Advertisement

ಕೋವಿಡ್ ಬಗ್ಗೆ ಎಚ್ಚರ: ಕರ್ನಾಟಕ ಸೇರಿ 7 ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

11:44 PM Aug 06, 2022 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ಕೇಂದ್ರ ಸರಕಾರವು ಎಚ್ಚರಿಕೆಯ ಸಂದೇಶ ರವಾನಿಸಿದೆ.

Advertisement

ಅರ್ಹ ಜನರಿಗೆ ಲಸಿಕೆ ವಿತರಣೆಗೆ ವೇಗ ನೀಡಿ, ಕೊರೊನಾ ಪರೀಕ್ಷೆ ಹೆಚ್ಚಳ ಮಾಡಿ ಮತ್ತು ಮಾರ್ಗ ಸೂಚಿ ಗಳನ್ನು ತಪ್ಪದೇ ಪಾಲಿಸುವಂತೆ ನೋಡಿಕೊಳ್ಳಿ ಎಂದು ಕರ್ನಾಟಕ, ಕೇರಳ, ದಿಲ್ಲಿ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ತೆಲಂಗಾಣ ಸರಕಾರಕ್ಕೆ ಬರೆದ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಸೂಚಿಸಿದ್ದಾರೆ.

ಹಬ್ಬಗಳ ಋತು ಆರಂಭವಾದ ಕಾರಣ ಜನರು ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂಥ, ಅಂತಾರಾಜ್ಯ ಪ್ರಯಾಣ ಬೆಳೆಸುವಂಥ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಸೋಂಕು ಬೇಗವೆ ವ್ಯಾಪಿಸುವ ಭೀತಿಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದು, ಸೋಂಕು ಪ್ರಕರಣ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

24 ಗಂಟೆಯಲ್ಲಿ 19 ಸಾವಿರ ಪ್ರಕರಣ: ಶುಕ್ರವಾರ ಬೆಳಗ್ಗೆಯಿಂದ ಶನಿವಾರದ ಬೆಳಗ್ಗೆ ನಡುವಿನ 24 ಗಂಟೆಗಳಲ್ಲಿ ದೇಶದಲ್ಲಿ 19,406 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ, ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4.41 ಕೋಟಿಗೆ ಏರಿದೆ! ಇದೇ ಅವಧಿಯಲ್ಲಿ, 49 ಜನರು ಕೊರೊನಾದಿಂದ ಮೃತಪಟ್ಟಿದ್ದು ಈವರೆಗೆ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 5,26,649 ಕ್ಕೇರಿದೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಯಲ್ಲಿ ಈ ಅಂಶ ಗಳನ್ನು ಉಲ್ಲೇಖೀಸಲಾಗಿದೆ. ದೇಶದಲ್ಲಿ ಒಟ್ಟಾರೆ ಯಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ 1,34,793ದಷ್ಟಿದೆ ಎಂದು ಇಲಾಖೆ ತಿಳಿಸಿದೆ.

ಮತ್ತೊಂದೆಡೆ, ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವ ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬಂದಿದೆ. ಶುಕ್ರವಾರ- ಶನಿವಾರ ನಡುವೆ ದೇಶಾದ್ಯಂತ 19,928 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ, ದೇಶದಲ್ಲಿ ಈ ಮಾರಣಾಂತಿಕ ಕಾಯಿಲೆಯಿಂದ ಚೇತರಿಸಿಕೊಂಡ ವರ ಸಂಖ್ಯೆ 4,34,65,552ಕ್ಕೇರಿದೆ. ಸೋಂಕಿನಿಂದ ಮೃತಪಡುವವರ ಪ್ರಮಾಣ ಶೇ. 1.19ರಷ್ಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Advertisement

205 ಮಂದಿಗೆ ಲಸಿಕೆ: ದೇಶಾದ್ಯಂತ ನಡೆಸ ಲಾಗುತ್ತಿರುವ ಕೊರೊನಾ ಲಸಿಕೆ ಅಭಿಯಾನ ದಡಿ, ಶನಿವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ 205.92 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಕೊರೊನಾ ಪರಿಹಾರಕ್ಕೆ ತೆರಿಗೆ ವಿನಾಯ್ತಿ: ಹೊಸ ನಿಯಮ
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯು ಕೆಲಸ ಮಾಡುತ್ತಿದ್ದ ಕಂಪೆನಿಯಿಂದ ಅಥವಾ ಸಂಬಂಧಿಕರಿಂದ ಸಿಗುವ ಪರಿಹಾರ ಧನದ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಕೇಂದ್ರ ತೆರಿಗೆ ಇಲಾಖೆ ಹೊಸ ನಿಬಂಧನೆಗಳನ್ನು ಜಾರಿಗೊಳಿಸಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬಿಡುಗಡೆ ಮಾಡಿರುವ ಹೊಸ ನಿಯಮಗಳು ಪ್ರಕಾರ, ಕೊರೊನಾ ಸೋಂಕಿತ ವ್ಯಕ್ತಿಗೆ ಸೋಂಕು ದೃಢಪಟ್ಟ ದಿನಾಂಕದಿಂದ ಆರು ತಿಂಗಳೊಳಗೆ ಆ ವ್ಯಕ್ತಿ ಸಾವನ್ನಪ್ಪಿರಬೇಕು. ಇನ್ನು, ಗರಿಷ್ಟ 10 ಲಕ್ಷ ರೂ.ಗಳವರೆಗೆ ಪಡೆದ ಆರ್ಥಿಕ ಪರಿಹಾರಕ್ಕೆ ತೆರಿಗೆ ವಿನಾಯ್ತಿ ಇರುತ್ತದೆ. ಇದಲ್ಲದೆ, ಕೊರೊನಾ ಸಾವಿಗೆ ಪಡೆದಿರುವ ಪರಿಹಾರ ಧನವನ್ನು ಕೇಂದ್ರ ಆದಾಯ ತೆರಿಗೆ ಇಲಾಖೆಯ “ಫಾರ್ಮ್ ನಂ. 1ನಲ್ಲಿ’ ಸಲ್ಲಿಸಬೇಕು. ಫಾರ್ಮ್ 1ನಲ್ಲಿ ಸಲ್ಲಿಸುವಾಗ, ವ್ಯಕ್ತಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ಆಸ್ಪತ್ರೆಗಳಿಂದ ನೀಡಲಾದ ಪ್ರಮಾಣ ಪತ್ರ ಅಥವಾ ಕ್ಲಿನಿಕಲ್‌ ಪ್ರಮಾಣ ಪತ್ರ, ಸೋಂಕು ಪತ್ತೆಗೆ ನಡೆಸಲಾದ ಪರೀಕ್ಷಾ ಪ್ರಮಾಣಪತ್ರಗಳು, ಕೊರೊನಾಕ್ಕೆ ನೀಡಲಾಗಿರುವ ಚಿಕಿತ್ಸೆಯ ಪ್ರಮಾಣಪತ್ರ, ಕುಟುಂಬಸ್ಥರು ಚಿಕಿತ್ಸೆಗಾಗಿ ಮಾಡಿರುವ ಖರ್ಚುವೆಚ್ಚದ ದಾಖಲೆಗಳನ್ನು ಸಲ್ಲಿಸಬೇಕು. ಜತೆಗೆ, ಮೃತಪಟ್ಟ ವ್ಯಕ್ತಿಯ ಆಧಾರ್‌, ಪ್ಯಾನ್‌ ಸಂಖ್ಯೆ, ವಿಳಾಸವನ್ನೂ ಸಲ್ಲಿಸಬೇಕು ಎಂದು ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next