ಮುಂಬೈ: ನವೆಂಬರ್ 22 ರಂದು ಪರ್ತ್ನಲ್ಲಿ ನಡೆಯಲಿರುವ ಬಾರ್ಡರ್ ಗಾವಸ್ಕರ್ ಟ್ರೋಫಿಯ (Border Gavaskar Trophy) ಆರಂಭಿಕ ಪಂದ್ಯಕ್ಕೆ ಮೊದಲು ನಡೆಯಲಿರುವ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಗಾಗಿ ಹಿರಿಯ ಬ್ಯಾಟರ್ ಕೆಎಲ್ ರಾಹುಲ್ (KL Rahul) ಮತ್ತು ಬ್ಯಾಕಪ್ ಕೀಪರ್ ಧ್ರುವ್ ಜುರೆಲ್ (Dhruv Jurel) ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.
ನವೆಂಬರ್ 7 ರಂದು ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪ್ರಾರಂಭವಾಗಲಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ ಜುರೆಲ್, ಚೇತರಿಸಿಕೊಂಡು ರಿಷಬ್ ಪಂತ್ ಮರಳಿದ ನಂತರ ಆಡಲಿಲ್ಲ. ಕೆ ಎಲ್ ರಾಹುಲ್ ನ್ಯೂಜಿಲೆಂಡ್ ಸರಣಿಗಾಗಿ ಭಾರತೀಯ ತಂಡದ ಸದಸ್ಯರಾಗಿದ್ದರು. ಮೊದಲ ಪಂದ್ಯ ಆಡಿದ ರಾಹುಲ್ ಅವರನ್ನು ಬಳಿಕ ಬೆಂಚ್ ಬಿಸಿ ಮಾಡಲಾಗಿತ್ತು.
ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಎಲ್ಲರಿಗೂ ಸಮಾನ ಅವಕಾಶ ನೀಡಲು ಬಯಸುತ್ತದೆ. ಅದರಲ್ಲೂ ಬಿಜಿಟಿ ದೊಡ್ಡ ಸರಣಿಯಾದ ಕಾರಣ ಮೀಸಲು ಆಟಗಾರರಿಗೆ ಹೆಚ್ಚಿನ ಗೇಮ್ ಟೈಮ್ ನೀಡಲು ಬಯಸುತ್ತದೆ.
ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಇಬ್ಬರು ಹೆಚ್ಚುವರಿ ಆಟಗಾರರೊಂದಿಗೆ ಭಾರತ ಎ ತಂಡವನ್ನು ಹೆಚ್ಚಿಸಲು ಬಿಸಿಸಿಐ ಆಯ್ಕೆ ಮಾಡಿದೆ. ಶೀಘ್ರದಲ್ಲೇ ಆಸ್ಟ್ರೇಲಿಯಕ್ಕೆ ತೆರಳಲಿರುವ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಅವರು ನವೆಂಬರ್ 7, ಗುರುವಾರದಂದು ಪ್ರಾರಂಭವಾಗುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ.
ಧ್ರುವ್ ಜುರೆಲ್ ಅವರು ಆಡುವ ಕಾರಣ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿದ್ದ ಇಶಾನ್ ಕಿಶನ್ ಅವರು ಹೊರಗುಳಿಯುವ ಸಾಧ್ಯತೆಯಿದೆ. ಟೆಸ್ಟ್ ಸರಣಿಯ ಆರಂಭಕ್ಕೆ ಒಂದು ವಾರದ ಮೊದಲು, ಭಾರತ ಎ ಮತ್ತು ಭಾರತ ತಂಡ ನಡುವೆ ಇಂಟ್ರಾ ಸ್ಕ್ವಾಡ್ ಪಂದ್ಯ ಆಡಬೇಕಿತ್ತು, ಆದರೆ ಆ ಪಂದ್ಯವನ್ನು ರದ್ದುಗೊಳಿಸಲಾಯಿತು.