Advertisement

ಬಿ ಜಿ ಎಲ್‌ ಸ್ವಾಮಿ ಕಲಾಪ್ರಪಂಚ 

06:00 AM Mar 16, 2018 | |

ಬಿ.ಜಿ.ಎಲ್‌. ಸ್ವಾಮಿ ಎಂದೇ ಪ್ರಸಿದ್ಧರಾಗಿರುವ ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ ಅಂತರಾಷ್ಟ್ರೀಯ ಖ್ಯಾತಿಯ ಸಸ್ಯಶಾಸ್ತ್ರ ಚರಿತ್ರಕಾರ, ಸಾಹಿತಿ ಹಾಗೂ ಅಸಾಮಾನ್ಯ ಕಲಾಕಾರ.ಇವರು ಸಾಹಿತಿ ಡಿ.ವಿ.ಜಿಯವರ ಏಕೈಕ ಪುತ್ರರಾಗಿದ್ದಾರೆ.ಈ ವರ್ಷ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ನಿಮಿತ್ತ ಮಣಿಪಾಲದ ಡಾ| ಪಳ್ಳತ್ತಡ್ಕ ಕೇಶವ ಭಟ್‌ ಟ್ರಸ್ಟ್‌ ಆಯೋಜಿಸಿದ “ಬಿ.ಜಿ.ಎಲ್‌ ಸ್ವಾಮಿ ನೂರರ ನೆನಪು’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ “ಸ್ವಾಮಿಯವರ ಕಲಾ ಪ್ರಪಂಚ’ದ ಇಣುಕು ನೋಟ ಇಲ್ಲಿದೆ. 

Advertisement

ಪೊ›| ಬಿ.ಜಿ.ಎಲ್‌. ಸ್ವಾಮಿಯವರ ಚಿತ್ರಗಳು ಸಸ್ಯಶಾಸ್ತ್ರದ ಗ್ರಂಥಗಳಲ್ಲಿಯೂ ಅವರು ಬರೆದ ಸಾಹಿತ್ಯದಲ್ಲಿಯೂ, ಚಿತ್ರಕೃತಿಗಳಲ್ಲಿಯೂ ಹಾಗೂ ವಸ್ತ್ರ-ವಸ್ತು ವಿನ್ಯಾಸಗಳಲ್ಲಿಯೂ ಕಂಡು ಬರುತ್ತವೆ. ಸಸ್ಯಶಾಸ್ತ್ರದ ಅಧ್ಯಯನಕ್ಕೆ ಬೇಕಾದಂತಹ ಅಂಗರಚನಾ ಚಿತ್ರಗಳನ್ನು ಬಹಳ ನಿರ್ದಿಷ್ಟವಾಗಿ, ನಿಖರವಾಗಿ ಕೂಲಂಕಷ ಅಧ್ಯಯನ ಮಾಡಿ ಸ್ವಾಮಿಯವರು ವೈಜ್ಞಾನಿಕ ಪುಸ್ತಕಗಳಲ್ಲಿ ಪ್ರಕಟಿಸಿದ್ದರು.ಅಮೇರಿಕಾದ ಇರ್ವಿನ್‌ ಬೈಲಿಯವರು 1954ರಲ್ಲಿ  ಪ್ರಕಟಿಸಿದ (Chronica Botanica ) ಎನ್ನುವ ಗ್ರಂಥದಲ್ಲಿ ಅಧ್ಯಯನಕ್ಕೆ ಸಂಬಂಧಿಸಿದ ಚಿತ್ರಗಳಲ್ಲದೆ ಪ್ರತಿ ಅಧ್ಯಾಯದ ಮುಖಪುಟದಲ್ಲಿ ಸೂಕ್ಷ್ಮ ದರ್ಶಕದಲ್ಲಿ ಕಂಡಂತಹ ವಿವರಗಳನ್ನು ವಿನ್ಯಾಸ ರೂಪದಲ್ಲಿ ಚಿತ್ರಿಸಿದ್ದಾರೆ. 

    ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ “ಹಸಿರು ಹೊನ್ನು’, ಜನಪ್ರಿಯ ರಚನೆಗಳಾದ ಕಾಲೇಜು ರಂಗ, ಕಾಲೇಜು ತರಂಗ, ದೌರ್ಗಂಧಿಕಾಪಹರಣ, ಸಾಕ್ಷತ್ಕಾರದ ಹಾದಿಯಲ್ಲಿ ಮುಂತಾದ ಅವರ ಕನ್ನಡ ಮೇರು ಸಾಹಿತ್ಯ ಕೃತಿಗಳಲ್ಲಿಯೂ ಸಂದರ್ಭಕ್ಕೆ ತಕ್ಕಂತೆ ಸರಳ ಸ್ಪಷ್ಟ ಚಿತ್ರಗಳನ್ನು ರಚಿಸಿದ್ದರು. ಪುಸ್ತಕದಲ್ಲಿ ಜನಸಾಮಾನ್ಯರಿಗೆ ಸುಲಭವಾಗುವಂತೆ ಹೇಗೆ ಅಕ್ಷರಗಳನ್ನು ಪೋಣಿಸಿದ್ದರೋ ಅಷ್ಟೇ ಸುಲಭವಾಗಿ ಭಾವನಾತ್ಮಕವಾಗಿ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿದ್ದರು. ಅವುಗಳಲ್ಲಿ ಕೆಲವು ಸಸ್ಯಶಾಸ್ತ್ರಕ್ಕೆ ಅನುಗುಣವಾಗಿರುವಂತಹ ಕರಾರುವಕ್ಕಾದ ಸಸ್ಯಶಾಸ್ತ್ರೀಯ ಅಂಗರಚನಾ ಕೌಶಲದವುಗಳಾಗಿದ್ದರೆ, ಇನ್ನೂ ಕೆಲವು ಚಿತ್ರಗಳು ತಮ್ಮ ವಿದ್ಯಾರ್ಥಿಗಳು ಸಹೋದ್ಯೋಗಿಗಳ ಸುತ್ತ ಹಣೆದ ಸಂದರ್ಭಕ್ಕನುಗುಣವಾಗಿದ್ದವು. ಅವರ ಬರವಣಿಗೆಯ ಗದ್ಯ-ಚಿತ್ರಗಳನ್ನು ಓದಿ ನೋಡುತ್ತಿದ್ದಂತೆ ಮನಸ್ಸಿಗೆ ಅಪ್ಯಾಯಮಾನವಾದಂತಹ ಅನುಭವದ ಕಚಗುಳಿಯ ಚಿತ್ರಣವಾಗುತ್ತದೆ. 

ಸ್ವಾಮಿಯವರ ಸಾಹಿತ್ಯದಲ್ಲಿ ವ್ಯಂಗ್ಯಚಿತ್ರಗಳನ್ನು ಹೋಲುವ ಎರಡು ಆಯಾಮದ(2ಈ) ರೇಖಾಚಿತ್ರಗಳು ತೆಳು ಜಲವರ್ಣದ ಲೇಪದೊಂದಿಗೆ ಕಂಗೊಳಿಸುತ್ತಿದ್ದವು. ಪ್ರಕಟಣಾ ವೆಚ್ಚವನ್ನು ಮಿತಿಯಲ್ಲಿಡಲು ಕಪ್ಪು-ಬಿಳುಪಿನ ಚಿತ್ರಗಳಾಗಿಯೇ ಅವು ಅಚ್ಚಾಗುತ್ತಿದ್ದವು. ಅವರ ಸಾಹಿತ್ಯ ಕೃಷಿಯನ್ನು ಗಮನಿಸಿದಾಗ ಮೂರು ವಿಧದ ಶೈಲಿಯನ್ನು ಅವರು ಅನುಸರಿಸುತ್ತಿದ್ದರು. ಜೀವಶಾಸ್ತ್ರದ ನಿಖರವಾದ ಚಿತ್ರಗಳು, ಬರವಣಿಗೆ ಹಾಗೂ ಸಂದಂರ್ಭಕ್ಕೆ ತಕ್ಕಂತಹ ಚಿತ್ರಗಳು, ಖಾಲಿ ಸ್ಥಳ ತುಂಬಲು ಮಾಡಿದಂತಹ ವಸ್ತುಚಿತ್ರಗಳು. 

ರಚನಾತ್ಮಕ ಚಿತ್ರ ರಚನೆಯ ಹಲವು ಸರಣಿಗಳನ್ನು ಅವರು ರಚಿಸಿದ್ದಾರೆ. ಅವುಗಳಲ್ಲಿ 42 ಚಿತ್ರಗಳುಳ್ಳ Plant Morphology  ಯ ಬಗ್ಗೆ ಮಾಡಿರುವ ಜಲವರ್ಣ ಕಲಾಕೃತಿಗಳು ಉತ್ಕೃಷ್ಟ ಚಿತ್ರ ಪ್ರಬಂಧಗಳು. ವರ್ಣ ಸಂಯೋಜನೆ ರಚನಾತ್ಮಕ ಭಾವನೆ ಹಾಗೂ ಕಲಾತ್ಮಕ ರಂಜನೆ ನೀಡುವಲ್ಲಿ ಈ ಚಿತ್ರಗಳು ಉತ್ತಮ ಅಭಿವ್ಯಕ್ತಿ ನೀಡಿರುವ ಕಲಾಕೃತಿಗಳಾಗಿವೆ. ಆಟ ಎಂಬಂತೆ ಪ್ರತಿಯೊಂದು ಕಲಾಕೃತಿಗೂ ಸುಂದರ ಪದ್ಯಗಳನ್ನು ರಚಿಸಿದ್ದಾರೆ. ಅವುಗಳಲ್ಲಿ “Self Examination’ ಎನ್ನುವಂತಹ ರಚನೆಯು ಮಾರ್ಮಿಕವಾಗಿ ಮೂಡಿಬಂದಿದೆ. ಅವರ ಹೆಚ್ಚಿನ ಸರಣಿ ಕಲಾಕೃತಿಗಳು ಏಕರೂಪ ವರ್ಣಗಾರಿಕೆಯ, ಸೌಮ್ಯಬಣ್ಣದ, ನಾಜೂಕಾದ ಜಲವರ್ಣದ ಅಪಾರದರ್ಶಕ (Opaque) ತಂತ್ರಗಾರಿಕೆಯನ್ನು ಹೊಂದಿವೆ. 

Advertisement

ಡಯಾಟಂಗಳಂತಹ ಏಕಕೋಶ ಜೀವಿಗಳ ಸೊಬಗನ್ನು, ಗಿಡಮರಗಳ ಕಾಂಡ-ಬೇರುಗಳ ರಚನೆಯ ಅಂದವನ್ನೂ, ಸೂಕ್ಷ್ಮದರ್ಶಕದಲ್ಲಿ ಕಾಣುವ ಜೀವಕೋಶಗಳ ಸೌಂದರ್ಯವನ್ನು ಸೀರೆ, ಪರದೆ, ಬಟ್ಟೆಗಳಿಗೆ ಈ ವಿನ್ಯಾಸವನ್ನು ಉಪಯೋಗಿಸುವಂತೆ ವಿನ್ಯಾಸಕಾರರನ್ನು/ಉದ್ಯಮಿಗಳನ್ನು ಪ್ರೇರೇಪಿಸಿದ್ದರು. ಸ್ವತಹ ಮೈಟೋಕೋಂಡ್ರಿಯಾ, ಸ್ಟೊಮಾಟಾಗಳ ಚಿತ್ರವನ್ನು ಬಣ್ಣದ ಮಣಿಗಳನ್ನು ಪೋಣಿಸಿ ಕಸೂತಿಯಲ್ಲಿ ವಿನ್ಯಾಸಗಳನ್ನು ರಚಿಸಿದ್ದರು. ಸಸ್ಯಶಾಸ್ತ್ರದ ಅಂತರಾಳದ ಮಾಯಾ ಸೊಬಗನ್ನು ಕ್ಯಾನ್ವಾಸ್‌ ಅಲ್ಲದೆ ಮಣ್ಣಿನ ಕಲಾಕೃತಿಗಳಲ್ಲಿ, ಗೋಡೆ, ಪಾತ್ರೆ, ವಸ್ತ್ರಗಳಲ್ಲಿ ಕಲಾತ್ಮಕವಾಗಿ ಮೂಡಿಸುತ್ತಿದ್ದರು. 

ಸ್ವಾಮಿಯವರು ವಯಲಿನ್‌ ವಾದನದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದು, ವೀಣೆಯನ್ನು ನುಡಿಸುತ್ತಿದ್ದರು. ಉತ್ತಮ ಸಂಗೀತದ ಆಸ್ವಾದಕರಾಗಿದ್ದರು. ಶ್ರೇಷ್ಠ ಸಂಶೋಧಕ‌, ದಕ್ಷ ಅಧ್ಯಾಪಕ, ಸಾಹಿತ್ಯ ಚಿತ್ರಕಲೆ ಲೋಕಕ್ಕೆ ಅಸಾಮಾನ್ಯ ಕೊಡುಗೆ ನೀಡಿದಂತಹ ಬಹುಮುಖ ಪ್ರತಿಭೆಯ ಡಾ|ಬಿ.ಜಿ.ಎಲ್‌. ಸ್ವಾಮಿಯವರಿಗೆ ಹುಟ್ಟಿದ ನೂರನೇ ವರುಷದ ಸಂದರ್ಭದಲ್ಲಿ ಇದೊಂದು ಪುಟ್ಟ ಅಕ್ಷರ ನಮನ. 

ಪವನ ಬಿ. ಆಚಾರ್‌

Advertisement

Udayavani is now on Telegram. Click here to join our channel and stay updated with the latest news.

Next