Advertisement
ಕಿಟಕಿಗಳು ನನ್ನನ್ನು ಕಾಡಿದಷ್ಟು ಯಾವುದೂ ನನ್ನ ಇದುವರೆಗಿನ ಬದುಕಿನಲ್ಲಿ ಕಾಡಿಲ್ಲ. ಅಲ್ಲಿಂದಲೇ ಹೊರ ಜಗತ್ತನ್ನು ಅಳೆಯಬಹುದು. ಅದು ನನಗೆ ಒಳಗಿದ್ದುಕೊಂಡೇ ಜಗತ್ತನ್ನು ತೋರಿಸುವ ಕಿಂಡಿಗಳು. ನಾನಿದ್ದದ್ದು ಎರಡನೇ ಮಹಡಿಯಲ್ಲಿ. ಸಂಜೆ ನನ್ನ ಕೆಲಸವಾದ ನಂತರ ಅಲ್ಲೇ ಕುಳಿತು ಕಿಟಕಿಯಿಂದ ರಸ್ತೆಯನ್ನು ನೋಡಿದರೆ ಜಗತ್ತಿಗೆ ಚಲನ ಬಂದ ಹಾಗೆ. ಬಗೆ ಬಗೆಯ ಜನರ ರಂಗುರಂಗಿನ ಬದುಕು ಅಲ್ಲೇ ತೆರೆದುಕೊಳ್ಳುತ್ತದೆ. ಹಾಲ್‌ನ ಕಿಟಕಿಯ ಅಭಿಮುಖವಾಗಿ ಎದುರು ಮನೆಯ ಕಿಟಕಿ. ನಾನು ಅಲ್ಲಿ ಕುಳಿತಾಗೆಲ್ಲಾ ಎದುರಿನ ಕಿಟಕಿಯಿಂದ ನನ್ನ ಕಡೆ ನೋಡುತ್ತಿದ್ದ ಜೋಡಿ ಕಣ್ಣುಗಳು ನನಗೆ ಅಪರಿಚಿತವೇನಲ್ಲ. ಕೆಲವೇ ದಿನಗಳಲ್ಲಿ ನನ್ನ ದೃಷ್ಟಿಯೂ ರಸ್ತೆಯ ಬದುಕಿನ ಆಕರ್ಷಣೆಯಿಂದ ಬಿಡಿಸಿಕೊಂಡು ಕಿಟಕಿಯ ಕಡೆ ವಾಲಿದ್ದು ಯೌವ್ವನದ ಮಹಿಮೆಯೇ ಹೊರತು ಬೇರೇನೂ ಅಲ್ಲ. ಅಲ್ಲಿ ಕಾಲೇಜ್ ಹೋಗುವ ಹುಡುಗಿ, ಇತ್ತ ಈಗಷ್ಟೇ ಕೆಲಸ ದೊರೆತ ಇಪ್ಪತ್ತರ ತರುಣ. ಬೆಂಕಿಯೂ ಹೊತ್ತಿಕೊಂಡಿತು; ಬೆಣ್ಣೆಯೂ ಕರಗಿತು. ನಂತರ ನಡೆದದ್ದು ಮಾಮೂಲಿ ವಿಷಯ ಬಿಡಿ. ಲವ್, ಸುತ್ತಾಟ, ಸ್ವಲ್ಪ ದಿನದ ಗುಟ್ಟು. ನಂತರ ರಟ್ಟು. ಒತ್ತಡ, ಅಸಹಾಯಕತೆ, ಕೊನೆಗೆ ಹೇಳಿ ಹೋಗು ಕಾರಣ ಅಂತ ವಿರಹದ ಅತಿರೇಕ. ಕತೆ ಕೇಳಿ ಕೇಳಿ ಗ್ಲಾಸ್‌ಗೆ ವ್ಹಿಸ್ಕಿ ಹಾಕಿ ಸೋಡ ಮಿಕ್ಸ್ ಮಾಡಿ, ತುಟಿಗೆ ಸಿಗರೇಟ್ ಇಟ್ಟು “ಸಾಂತ್ವನ ಮಾಡಲು’ ಹೇಗೂ ಫ್ರೆಂಡ್ಸ್ ಏನೂ ಕಮ್ಮಿ ಇರಲಿಲ್ಲ.
Related Articles
Advertisement
ಬಿ.ಆರ್. ಲಕ್ಷ್ಮಣ ರಾವ್ ಅವರ ಒಂದು ಕವಿತೆ ಇವರನ್ನು ನೋಡಿದಾಗೆಲ್ಲಾ ಕಾಡುತ್ತಿತ್ತು…ನನ್ನ ನಿನ್ನ ಪ್ರೀತಿ
ಅಪ್ಪಟ ಚಿನ್ನವಾದರೇನು?
ಕೊಡದಿದ್ದರೆ ಮೆರುಗು
ಮಾಸುವುದು ಅದೂನು…
ತೀರಾ ತಲೆ ಕೆಡುವ ಹಂತ ಬಂದಾಗ ಕಿಟಕಿಯ ಪರದೆಯನ್ನು ಮುಚ್ಚಿಬಿಡುತ್ತಿದ್ದೆ. ಮುಂದೆ ನನ್ನದೂ ಮದುವೆ ಆಯ್ತು. ಮಕ್ಕಳೂ ಕೂಡಾ. ಕಂಪೆನಿಯೂ ಬದಲಾಗಿ ಬೆಂಗಳೂರಿನಿಂದ ನನ್ನ ನೆಚ್ಚಿನ ಕರಾವಳಿಯ ಮಂಗಳೂರಿಗೆ. ಬೇರೆ ಮನೆ, ಬೇರೆ ಕಿಟಕಿ. ತಣಿಯದ ಕುತೂಹಲದ ಬದುಕಿನ ಹೊಸ ನೋಟ. ಎದುರು ಮನೆ ಕಿಟಕಿಯಲ್ಲಿ ನಡುವಯಸ್ಸು ದಾಟಿದ ಇಬ್ಬರೂ ಕೆಲಸಕ್ಕೆ ಹೋಗುವ “ಹೊಸ’ ಸಂಸಾರ. ವಯಸ್ಸಿಗೆ ಬಂದಿರೋ ಮಕ್ಕಳು. ಬೆಳಗ್ಗೆದ್ದು ಕಿಟಕಿಯಾಚೆ ಕಣ್ಣು ಹಾಯಿಸಿದರೆ ಆ ಮನೆಯ ವರ್ತಮಾನ ಬಯಲು. ಗಂಡ-ಹೆಂಡತಿ ಇಬ್ಬರೂ ಅಡುಗೆ ಕೋಣೆಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬೆಳಗಿನ ಉಪಹಾರ ತಯಾರು ಮಾಡುವ ದೃಶ್ಯ ನನ್ನನ್ನು ಬಹುವಾಗಿ ಕಾಡುತ್ತಿತ್ತು. ಗಂಡ ಹಿಟ್ಟು ಲಟ್ಟಿಸಿ ಕೊಟ್ಟರೆ ಚಪಾತಿ ಕಾಯಿಸುವ ಕೆಲಸ ಹೆಂಡತಿಯದ್ದು. ಚಟ್ನಿಗೆ ಗಂಡ ಕಾಯಿ ತುರಿದು ಕೊಟ್ಟರೆ ಮಿಕ್ಸಿಯಲ್ಲಿ ರುಬ್ಬುವ ಕೆಲಸ ಹೆಂಡತಿಯದ್ದು. ಎಲ್ಲಾ ಕೆಲಸದಲ್ಲೂ ಸಮಪಾಲು, ಎಂತಹ ಅನ್ಯೋನ್ಯತೆ. ಅವರ ನಡುವೆ ಸುಳಿದಾಡುವಂತದ್ದು ಪ್ರೇಮವೋ ಕಾಮವೋ. ಒಬ್ಬರಿಗೊಬ್ಬರು ಈಗ ಅನಿವಾರ್ಯ ಅನ್ನಿಸುವಂತಹ ಅವಲಂಬನೆಯೋ ಗೊತ್ತಾಗುತ್ತಿರಲಿಲ್ಲ. ಆದರೆ ಅವರು ಜೀವಿಸುತ್ತಿದ್ದ ರೀತಿಯಿಂದ ನನ್ನ ಮನೆಯೊಳಗೂ ಆ ಪರಿಮಳ ಹರಡಿ ಬದುಕನ್ನು ಸಹ್ಯಗೊಳಿಸುತ್ತಿತ್ತು. ನಡೆದ ಬದುಕಿನ ಎಲ್ಲಾ ಘಟನೆಗಳನ್ನು ಹಿಂತಿರುಗಿ ನೋಡಿದಾಗ ಮನಸ್ಸು ಚಿಂತನೆಯಲ್ಲಿ ತೊಡಗುತ್ತದೆ. ದೃಷ್ಟಿ ನನ್ನದೇ, ಕಿಟಕಿಯೂ ಕೂಡಾ. ಆದರೆ ಹೊರಗಿನ ವ್ಯವಹಾರಗಳು ಕಾಲಕಾಲಕ್ಕೆ ಬದಲಾಗುತ್ತಾ ಹೋದವು. ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ನಮ್ಮ ದೃಷ್ಟಿ , ನಮ್ಮ ಆವಶ್ಯಕತೆ, ಅನಿವಾರ್ಯತೆಗಳು ಬೇರೆ ಬೇರೆಯಾಗಿರುವುದರಿಂದಲೇ ನಮ್ಮ ಕಣ್ಣಿಗೆ ಬೀಳುವ ದೃಶ್ಯಗಳೂ ಅಂತಹುಗಳೇ. ಪ್ರೇಮ, ಜಗಳ, ಹೊಂದಾಣಿಕೆ ಇವೆಲ್ಲವೂ ನಮ್ಮ ಅನಿವಾರ್ಯತೆಗಳನ್ನು ಅವಲಂಬಿಸಿವೆ. ಎಲ್ಲವೂ ಆಯಾ ವಯಸ್ಸಿನಲ್ಲಿ ಚಂದವೇ. ಆದರೆ ಹಿತಮಿತವಿರಬೇಕೆಂಬ ಅರಿವು ನಮ್ಮಲ್ಲಿರಬೇಕು. ಎಲ್ಲಕ್ಕಿಂತಲೂ ಬದುಕು ದೊಡ್ಡದೆಂಬ ಅರಿವು ಸದಾ ನಮ್ಮಲ್ಲಿರಬೇಕು. ಈಗ ಮತ್ತೆ ಮನೆ ಬದಲಾಯಿಸಿದ್ದೇನೆ. ಆದರೆ, ಯಾಕೋ ಇನ್ನು ಮುಂದೆ ಎದುರು ಮನೆಯ ಕಿಟಕಿಗಳು ತೆರೆಯುತ್ತವೋ ಇಲ್ಲವೋ ಎಂಬ ಆತಂಕ ಇತ್ತೀಚೆಗೆ ನನ್ನನ್ನು ಕಾಡುತ್ತಿದೆ. – ರವೀಂದ್ರ ನಾಯಕ್