿಲ್ಲ. ಲೇಖಚಂದ್ರ ಗ್ಲಾಮರ್‌ಗೆ ಕೊಟ್ಟ ಕಾಳಜಿ ನಟನೆಗೆ ಕೊಟ್ಟಿಲ್ಲ.
ಸಿಕ್ಕ ಪಾತ್ರವನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಬಹುದಿತ್ತು. ಉಳಿದಂತೆ ಗಿರೀಶ್ ಜತ್ತಿ, ಶ್ರೀನಿವಾಸ್‌ಗೌಡ, ಕೆಂಪೇಗೌಡ ಮತ್ತೆ ಆ ಹಳ್ಳಿ ಪರಿಸರದಲ್ಲಿ ಕಾಣಸಿಗುವ ಪಾತ್ರಗಳೆಲ್ಲವೂ ಇದ್ದಷ್ಟು ಕಾಲ ಗಮನಸೆಳೆಯುತ್ತವೆ. ರಾಜು ಬೆಳಗೆರೆ ಸಂಭಾಷಣೆಯಲ್ಲಿ ತೂಕ ಕಡಿಮೆ ಇದ್ದರೂ, ಆಗಾಗ ಮೌಲ್ಯಕ್ಕೆ ಒತ್ತು ಕೊಟ್ಟಿವೆ. ಪೂರಕ ಹಿನ್ನೆಲೆ ಸಂಗೀತ ನೀಡಲು ಮಂಜು ಚರಣ್ ಮನಸ್ಸು ಮಾಡಿಲ್ಲ. ಸುರೇಶ್‌ಬಾಬು ಕ್ಯಾಮೆರಾ ಕೈ ಚಳಕದಲ್ಲಿ ಹಳ್ಳಿಯ ಸೊಬಗಿದೆ, ಭದ್ರನ ಆಟಾಟೋಪದ ಸೊಗಸಿದೆ.
ಚಿತ್ರ: ಮಿಸ್ಟರ್ ಎಲ್ಎಲ್ಬಿನಿರ್ಮಾಣ: ಆರ್.ವಿ.ಕ್ರಿಯೇಷನ್ಸ್
ನಿರ್ದೇಶನ: ರಘುವರ್ಧನ್
ತಾರಾಗಣ: ಶಿಶಿರ್, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ್ ಗೌಡ, ಗಿರೀಶ್ ಜತ್ತಿ, ನಾರಾಯಣ ಸ್ವಾಮಿ ಮುಂತಾದವರು * ವಿಜಯ್ ಭರಮಸಾಗರ