ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಸಂಬಂಧ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಕರೆಯಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಒಪ್ಪಿದ್ದಾರೆ ಎಂದು ನೀರಾವರಿ ಹೋರಾಟ ಸಮಿತಿ ನೂತನ ಅಧ್ಯಕ್ಷ ಪಿ. ಕೋದಂಡರಾಮಯ್ಯ ಹೇಳಿದರು.
ನಗರದ ಎಪಿಎಂಸಿ ಬಳಿ ಇರುವ ರೈತ ಭವನದಲ್ಲಿ ಭಾನುವಾರ ನಡೆದ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿ ಅವರು ಮಾತನಾಡಿದರು. ಎರಡು ದಿನಗಳ ಹಿಂದಷ್ಟೇ ಸಚಿವ ಜಾರಕಿಹೊಳಿ ಅವರ ಜತೆ ಮಾತನಾಡಿದ್ದೇನೆ. ಜಲಸಂಪನ್ಮೂಲ, ಕಂದಾಯ ಹಾಗೂ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆಯನ್ನು ಚಿತ್ರದುರ್ಗದಲ್ಲಿ ಕರೆಯಲು ಮನವಿ ಮಾಡಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಾರ್ಚ್ 5ರ ನಂತರ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ನೀರಾವರಿ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಕೋದಂಡರಾಮಯ್ಯ ಅವರು ಎಂ. ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್ ಅವರನ್ನು ಸ್ಮರಿಸಿಕೊಂಡು ಗದ್ಗದಿತರಾದರು. ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, ಭದ್ರಾ ಮೇಲ್ಡಂಡೆ ಯೋಜನೆಯ ಮೊದಲ ಹಂತದ ಕಾಮಗಾರಿ ನಿಧಾನ ಗತಿಯಲ್ಲಿದೆ. ತುಂಗಾದಿಂದ ಭದ್ರೆಗೆ ನೀರು ಲಿಫ್ಟ್ ಮಾಡುವ ಮೊದಲ ಹಂತದ ಬಗ್ಗೆ ಅ ಧಿಕಾರಿಗಳು, ಸರ್ಕಾರ ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಹೋರಾಟ ಸಮಿತಿ ಜವಾಬ್ದಾರಿ ಹೆಚ್ಚಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಕಾಮಗಾರಿ ಚುರುಕಾಗುವಂತೆ ನೋಡಿಕೊಳ್ಳಬೇಕಿದೆ ಎಂದರು.
ತುಂಗಭದ್ರಾ ನಮ್ಮ ಜಿಲ್ಲೆಯ ಪಕ್ಕದಲ್ಲಿಯೇ ಹುಟ್ಟಿ ಹರಿಯುತ್ತಿವೆ. ಅಚ್ಚರಿ ಎಂದರೆ ಮಂತ್ರಾಲಯ ಸೇರಿದಂತೆ ಆಂಧ್ರದಲ್ಲಿ ಈ ನದಿಗಳು ನೀರಾವರಿ ಯೋಜನೆಗಳಿಗೆ ಕೊಡುಗೆ ನೀಡಿವೆ. ಆದರೆ ಚಿತ್ರದುರ್ಗ ಜಿಲ್ಲೆಗೆ ನೀರು ತರಲು ಹರಸಾಹಸಪಡುತ್ತಿರುವುದು ನೋವಿನ ಸಂಗತಿ. ಜಿಲ್ಲೆಯ ಸಂಘಟನೆಗಳು ಹೋರಾಟ ಮಾಡಿ ಭದ್ರಾ ಮೇಲ್ದಂಡೆ ಹೋರಾಟ ಎಳೆದುಕೊಂಡು ಹೋಗುತ್ತಿವೆ. ವಿವಿ ಸಾಗರಕ್ಕೆ ನೀರು ಬಂದಿದೆ. ಆದರೆ ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಹೋರಾಟ ಸಮಿತಿಯ ಬಾವುಟ ನೀಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ಬಾಗೇನಹಾಳು ಕೊಟ್ರಬಸಪ್ಪ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಹಿರಿಯೂರು ತಾಲೂಕು ಅಧ್ಯಕ್ಷ ಶಿವಕುಮಾರ್, ಚಿತ್ರದುರ್ಗ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಜಿ.ಬಿ. ಶೇಖರ್, ನೀರಾವರಿ ಹೋರಾಟ ಸಮಿತಿ ಸಂಚಾಲಕ ಟಿ. ಶಿವಪ್ರಕಾಶ್, ಮೊಳಕಾಲ್ಮೂರಿನ ಮರ್ಲಹಳ್ಳಿ ರವಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಮುದ್ದಾಪುರ ನಾಗರಾಜ್ ಉಪಸ್ಥಿತರಿದ್ದರು.