Advertisement

ಕುಗ್ಗಿದ ತಾಪಂ; ಹಿಗ್ಗಿದ ಜಿಪಂ!

03:41 PM Feb 14, 2021 | Team Udayavani |

ಬಾಗಲಕೋಟೆ: ಬಸವನಾಡು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವಿಸ್ತಾರವಾಗಿದೆ. ಆದರೆ, ತಾಪಂ ಕ್ಷೇತ್ರಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ.

Advertisement

ಹೌದು, 2016ರ ಜಿಪಂ ಚುನಾವಣೆ ವೇಳೆ ಒಟ್ಟು 36 ಕ್ಷೇತ್ರಗಳಿದ್ದವು. ಅದಕ್ಕೂ ಮುಂಚೆ 2011ರಲ್ಲಿ 32 ಕ್ಷೇತ್ರಗಳನ್ನು ಬಾಗಲಕೋಟೆ ಜಿಪಂ ಹೊಂದಿತ್ತು. ಇದೀಗ 2021ರಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ 4 ಹೆಚ್ಚಳವಾಗಿದ್ದು, ಬರೋಬ್ಬರಿ 40 ಸದಸ್ಯರು ಜಿಪಂಗೆ ಆಯ್ಕೆಯಾಗಲಿದ್ದಾರೆ.

ಕುಗ್ಗಿದ ತಾಪಂ ಕ್ಷೇತ್ರಗಳು: 2016ಕ್ಕೂ ಮುಂಚೆ ಜಿಲ್ಲೆಯಲ್ಲಿ ಆರು ತಾಲೂಕುಗಳಿದ್ದವು. ಆಗ ತಾಪಂ ಕ್ಷೇತ್ರಗಳು 130 ಇದ್ದವು. ಇದೀಗ ಅವುಗಳನ್ನು 110ಕ್ಕೆ ಕಡಿತ ಮಾಡಲಾಗಿದೆ. ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಿ, ತಾಪಂ ಕ್ಷೇತ್ರಗಳನ್ನು 110ಕ್ಕೆ ಇಳಿಸಿ, ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡುವುದೇ ಜಿಲ್ಲೆಯ ಅಧಿಕಾರಿಗಳಿಗೆ ಸವಾಲಾಗಿದೆ ಎನ್ನಲಾಗಿದೆ.

ಗಲಕೋಟೆ ತಾಲೂಕಿನಲ್ಲಿ ಈ ಮೊದಲು 18 ತಾಪಂ ಕ್ಷೇತ್ರಗಳಿದ್ದವು. ಈಗ ಅವು 13ಕ್ಕೆ ಇಳಿದಿವೆ. ಇನ್ನು ಹುನಗುಂದ ಮತ್ತು ಇಳಕಲ್ಲ ಸೇರಿ ಒಟ್ಟು 21 ಕ್ಷೇತ್ರಗಳಿರುವುದನ್ನು ಪ್ರತ್ಯೇಕ ತಾಲೂಕು ಆದ ಬಳಿಕ ಹುನಗುಂದಕ್ಕೆ 9 ಮತ್ತು ಇಳಕಲ್ಲಗೆ 9 ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದೆ.

ಬಾದಾಮಿ (ಗುಳೇದಗುಡ್ಡ ಸೇರಿ) ಈ ಮೊದಲು ಒಟ್ಟು 25 ತಾ.ಪಂ. ಕ್ಷೇತ್ರಗಳಿದ್ದವು. ಅದರಲ್ಲಿ ಬಾದಾಮಿಗೆ ಈ ಬಾರಿ 16 ಕ್ಷೇತ್ರ ಹಂಚಿಕೆಯಾಗಿದ್ದರೆ, ಗುಳೇದಗುಡ್ಡಕ್ಕೆ 11 ಕ್ಷೇತ್ರ ವಿಂಗಡಿಸಲು ಚುನಾವಣೆ ಆಯೋಗ ನಿರ್ದೇಶನ ನೀಡಿದೆ. ಜಮಖಂಡಿ (ರಬಕವಿ-ಬನಹಟ್ಟಿ ಸೇರಿ) ತಾಲೂಕಿನಲ್ಲಿ ಮೊದಲು

Advertisement

29 ತಾಪಂ ಕ್ಷೇತ್ರಗಳಿದ್ದವು. ಅದರಲ್ಲಿ ಈ ಬಾರಿ ಜಮಖಂಡಿಗೆ 16, ರಬಕವಿ-ಬನಹಟ್ಟಿ ತಾಪಂ 11 ಕ್ಷೇತ್ರ ಹೊಂದಲಿದೆ. ಇನ್ನು ಮುಧೋಳ ತಾಲೂಕಿನಲ್ಲಿ ಮೊದಲು 22 ತಾಪಂ ಕ್ಷೇತ್ರಗಳಿದ್ದವು. ಮಹಾಲಿಂಗಪುರ ಭಾಗ ರಬಕವಿ-ಬನಹಟ್ಟಿ ತಾಲೂಕಿಗೆ ಸೇರಿದ್ದರಿಂದ ಇಲ್ಲಿಯೂ ಕ್ಷೇತ್ರಗಳ ಕಡಿತವಾಗಿವೆ. ಮುಧೋಳ ತಾಲೂಕಿನಲ್ಲಿ ಈ ಬಾರಿ 13 ತಾಪಂ ಕ್ಷೇತ್ರ ರಚನೆ ಮಾಡಬೇಕಿದೆ. ಬೀಳಗಿ ತಾಪಂನಲ್ಲಿ ಮೊದಲು 15 ಕ್ಷೇತ್ರಗಳಿರುವುದನ್ನು ಈ ಬಾರಿ 13ಕ್ಕೆ ಇಳಿಸಲಾಗಿದೆ.

ಹಿಗ್ಗಿದ ಜಿಪಂ ಕ್ಷೇತ್ರಗಳು: ಜಿಪಂ, ತಾಪಂ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಚುನಾವಣೆ ಆಯೋಗ ಸ್ಪಷ್ಟ ನಿರ್ದೇಶನ ನೀಡಿದ್ದು, ಆಯಾ ಜಿಪಂ ಕ್ಷೇತ್ರವಿಂಗಡಿಸುವಾಗ, ಗ್ರಾಪಂ ಪೂರ್ಣ ಕ್ಷೇತ್ರವನ್ನು ಒಳಗೊಂಡಿರಬೇಕು. ಅಲ್ಲದೇ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ವಿಂಗಡಿಸಲು ಸೂಚಿಸಿದ್ದು, ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರಗಳು ಹೆಚ್ಚಾಗಿವೆ. 36 ಕ್ಷೇತ್ರಗಳು 40ಕ್ಕೆ ಏರಿಕೆಯಾಗಿದ್ದು, ಬಾಗಲಕೋಟೆ-5, ಹುಗನುಂದ-3, ಬಾದಾಮಿ-6, ಗುಳೇದಗುಡ್ಡ-2, ಇಳಕಲ್ಲ-4, ಜಮಖಂಡಿ-6, ಮುಧೋಳ-5, ಬೀಳಗಿ-5, ರಬಕವಿ-ಬನಹಟ್ಟಿ-4 ಸೇರಿ ಒಟ್ಟು 40 ಜಿಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬೇಕಿದೆ.

ಇದನ್ನೂ ಓದಿ :ಸಿಎಂ ಗಾದಿಗೆ ಕಾಂಗ್ರೆಸ್‌ನಲ್ಲಿ ಮ್ಯೂಸಿಕಲ್‌ ಚೇರ್‌ ಆಟ

ತೇರದಾಳಕ್ಕೆ ಸಿಗದ ಮಾನ್ಯತೆ: ಜಿಲ್ಲೆಯಲ್ಲಿ ಈ ಮೊದಲು ಇದ್ದ 6 ತಾಲೂಕುಗಳು, ಈಗ 9ಕ್ಕೇರಿವೆ. ತೇರದಾಳ ಹೊಸ ತಾಲೂಕು ಘೋಷಣೆಯಾದರೂ, ಅದಕ್ಕೆ ಭೌಗೋಳಿಕ ಕ್ಷೇತ್ರದ ಗಡಿ ನಿಶ್ಚಿಯಿ ಅಂತಿಮಗೊಳಿಸುವ ಕಾರ್ಯ ಮಾಡುವಲ್ಲಿ ಸರ್ಕಾರ ನಿರಾಸಕ್ತಿ ವಹಿಸುತ್ತಿದೆ ಎಂಬ ಅಸಮಾಧಾನ ತೇರದಾಳ ತಾಲೂಕು ಹೋರಾಟ ಸಮಿತಿ ವ್ಯಕ್ತಪಡಿಸಿದೆ. ಚುನಾವಣೆ ಆಯೋಗ ನೀಡಿದ ನಿರ್ದೇಶನದಲ್ಲಿ ತೇರದಾಳ ತಾಲೂಕಿಗೆ ಮಾನ್ಯತೆ ಸಿಕ್ಕಿಲ್ಲ. ಆಯೋಗ ಉಲ್ಲೇಖೀಸಿದ ತಾಲೂಕುಗಳಲ್ಲಿ 9 ಮಾತ್ರ ನೀಡಿದ್ದು, ತೇರದಾಳ ಅನ್ನು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಬಾರಿ ಬಾದಾಮಿಯಿಂದ ಬೇರ್ಪಟ್ಟ ಗುಳೇದಗುಡ್ಡ, ಹುನಗುಂದದಿಂದ ಬೇರ್ಪಟ್ಟ ಇಳಕಲ್ಲ ಹಾಗೂ ಜಮಖಂಡಿಯಿಂದ ಬೇರ್ಪಟ್ಟ ರಬಕವಿ-ಬನಹಟ್ಟಿ ತಾಲೂಕಿನಲ್ಲಿ (ಈಗಾಗಲೇ ತಾಪಂ ಕಚೇರಿ ಆರಂಭಗೊಂಡಿದ್ದು, ಅಧ್ಯಕ್ಷ-ಉಪಾಧ್ಯಕ್ಷರೂ ಆಯ್ಕೆಯಾಗಿದ್ದಾರೆ) ಹೊಸ ಕ್ಷೇತ್ರಗಳ ಪುನರ್‌ ವಿಂಗಡಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next