Advertisement
“ಆದಷ್ಟು ಬೇಗ ಹೊರಟು ಬಂದ್ಬಿಡು. ಟಿವಿಯಲ್ಲಿ ಬೆಂಗಳೂರಿನ ಸುದ್ದಿ ನೋಡಿ ನಮಗಿಲ್ಲಿ ಕಣ್ಣಿಗೆ ನಿದ್ದೆ ಹತ್ತುತ್ತಿಲ್ಲ…’ ಕಳೆದೆರಡು ತಿಂಗಳಿನಿಂದ ದಿನಾ ಇದೇ ಮಾತು ಕೇಳುವುದಾಗಿತ್ತು. ಕೆಲಸದ ನೆಪದಲ್ಲಿ ಬೆಂಗಳೂರಿನಲ್ಲಿದ್ದ ನನ್ನನ್ನು ಆದಷ್ಟು ಬೇಗ ಮನೆಗೆ ಕರೆಸಿಕೊಳ್ಳುವ ಧಾವಂತ ಹೆತ್ತವರದ್ದು. ಮನೆಗೆ ಹೋದರೆ ಕೆಲಸ ಮಾಡೋಕೆ ಆಗೋದಿಲ್ಲ. ಹಾಗಾಗಿ ಊರಿಗೆ ಬರೋದಿಲ್ಲ ಅನ್ನೋ ಕಾರಣ ನನ್ನದು. ಆದರೆ, ಕೊನೆಗೂ ಅವರ ಹಠವೇ ಗೆದ್ದಿತ್ತು.
Related Articles
Advertisement
ನಾನು ಅದನ್ನೆಲ್ಲ ಕಲಿತೆ ಅನ್ನುವುದಕ್ಕಿಂತ, ಬೆಂಗಳೂರು ಇದೆಲ್ಲವನ್ನೂ ಕಲಿಸಿತು. ನಾನಷ್ಟೇ ಅಲ್ಲ, ನನ್ನಂಥ ಲಕ್ಷಾಂತರ ಜನರ ಬದುಕನ್ನು ಈ ಊರು ರೂಪಿಸಿದೆ. ವಿದ್ಯೆ-ಪ್ರತಿಭೆಗೆ ತಕ್ಕ ಅವಕಾಶ ನೀಡಿ ಬೆಳೆಸಿದೆ. ದೇಶದ ಮೂಲೆ ಮೂಲೆಯಿಂದ ಜನರು ಹಂಬಲಿಸಿ, ಕನವರಿಸಿ ಬಂದು ಸೇರುವ ನಗರವಿದು. ಹುಟ್ಟಿದ ಊರನ್ನು ನಾನೆಷ್ಟೇ ಪ್ರೀತಿಸಿದರೂ, ಬೆಂಗಳೂರಿನ ಮೇಲಿನ ಪ್ರೀತಿಗೆ ಬೇರೆಯದೇ ತೂಕ. ಆದರೇನು ಮಾಡಲಿ? ಈಗ ಕನಸಿನ ಊರನ್ನು ಬಿಡಲೇ ಬೇಕಾದ ಪರಿಸ್ಥಿತಿ.
ನಿಂತಿದ್ದ ನೆಲೆಯನ್ನು ತೊರೆದು, ಕೈಲಿದ್ದ ಕೆಲಸ ಬಿಟ್ಟು ಊರಿಗೆ ಮರಳಿದ್ದೇನೆ. ಇನ್ನು ಮುಂದೆ ಬೆಂಗಳೂರು ಮೊದಲಿ ನಷ್ಟೇ ದೂರ. ವಿವಿ ಪುರಂನ ಚಾಟ್ಸ್, ಲಾಲ್‌ಬಾಗ್‌ನ ಮಾರ್ನಿಂಗ್ ವಾಕ್, ಸಂಪಿಗೆ ರಸ್ತೆಯ ಮಂತ್ರಿ ಮಾಲ್, ಪಿವಿಆರ್ ಸಿನಿಮಾ, ರಭಸದಿ ಚಲಿಸೋ ಮೆಟ್ರೋ, ಕಮರ್ಷಿ ಯಲ್ ಸ್ಟ್ರೀಟ್‌ನ ಶಾಪಿಂಗ್, ಮಲ್ಲೇಶ್ವರಂನ ಮಸಾಲೆ ದೋಸೆ… ಯಾವುದೂ ನನ್ನವಲ್ಲ. ಸದ್ಯಕ್ಕೆ ಜೊತೆಗಿರುವುದು ಬೆಂಗಳೂರು ಮೊದಲಿ ನಂತಾಗಲಿ, ಊರು ಬಿಟ್ಟವರೆಲ್ಲ ವಾಪಸಾಗಿ ಹೊಸ ಕನಸುಗಳು ಅಲ್ಲಿ ಚಿಗುರಲಿ ಎಂಬ ಪ್ರಾರ್ಥನೆಯಷ್ಟೇ…
(ಇಲ್ಲಿ ಬೆಂಗಳೂರು ಎಂಬುದು ಒಂದು ಸಂಕೇತ ಅಷ್ಟೇ. ನಾನು ಬೆಂಗಳೂರನ್ನು ಬಿಟ್ಟು ಬಂದಂತೆಯೇ, ಬಾಂಬೆಯನ್ನು, ಪುಣೆಯನ್ನು, ಹೈದ್ರಾಬಾದನ್ನು ಅಥವಾ ಉದ್ಯೋಗ- ಆಶ್ರಯ ನೀಡಿದ್ದ ಮತ್ಯಾವುದೋ ನಗರವನ್ನು ಬಿಟ್ಟು ಬಂದವರಿದ್ದಾರೆ. ನಾನು ಬೆಂಗಳೂರನ್ನು ನೆನಪು ಮಾಡಿಕೊಂಡಂತೆಯೇ, ಬೆಂಗಳೂರಿನ ವಿಷಯದಲ್ಲಿ ಪ್ರಾರ್ಥಿಸಿದಂತೆಯೇ, ತಮ್ಮನ್ನು ಇಷ್ಟು ದಿನ ಪೊರೆದ ನಗರಗಳ ಬಗ್ಗೆ ಉಳಿದವರು ಹೇಳುವ ಮಾತುಗಳೂ ಹೆಚ್ಚುಕಡಿಮೆ ಹೀಗೇ ಇರುತ್ತವೆ ಅಂದುಕೊಳ್ಳುತ್ತೇನೆ…)
* ರೋಹಿಣಿ