ಚಿತ್ರದುರ್ಗ: ಕಳೆದೊಂದು ದಶಕದಿಂದ ಕುಂಟುತ್ತಾ ಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾದರೆ ಕೇಂದ್ರದಿಂದ ದೊಡ್ಡ ಪ್ರಮಾಣದಲ್ಲಿ ನೆರವು ಸಿಗಲಿದೆ.
ಈ ಮೂಲಕ ರಾಷ್ಟ್ರೀಯ ಮಾನ್ಯತೆ ಪಡೆಯುವ ರಾಜ್ಯದ ಮೊದಲ ಯೋಜನೆಯೂ ಇದಾಗಲಿದೆ. ಜಿಲ್ಲೆಗೆ ನೀರು ಹರಿಯುವುದೇ ಇಲ್ಲ ಎಂದು ಚರ್ಚಿಸುತ್ತಿದ್ದವರಿಗೆ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ವೇದಾವತಿ ನದಿ ಮೂಲಕ ನೀರು ಹರಿಸಿದಾಗ ಜಿಲ್ಲೆಯ ಜನರ ಸಂತಸಕ್ಕೆ ಪಾರವೇ ಇರಲಿಲ್ಲ. ಈಗ ಕೇಂದ್ರ ಜಲಶಕ್ತಿ ಸಚಿವಾಲಯದ ಇನ್ವೆಸ್ಟ್‌ಮೆಂಟ್ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಯೋಜನೆಯಾಗುವುದಕ್ಕೆ ಮಾನ್ಯತೆ ದೊರೆತಿರುವುದು ಮತ್ತೂಂದು ಖುಷಿಯ ವಿಚಾರ. ಈ ವಿಚಾರವನ್ನು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಟ್ವಿಟ್ ಮೂಲಕ ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಏನಿದು ಯೋಜನೆ?: ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ 2,25,515 ಹೆಕ್ಟೇರ್ (5,57,022 ಎಕರೆ) ಭೂಮಿಗೆ ಹನಿ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 29.90 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು, ತುಂಗಾ ನದಿಯಿಂದ 17.4 ಟಿಎಂಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹರಿಸಿ, ಭದ್ರಾ ಜಲಾಶಯದ 12.5 ಟಿಎಂಸಿ ಅಡಿ ನೀರು ಸೇರಿಸಿ ಅಲ್ಲಿಂದ ನಾಲ್ಕು ಜಿಲ್ಲೆಗಳಿಗೆ ಹರಿಸುವುದು ಯೋಜನೆಯ ಉದ್ದೇಶ.
ಈ ಯೋಜನೆ ಹಲವು ಬಾರಿ ಪರಿಷ್ಕೃತಗೊಂಡಿದ್ದು, 2001ರಲ್ಲಿ 21 ಟಿಎಂಸಿ ಅಡಿ ನೀರಿನ ಹಂಚಿಕೆಗೆ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೂಪಿಸಿತ್ತು. 2003ರಲ್ಲಿ ಇದಕ್ಕೆ 2,813 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತು. ಆದರೆ, ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿಲ್ಲ. ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಶಿಫಾರಸಿನ ಮೇರೆಗೆ 2008ರಲ್ಲಿ 5,985 ಕೋಟಿ ರೂ.ಗಳಿಗೆ ಅನುಮೋದನೆ ದೊರೆಯಿತು. 2015, ಜೂ.6ರಂದು ಸರ್ಕಾರ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 12,340 ಕೋಟಿ ರೂ.ಗಳಿಗೆ ಅನುಮೋದನೆ ನೀಡಿತ್ತು. 2020-21ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಯಡಿಯೂರಪ್ಪ ಮತ್ತೂಮ್ಮೆ ಪರಿಷ್ಕರಿಸಿ 21,473.67 ಕೋಟಿ ರೂ. ಗೆ ಅನುಮೋದನೆ ನೀಡಿದ್ದಾರೆ.
4 ಸ್ಥಳಗಳಿಂದ ನೀರು ಲಿಫ್ಟ್: ಯೋಜನೆಯಡಿ ನೀರು ಹರಿಸಲು ಒಟ್ಟು 4 ಸ್ಥಳಗಳಿಂದ ನೀರನ್ನು ಲಿಫ್ಟ್ ಮಾಡುವ ಪ್ಲ್ಯಾನ್ ಮಾಡಲಾಗಿದೆ. ತುಂಗಾ ನದಿಯಿಂದ ಜಲಾಶಯ ತಲುಪುವ ಕಾಲುವೆ ಮಾರ್ಗದಲ್ಲಿ 2 ಕಡೆ 80 ಮೀಟರ್ ಎತ್ತರಕ್ಕೆ (ಎನ್.ಆರ್.ಪುರ ತಾಲೂಕಿನಲ್ಲಿ) ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗಕ್ಕೆ ಹೋಗುವ ಶಾಂತಿಪುರ ಹಾಗೂ ಬೆಟ್ಟತಾವರೆಕೆರೆ ಬಳಿ ಲಿಫ್ಟ್ ಮಾಡಲಾಗುವುದು. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 367 ಕೆರೆಗಳಿಗೆ ಪ್ರತಿವರ್ಷ ಶೇ.50ರಷ್ಟು ನೀರು ತುಂಬಿಸುವುದು, ವಾಣಿವಿಲಾಸ ಜಲಾಶಯಕ್ಕೆ ತುಮಕೂರು ಶಾಖಾ ಕಾಲುವೆ ಮೂಲಕ 2 ಟಿಎಂಸಿ ಅಡಿ ನೀರು ಹರಿಸುವುದು ಭದ್ರಾ ಮೇಲ್ದಂಡೆ ಯೋಜನೆಯ ಪ್ರಮುಖ ಘಟ್ಟವಾಗಿದೆ. ಇದರಿಂದ ಬಯಲು ಸೀಮೆಯ ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ 2021 ಫೆಬ್ರವರಿ ಅಂತ್ಯದವರೆಗೆ ಒಟ್ಟಾರೆ 4246.43 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈಗ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ 16,125 ಕೋಟಿ ರೂ. ವೆಚ್ಚದ ಪರಿಷ್ಕೃತ ಮೊತ್ತಕ್ಕೆ ರಾಷ್ಟ್ರೀಯ ಯೋಜನೆಯಾಗಿ ಅನುಮೋದನೆ ನೀಡಲು ಒಪ್ಪಿರುವುದು ದೊಡ್ಡ ಮೊತ್ತದ ಅನುದಾನ ಲಭ್ಯವಾಗುವ ನಿರೀಕ್ಷೆ ಹೆಚ್ಚಾಗಿದೆ.
-ತಿಪ್ಪೇಸ್ವಾಮಿ ನಾಕೀಕೆರೆ