ಅದು 2021ರ ಜನವರಿ ಅಂತ್ಯದ ಸಮಯ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡಿದ್ದ ಅಪ್ಪ ಮನೆಗೆ ಬಂದಿದ್ದರು. ಅಪ್ಪನ ಮೈ ಮೇಲೆ ಎಲ್ಲಾ ಗಾಯದ ಕಲೆಗಳು! ಮೈಯಲ್ಲಿ ಅಲ್ಲಲ್ಲಿ ಊತ. ಭುಜ, ಎದೆ ಎಲ್ಲಾ ಕೆಂಪಗಾಗಿದೆ. ಪುಟ್ಟ ಮಗಳು ಅದರ ಮೇಲೆ ಕೈಯಾಡಿಸಿ, ʼʼಏನಪ್ಪಾ ಇದು” ಎಂದು ಆತಂಕದಿಂದ ಕೇಳಿದ್ದಳು. ಆದರೆ ಅಪ್ಪನ ಮುಖದಲ್ಲಿ ಮಂದಹಾಸ. ಆ ನೋವಿನ ಹಿಂದೆ ದೊಡ್ಡ ಸಾಧನೆಯ ಸಂತಸ.
ಇದು ಭಾರತದ ಪುರುಷರ ಕ್ರಿಕೆಟ್ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದ ಚೇತೇಶ್ವರ ಪೂಜಾರ (Cheteshwar Pujara) ಅವರ ಕತೆ. ಅಂದು ಮಗಳು ಅದಿತಿ ತನ್ನ ಮೈಯ ಗಾಯದ ಮೇಲೆ ಕೈಯಿರಿಸಿದ ವೇಳೆ ಆಸ್ಟ್ರೇಲಿಯಾ ವೇಗಿಗಳ ಮುಖ ಒಮ್ಮೆ ಕಣ್ಣ ಮುಂದೆ ಬಂದಿರಬಹುದು.
2020-21ರ ಬಾರ್ಡರ್- ಗಾವಸ್ಕರ್ ಟ್ರೋಫಿ (Border Gavaskar Trophy) ಭಾರತದ ಪಾಲಿಗೆ ಅವಿಸ್ಮರಣೀಯ ಸರಣಿ. ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದು ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸಿದ್ದು ಟೀಂ ಇಂಡಿಯಾ. ಆ ಸಾಧನೆಯ ವೇಳೆ ಮರೆಯಬಾರದು, ಆದರೆ ಪಂತ್ ಹೊಗಳುವ ಭರದಲ್ಲಿ ಹೆಚ್ಚಿನವರು ಮರೆತಿರುವ ಹೆಸರು ಚೇತೇಶ್ವರ ಪೂಜಾರ.
ಮೊದಲ ಪಂದ್ಯದಲ್ಲಿ ಕೇವಲ 36 ರನ್ ಗಳಿಗೆ ಆಲೌಟಾಗಿದ್ದ ಭಾರತ ಸೋಲಿನ ಅವಮಾನಕ್ಕೂ ಸಿಲುಕಿತ್ತು. ಎರಡನೇ ಪಂದ್ಯದಲ್ಲಿ ರಹಾನೆ ಶತಕದ ನೆರವಿನಿಂದ ಗೆಲುವು ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಭಾರತದ ನೆರವಿಗೆ ನಿಂತವರು ಪೂಜಾರ. ಮೊದಲ ಇನ್ನಿಂಗ್ಸ್ ನಲ್ಲಿ ತಂಡದ ಪರ ಅತಿ ಹೆಚ್ಚು ಅಂದರೆ 50 ರನ್ ಗಳಿಸಿದ್ದ ಪೂಜಾರ ಎರಡನೇ ಇನ್ನಿಂಗ್ಸ್ ನಲ್ಲಿ 77 ರನ್ ಗಳಿಸಿದ್ದರು. ಪಂದ್ಯ ಸೋಲದಂತೆ ನೋಡಿಕೊಳ್ಳಲು ಡ್ರಾ ಮಾಡಬೇಕಾದ ಅನಿವಾರ್ಯತೆ ತಂಡಕ್ಕಿತ್ತು. ಈ ವೇಳೆ ಪೂಜಾರ ಬರೋಬ್ಬರಿ 205 ಎಸೆತ ಎದುರಿಸಿದ್ದರು.
ಕೊನೆಯ ಪಂದ್ಯ ಆಸ್ಟ್ರೇಲಿಯಾದ ಭದ್ರ ಕೋಟೆ ಬ್ರಿಸ್ಬೇನ್ ನ ಗಾಬ್ಬಾ (Gabba) ಮೈದಾನದಲ್ಲಿ. ಅಲ್ಲಿ 30 ವರ್ಷದಿಂದ ಆಸೀಸ್ ಸೋಲು ಕಂಡಿರಲಿಲ್ಲ. ಇಲ್ಲಿ ಗೆದ್ದು ಇತಿಹಾಸ ಬರೆಯುವುದು ಭಾರತದ ಯೋಜನೆ. ಆದರೆ ಅದು ಸುಲಭದ ಮಾತಲ್ಲ. ಫೈರಿ ಬೌನ್ಸರ್ ಗಳಿಗೆ ಹೆಸರಾದ ಗಾಬ್ಬಾದಲ್ಲಿ ಎದುರಾಳಿ ಬ್ಯಾಟರ್ ಗಳನ್ನು ಆಸೀಸ್ ಬೌಲರ್ ಗಳು ಪತರುಗಟ್ಟುವಂತೆ ಮಾಡುತ್ತಾರೆ. ಮೊದಲೇ ಆಕ್ರಮಣಕಾರಿ ಮನೋಭಾವದ ಆಸೀಸ್ ಗಳು ಕಳೆದ ಎರಡು ಪಂದ್ಯದ ಸಿಟ್ಟಿನಲ್ಲಿದ್ದರು. ಅವರ ಇಗೋಗೆ ಪೆಟ್ಟು ಬಿದ್ದಿತ್ತು. ನಮ್ಮ ಕೋಟೆ ಗಾಬ್ಬಾಗೆ ಬನ್ನಿ ಅಲ್ಲಿ ನೋಡಿಕೊಳ್ಳುತ್ತೇವೆ ಎಂದು ನೇರವಾಗಿಯೇ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದರು.
ಗಾಬ್ಬಾ ಟೆಸ್ಟ್ ಗೆಲುವಿಗೆ ಆಸೀಸ್ ತಂಡವು 328 ರನ್ ಗುರಿ ನೀಡಿತ್ತು. ಟೆಸ್ಟ್ ನ ಕೊನೆಯ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವುದೇ ಒಂದು ಸವಾಲು. ಅಂತದ್ದರಲ್ಲಿ ಭಾರತಕ್ಕೆ 328 ರನ್ ಮಾಡಬೇಕಿತ್ತು. ಎದುರಿಗೆ ಇದ್ದಿದ್ದು ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್ವುಡ್ ಎಂಬ ಘಾತಕ ಬೌಲರ್ ಗಳು.
ಟೀಂ ಇಂಡಿಯಾದ ಮೊದಲ ವಿಕೆಟ್ ಕೇವಲ 18 ರನ್ ಗೆ ಬಿದ್ದಿತ್ತು. ಆಗ ಶುಭಮನ್ ಗಿಲ್ ಗೆ ಜೊತೆಯಾಗಿದ್ದು ಚೇತೇಶ್ವರ ಪೂಜಾರ ಎಂಬ ಕ್ರಿಕೆಟ್ ಸಂತ. ಅದು ಗಾಬ್ಬಾ ಪಿಚ್ ನಲ್ಲಿ ಆತ ನಡೆಸಿದ್ದು ಧ್ಯಾನ. ಆಸೀಸ್ ಬೌಲರ್ ಗಳ ಎಸೆತಗಳು ಈಟಿ ಮೊನೆಯಂತೆ ಬಂದು ಚುಚ್ಚಿತ್ತಿದ್ದರೂ ಪೂಜಾರ ಧ್ಯಾನಕ್ಕೆ ಭಂಗವಾಗಿರಲಿಲ್ಲ. ಅದು ಆತ ಗಳಿಸಿದ್ದು 56 ರನ್ ಮಾತ್ರ. ಆದರೆ ಎದುರಿಸಿದ್ದು 211 ಎಸೆತ. ಕ್ರೀಸ್ ನ ಒಂದೆಡೆ ಬಂಡೆಗಲ್ಲಿನಂತೆ ನಿಂತ ಪೂಜಾರ ಮತ್ತೊಂದೆಡೆ ಗಿಲ್ ಮತ್ತು ಪಂತ್ ಗೆ ರನ್ ಗಳಿಸಲು ನೆರವಾದರು.
ಸರಣಿಯಲ್ಲಿ ಪೂಜಾರಗೆ ಬೌಲಿಂಗ್ ಮಾಡಿ ಸುಸ್ತಾಗಿದ್ದ ಆಸೀಸ್ ಬೌಲರ್ ಗಳು ಈ ಬಾರಿ ಅತ್ಯಂತ ಆಕ್ರಮಣಕಾರಿ ಅಂದರೆ ಬಾಡಿಲೈನ್ ಬೌಲಿಂಗ್ ಮಾಡಲು ಶುರು ಮಾಡಿದ್ದರು. ಪೂಜಾರ ದೇಹವನ್ನು ಗುರಿಯಾಗಿಸಿಕೊಂಡು ತಮ್ಮ ವೇಗದ ಎಸೆತಗಳನ್ನು ಬಾಣದಂತೆ ಎಸೆದರು. ಕಮಿನ್ಸ್ ಅವರ ಎಸೆತವೊಂದು ಪೂಜಾರ ಭುಜಕ್ಕೆ ಬಂದು ಬಡಿದಿತ್ತು. ಇದಾಗಿ ಕೆಲವೇ ನಿಮಿಷದಲ್ಲಿ ಹೇಜಲ್ವುಡ್ ಕೂಡಾ ಅಲ್ಲಿಗೆ ಮತ್ತೊಮ್ಮೆ ಬಡಿದರು. ಕೈಗೆ, ಎದೆಗೆ, ಮುಖಕ್ಕೆ ಗುರಿಯಾಗಿಸಿ ಒಂದೊಂದೇ ಬೆಂಕಿ ಚೆಂಡುಗಳು ಬರಲಾರಂಭಿಸಿದವು. ಧ್ಯಾನ ಭಂಗ ಮಾಡಲು ಬಂದ ರಕ್ಕಸನಂತೆ, ಪೂಜಾರ ತಾಳ್ಮೆ ಪರೀಕ್ಷಿಸಲು ಆಸೀಸ್ ಬೌಲರ್ ಗಳು ಆರಂಭಿಸಿದ್ದರು. ಆದರೆ ಅಲ್ಲಿದ್ದವನು ಯಾರೋ ಸುಮ್ಮನೆ ಬ್ಯಾಟ್ ಬೀಸುತ್ತಾ ಬಂದವನಲ್ಲ. ಬ್ಯಾಲ್ಯದಿಂದಲೂ ಕ್ರೀಸ್ ಬಿಟ್ಟು ಹೋಗುವುದೆಂದರೆ ಅಲರ್ಜಿ ಎನ್ನುತ್ತಿದ್ದ ಚೇತೇಶ್ವರ ಪೂಜಾರ.
140 ಕಿ.ಮೀ ವೇಗದಲ್ಲಿ ಬಂದ ಒಂದು ಎಸೆತವಂತೂ ಪೂಜಾರ ಧರಿಸಿದ್ದ ಹೆಲ್ಮೆಟ್ ಗೆ ಬಡಿದಿತ್ತು. ಅದರ ವೇಗ ಹೇಗಿತ್ತೆಂದರೆ ಕಿವಿಯ ಹಿಂಭಾಗದ ರಕ್ಷಣೆಗೆಂದು ಹೆಲ್ಮೆಟ್ ನಲ್ಲಿರುವ ಗ್ರಿಲ್ ಮುರಿದು ಬಿದ್ದಿತ್ತು. ಆದರೆ ಪೂಜಾರ ಭಯ ಪಡಲಿಲ್ಲ. ಆದರೆ ಪೂಜಾರ ನೋವು ತೋರಿಸಿದ್ದು ಅವರ ಬೆರಳಿಗೆ ತಾಗಿದಾಗ. ಅದಕ್ಕೂ ಮೊದಲು ಮೆಲ್ಬೋರ್ನ್ ಪಂದ್ಯದ ಅಭ್ಯಾಸದ ವೇಳೆ ಚೆಂಡು ಬೆರಳಿಗೆ ಬಡಿದಿದ್ದು. ಅದೇ ನೋವಿನಲ್ಲಿದ್ದ ಪೂಜಾರಗೆ ಮತ್ತೆ ಅಲ್ಲಿಗೆ ಚೆಂಡು ಬಂದು ಬಿದ್ದಾಗ ಲೋಕದ ಎಲ್ಲಾ ನೋವು ಒಮ್ಮೆಗೆ ಆದ ಪರಿಸ್ಥಿತಿ. ಬೆರಳು ಮುರಿದೇ ಹೋಯಿತು ಎಂಬ ಸ್ಥಿತಿಯಾಗಿತ್ತು. ನೋವಿನಿಂದ ಮೈದಾನದಲ್ಲೇ ಮಲಗಿಬಿಟ್ಟಿದ್ದರು.
“ನನಗೆ ಬ್ಯಾಟ್ ಹಿಡಿಯಲು ಸಾಧ್ಯವಾಗಲಿಲ್ಲ. ಆ ಹೊಡೆತದ ನಂತರ ನಾನು ಬಯಸಿದ ರೀತಿಯಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಾನು ನಾಲ್ಕು ಬೆರಳುಗಳಿಂದ ಬ್ಯಾಟನ್ನು ಹಿಡಿದಿಟ್ಟುಕೊಳ್ಳಬೇಕಾಗಿತ್ತು, ತೋರು ಬೆರಳನ್ನು ಹಿಡಿಕೆಯಿಂದ ಹೊರಗಿಡಬೇಕಾಗಿತ್ತು” ಎಂದು ಬಳಿಕ ಪೂಜಾರ ಹೇಳಿದ್ದರು.
ಭಾರತ 97 ಓವರ್ ಆಡಬೇಕಿತ್ತು. ನನಗೆ ಅಂದು ಇದ್ದಿದ್ದು ಒಂದೇ ಯೋಚನೆ. ಮೊದಲ ಸೆಶನ್ ನಲ್ಲಿ ನಾನು ಔಟಾಗಬಾರದು. ವಿಕೆಟ್ ಬೀಳದೆ ಇದ್ದರೆ ತಂಡ ಗೆಲುವು ಪಡೆಯಬಹುದು. ಹೀಗಾಗಿ ಎಷ್ಟೇ ಪೆಟ್ಟು ತಿಂದರೂ ಅಲುಗಾಡದೆ ನಿಂತೆ ಎನ್ನುತ್ತಾರೆ ಮೃದುಭಾಷಿ ಪೂಜಾರ.
ಅಂದು ಮೊದಲ ಸೆಶನ್ ಮುಗಿದು ಲಂಚ್ ಬ್ರೇಕ್ ಗೆ ಹೋದಾಗ ಪೂಜಾರ 90 ಎಸೆತಗಳಲ್ಲಿ ಗಳಿಸಿದ್ದು ಕೇವಲ 9 ರನ್. ಇದು ಪೂಜಾರ ತಾಳ್ಮೆ. “ಆಸೀಸ್ ಬೌಲರ್ ಗಳು ದೇಹ ದಂಡಿಸಿ ಬೌಲಿಂಗ್ ಮಾಡಿದ್ದಾರೆ. ಅವರು ಸುಸ್ತಾಗಿದ್ದಾರೆ. ಇನ್ನು ನನ್ನ ಕೆಲಸ ಸುಲಭ ಎಂದು ಗೊತ್ತಾಗಿತ್ತು. ಹೀಗಾಗಿ ಎರಡನೇ ಸೆಶನ್ ನಲ್ಲಿ ರನ್ ಗಳಿಸಲು ಆರಂಭಿಸಿದೆ” ಎನ್ನುತ್ತಾರೆ ಅವರು.
ಅವರು ಎಷ್ಟು ಬೇಕಾದರೂ ಪಂಚ್ ಮಾಡಲಿ, ಆದರೆ ಒಮ್ಮೆ ನಾನು ಶುರು ಮಾಡಿದರೆ ಅದೆಲ್ಲವನ್ನೂ ಹಿಂದೆ ಕೊಡುತ್ತೇನೆ. ಅದು ನನ್ನ ಆಟದ ಶೈಲಿ ಎನ್ನುವ ಪೂಜಾರ ಈ ಬಾರಿಯ ಆಸೀಸ್ ಸರಣಿಗಾಗಿ ಭಾರತ ತಂಡದಲ್ಲಿಲ್ಲ. ಗಾಬ್ಬಾ ಪಂದ್ಯದಲ್ಲಿ ರಿಷಭ್ ಪಂತ್ ರನ್ ಹೊಡೆದು ಪ್ರಮುಖ ಪಾತ್ರ ವಹಿಸಿದ್ದರು ನಿಜ, ಆದರೆ ಪೂಜಾರ ಅವರ ಕೊಡುಗೆಯನ್ನು ಮರೆಯುವಂತಿಲ್ಲ.
*ಕೀರ್ತನ್ ಶೆಟ್ಟಿ ಬೋಳ