ಬೆಂಗಳೂರು: ಬಿಜಿಎಸ್ ಶಿಕ್ಷಣ ಸಂಸ್ಥೆ ರಾಜ್ಯ ಮತ್ತು ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾದುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರಶಂಸಿಸಿದರು.
ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ ನಂದಿನಿ ಲೇಔಟ್ ನ ಬಿಜಿಎಸ್ ವಿದ್ಯಾಸಂಸ್ಥೆಯಿಂದ ನೂತನ ಬಿ ಎ ಕಾಲೇಜ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದ ಹಲವೆಡೆ 1 ಲಕ್ಷದ 50 ಸಾವಿರಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಾನಾ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೂ ಶಿಕ್ಷಣ ನೀಡಿ ಸಾವಿರಾರು ಕುಟುಂಬಕ್ಕೆ ನೆರವಾಗಿದೆ.ಇದಕ್ಕೆ ಪರಮಪೂಜ್ಯ ಬಾಲಗಂಗಾಧರ ನಾಥ ಶ್ರೀಗಳ ಆಶೀರ್ವಾದದಿಂದ ಇಂಥಹ ಮಹಾನ್ ಕಾರ್ಯಗಳು ಸಾಕಾರಗೊಂಡಿವೆ ಎಂದರು.
ನನ್ನ ಕ್ಷೇತ್ರವಾದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶೇ.,80 ಮಕ್ಕಳು ಬಿಜೆಎಸ್ ಶಿಕ್ಷಣ ಸಂಸ್ಥೆಗೆ ಬರುತ್ತಿದ್ದಾರೆ. ಇಲ್ಲಿ ಯುಪಿಎಸ್ ಸಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ಜೊತೆಗೆ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ದೊಂದಿಗೆ ದೇಶದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಹೊರ ಹೊಮ್ಮಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀ ಮಠದ ಭಕ್ತನಾದ ನಾನು ಇದರ ಶ್ರೇಯೋಭಿ ವೃದ್ದಿಗಾಗಿ ತನು ಮನ ಧನ ಸಹಾಯ ಮಾಡುವುದಾಗಿ ಹೇಳಿದರು.
ಶ್ರಮ ಇದ್ದರೆ ಯಶಸ್ಸು
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಪೀಠದ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ ಅವರ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಬದ್ದತೆ ಹಾಗೂ ಕಠಿಣ ಶ್ರಮ ಇದ್ದರೆ ಯಶಸ್ಸು ತಾನೆ ಹುಡುಕಿಕೊಂಡು ಬರುತ್ತದೆ. ಪ್ರತಿಭೆ ಇರುವ ವಿದ್ಯಾರ್ಥಿಗಳನ್ನು ದೇಶದ ನಾನಾ ಕಂಪನಿಗಳು ಹುಡುಕುತ್ತಿವೆ. ನಮ್ಮ ಬಾಹ್ಯ ಸೌಂದರ್ಯ, ಆಸ್ತಿ, ಅಂತಸ್ತು ನೋಡಿ ಕೆಲಸ ನೀಡುವುದಿಲ್ಲ ಬದಲಿಗೆ ನಮ್ಮಲ್ಲಿ ಪ್ರತಿಭೆ ಇರಬೇಕು. ಅಂಥಹ ಪ್ರತಿಭಾವಂತರಾಗಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.