ಬಳ್ಳಾರಿ: ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ನೂರಾರು ಟಿಎಂಸಿ ನೀರು ಹರಿದು ಬಂದರೂ ಎರಡನೇ (ಬೇಸಿಗೆ) ಬೆಳೆಗೆ ಸಮರ್ಪಕ ನೀರು ಕೊಡುವುದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದ್ದು, ಭದ್ರಾ ಜಲಾಶಯದಿಂದ ಆರು ಟಿಎಂಸಿ ನೀರು ಬಿಡುವಂತೆ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿದೆ. 2018, 2019ರಲ್ಲಿ ಮುಂಗಾರು ಹಂಗಾಮು ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಜಲಾಶಯ ಅವ ಧಗೆ ಮುನ್ನವೇ ಭರ್ತಿಯಾಗಿದ್ದು ಜಲಾಶಯದಿಂದ ಮುಂಗಾರು ಮಳೆಗೆ ಸಮರ್ಪಕವಾಗಿ ನೀರು ಹರಿಸಲಾಯಿತು. 2020ನೇ ಸಾಲಿನಲ್ಲೂ ಉತ್ತಮವಾಗಿ ಮಳೆಯಾಗಿದ್ದು, ಜಲಾಶಯ ಭರ್ತಿಯಾಗಿತ್ತು. ಮೊದಲನೇ ಬೆಳೆಗೆ ಸಮರ್ಪಕವಾಗಿ ನೀರು ಹರಿಸಲಾಗಿದ್ದು, ಇದೀಗ ಎರಡನೇ ಬೆಳೆಗೆ ಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ನಿಗದಿತ ಅವಧಿ ಮಾ. 31ರವರೆಗೆ ಲಭಿಸುವುದು ಕಷ್ಟಸಾಧ್ಯವಾಗಿದೆ.
ಕುಸಿದ ನೀರಿನ ಮಟ್ಟ: ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 1609.82 ಅಡಿಗೆ ಕುಸಿದಿದೆ. 7082 ಟಿಎಂಸಿ ನೀರನ್ನು ಹೊರಬಿಡಲಾಗುತ್ತಿದ್ದು, 34.90 ಟಿಎಂಸಿ ನೀರು ಸಂಗ್ರಹವಿದೆ. ಈ 34.90 ಟಿಎಂಸಿ ನೀರಲ್ಲಿ ಕುಡಿಯಲು 2 ಟಿಎಂಸಿ, ಡೆಡ್ ಸ್ಟೋರೇಜ್ 2 ಟಿಎಂಸಿ, 3 ಟಿಎಂಸಿ ವಯಾಬ್ರೇಷನ್ ಸೇರಿ ಒಟ್ಟು 7 ಟಿಎಂಸಿ ನೀರನ್ನು ಜಲಾಶಯದಲ್ಲಿ ಬಿಡಬೇಕಾಗಲಿದೆ. ಬಾಕಿ 7 ಟಿಎಂಸಿ ನೀರನ್ನು ಎರಡನೇ ಬೆಳೆಗೆ ಹರಿಸಬೇಕಾಗಲಿದೆ. ಇಷ್ಟು ನೀರನ್ನು ಪ್ರತಿದಿನ ಕನಿಷ್ಠ ಮುಕ್ಕಾಲು ಟಿಎಂಸಿ ನೀರನ್ನು ಬೆಳೆಗೆ ಹರಿಸಿದರೂ ಮಾ. 31ರವರೆಗೆ ಹಿಂಗಾರು ಬೆಳೆಗೆ ನೀರು ಹರಿಸಬಹುದು. ನಂತರ ನೀರು ತಲುಪದ ಕೊನೆ ಭಾಗದ ಬೆಳೆಗೆ ನೀರು ಹರಿಸುವಂತೆ ರೈತರಿಂದ ಪುನಃ ಒತ್ತಡಗಳು ಬರುವ ಸಾಧ್ಯತೆಯಿದೆ. ಹಾಗಾಗಿ ಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ ಆರು ಟಿಎಂಸಿ ನೀರು ಬಂದರೆ ಅದರಲ್ಲಿ ಶೇ. 50ರಷ್ಟು ನೀರು ಜಲಾಶಯಕ್ಕೆ ಹರಿದು ಬರಲಿದ್ದು, ಮುಂದಿನ 10 ದಿನ ಏಪ್ರಿಲ್ 10ರವರೆಗೆ ನಿಭಾಯಿಸಬಹುದು.
ಹೀಗಾಗಿ ಭದ್ರಾ ಜಲಾಶಯದಿಂದ 6 ಟಿಎಂಸಿ ನೀರು ಹರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಲಾಶಯದ ಅಭಿಯಂತರ ಬಸಪ್ಪ ಜಾನೇಕರ್ ವಿವರಿಸಿದರು. ನೀರು ನಿರ್ವಹಣೆ ಕಷ್ಟ: ತುಂಗಭದ್ರಾ ಜಲಾಶಯ ವ್ಯಾಪ್ತಿಯ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಭತ್ತ ಬೆಳೆಯುವ ಪ್ರಮಾಣ ನಿಗದಿತ ಆಯಕಟ್ಟುಗಿಂತಲೂ ದುಪ್ಪಟ್ಟು ಪ್ರಮಾಣ ಹೆಚ್ಚಳವಾಗಿದೆ. ಮುಂಗಾರು ಹಂಗಾಮು ಬೆಳೆಗೆ ಜಲಾಶಯಕ್ಕೆ ಹರಿದು ಬರುವ ಹೆಚ್ಚುವರಿ ನೀರನ್ನೆಲ್ಲಾ ಹೊರ ಬಿಡುವುದರಿಂದ ನೀರಿನ ಕೊರತೆಯಾಗಲ್ಲ. ಮೇಲಾಗಿ ಅಕ್ಟೋಬರ್ ತಿಂಗಳವರೆಗೆ ಆಗಾಗ ಮಳೆಯೂ ಬರುವುದರಿಂದ ಬೆಳೆಗೆ ನೀರಿನ ಕೊರತೆಯಾಗಲ್ಲ. ಆದರೆ, ಎರಡನೇ ಬೆಳೆಗೆ ಹಾಗಲ್ಲ. ಜಲಾಶಯದಲ್ಲಿ ಸಂಗ್ರಹವಿದ್ದ ನೀರನ್ನೇ ಮೂರು ಜಿಲ್ಲೆಗಳಿಗೆ ನಿಭಾಯಿಸಬೇಕು. ಮೇಲಾಗಿ ಮೂರು ಜಿಲ್ಲೆಗಳಲ್ಲಿ ಭತ್ತ ಬೆಳೆಯಲು ನಿಗದಿಪಡಿಸಿದ್ದಆಯಕಟ್ಟು ಪ್ರದೇಶಕ್ಕಿಂತ ಸರಿಸುಮಾರು ಪಟ್ಟು ಜಾಸ್ತಿಯಾಗಿದೆ. ಹೀಗಾಗಿ ಜಲಾಶಯದಲ್ಲಿ ಇದ್ದನೀರನ್ನು ನಿಭಾಯಿಸುವುದು ಕಷ್ಟವಾಗಿದ್ದು, ಭದ್ರಾ ಜಲಾಶಯದಿಂದ ಆರು ಟಿಎಂಸಿ ನೀರು ಹರಿಸುವಂತೆ ಸರ್ಕಾರದ ಮೊರೆ ಹೋಗಲಾಗಿದೆ ಎಂದು ಮಂಡಳಿಯ ಮತ್ತೂಬ್ಬ ಅಧಿಕಾರಿ ಸ್ಪಷ್ಟಪಡಿಸಿದರು.