ಮಂಡ್ಯ: ತಾಲೂಕಿನ ಬೇವು ಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಕೊಳವೆಬಾವಿಗಳು ನೀರಿಲ್ಲದೆ ಬತ್ತಿಹೋಗಿವೆ. ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಒಮ್ಮೆ ಸಿಕ್ಕರೂ ನೀರು ಕೆಲವೇ ದಿನಗಳಲ್ಲಿ ಬರಿದಾಗುತ್ತಿದೆ. ಹೀಗಾಗಿ ಈ ಭಾಗದ ರೈತರು ನೀರಿನ ಅಭಾವದಿಂದ ಕೃಷಿ ಚಟುವಟಿಕೆ ನಡೆಸಲಾಗದೆ ದಿಕ್ಕೆಟ್ಟಿದ್ದಾರೆ.
ನೀರಿಗಾಗಿ ಹೋರಾಟ: ಬೇವುಕಲ್ಲು ಗ್ರಾಮ ಪಂಚಾಯಿತಿಗೆ ಬೇವುಕಲ್ಲು, ಬೇವುಕಲ್ಲು ಕೊಪ್ಪಲು, ಬಿ.ಹೊನ್ನೇನಹಳ್ಳಿ, ಬಿ.ಹಟ್ನ, ಹೊನ್ನೇನಹಳ್ಳಿ, ಜವನಹಳ್ಳಿ, ಬಿಲ್ಲೇನಹಳ್ಳಿ, ಕೊಂತೆಗೌಡನಕೊಪ್ಪಲು, ಗಿಡ್ಡೇಗೌಡನ ಕೊಪ್ಪಲು, ಮಲ್ಲೇನಹಳ್ಳಿ, ಬಂಕನಹಳ್ಳಿ, ಛತ್ರನಹಳ್ಳಿ ಗ್ರಾಮಗಳು ಸೇರಲಿದ್ದು, ಎಲ್ಲಾ ಗ್ರಾಮಗಳಲ್ಲಿಯೂ ನೀರಿಗೆ ತೀವ್ರ ಬವಣೆ ಎದುರಿಸುತ್ತಿದ್ದಾರೆ. ಲಕ್ಷಾಂತರ ರೂ. ಹಣ ಖರ್ಚು ಮಾಡಿ ಪಾತಾಳದಲ್ಲಿರುವ ಗಂಗೆಯನ್ನು ಹೊರತೆಗೆಯಲು ಗ್ರಾಮಸ್ಥರು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಕೊಳವೆಬಾವಿ ಕೊರೆದು ನೀರು ಸಿಗದೆ ವೈಫಲ್ಯವಾದರೂ ಮರಳಿ ಯತ್ನವ ಮಾಡು ಎಂಬಂತೆ ಮತ್ತೂಂದು, ಮಗದೊಂದು ಕೊಳವೆ ಬಾವಿಯನ್ನು ಕೊರೆಸುತ್ತಾ ಜಮೀನಿಗೆ ನೀರಿನ ಆಧಾರ ಮಾಡಿಕೊಳ್ಳುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ಆದರೂ ಜೀವ ಜಲ ರೈತರ ಪಾಲಿಗೆ ಸಿಗದಂತಾಗಿದೆ.
ಸೊರಗಿದ ಬೆಳೆಗಳು: ನೀರಿಲ್ಲದೆ ಕಬ್ಬು ಒಣಗುತ್ತಾ ಉರುವಲಾಗುತ್ತಿದೆ. ಬಾಳೆ ಬೆಳೆ ಸೊರಗಿಹೋಗುತ್ತಿದೆ. ತೆಂಗು ಬೆಳೆ ನೀರಿಲ್ಲದೆ ಸಣ್ಣ ಹಂತದಲ್ಲಿರುವಾಗಲೇ ಉದುರಿ ಹೋಗುತ್ತಿವೆ. ಯಾವ ಬೆಳೆಯನ್ನು ಬೆಳೆಯುವುದಕ್ಕೂ ನೀರಿಲ್ಲ. ಕೃಷಿ ಚಟುವಟಿಕೆಯನ್ನೇ ನಡೆಸಲಾಗದಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಇಲ್ಲಿನ ರೈತ ಸಮುದಾಯ ಎದುರಿಸುತ್ತಿದೆ.
ಬತ್ತಿಹೋದ ಹಾಗೂ ನೀರು ಸಿಗದ ಕೊಳವೆ ಬಾವಿಗಳನ್ನು ಗ್ರಾಮಸ್ಥರು ಕಲ್ಲು-ಮಣ್ಣುಗಳಿಂದ ಮುಚ್ಚಿದ್ದಾರೆ. ಹಾಲಿ ಬೆರಳೆಣಿಕೆಯಷ್ಟು ಕೊಳವೆ ಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲೂ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
Advertisement
ಸಾಲ ಮಾಡಿ ಬೆಳೆದಿರುವ ಕಬ್ಬು, ಬಾಳೆ, ತೆಂಗು ಬೆಳೆಗಳು ನೀರಿಲ್ಲದೆ ಕಣ್ಣೆದುರೇ ಒಣಗುತ್ತಿವೆ. ಬೆಳೆ ಬೆಳೆಯಲು ಮಾಡಿದ ಸಾಲದ ಹೊರೆ ಹೆಚ್ಚಾಗುತ್ತಿದೆ. 700ರಿಂದ 1000 ಅಡಿವರೆಗೆ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಮಾತ್ರ ಸಿಗುತ್ತಿಲ್ಲ. ಜಮೀನಿನಲ್ಲಿರುವ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದೆ ರೈತರು ಪರದಾಡುತ್ತಿದ್ದಾರೆ.
Related Articles
Advertisement
ಕುಡಿಯುವ ನೀರಿಗೂ ಹಾಹಾಕಾರ: ಕೃಷಿ ಚಟುವಟಿಕೆ ಮಾತ್ರವಲ್ಲ, ಜನರ ಕುಡಿಯುವ ನೀರಿಗೂ ಇಲ್ಲಿ ಹಾಹಾಕಾರ ಎದುರಾಗಿದೆ. ಗ್ರಾಮದಲ್ಲಿರುವ ಮೂರು ಕೊಳವೆ ಬಾವಿಗಳಲ್ಲಿ ಎರಡು ಬತ್ತಿಹೋಗಿವೆ. ಒಂದರಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಒಮ್ಮೆ ಮೋಟಾರ್ ಚಾಲನೆ ಮಾಡಿದರೆ ನೀರಿನ ತೊಂಬೆಗಳಿಗೆ ನೀರು ಹತ್ತುವುದೇ ಇಲ್ಲ. ಸಂಗ್ರಹವಾಗಿರುವ ನೀರನ್ನು ನಾಲ್ಕು ಅಥವಾ ಐದು ದಿನಗಳಿಗೊಮ್ಮೆ ಪೂರೈಸಲಾಗುತ್ತಿದ್ದರೂ ಬೇಡಿಕೆಯಷ್ಟು ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಬೇವುಕಲ್ಲು ಗ್ರಾಮದಲ್ಲಿ 500 ಕುಟುಂಬಗಳಿದ್ದು, 1,300ಕ್ಕೂ ಹೆಚ್ಚು ಜನರಿದ್ದಾರೆ. ಇಷ್ಟೂ ಜನರಿಗೂ ಅಗತ್ಯವಿರುವಷ್ಟು ನೀರನ್ನು ಪೂರೈಸಲಾಗದೆ ಗ್ರಾಮ ಪಂಚಾಯಿತಿಯವರು ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ.
ಟ್ಯಾಂಕಿನಲ್ಲಿ ಸಂಗ್ರಹವಾಗುತ್ತಿರುವ ನೀರನ್ನು ಊರಿನ ಒಂದು ಭಾಗಕ್ಕೆ ಸರಬರಾಜು ಮಾಡಿದರೆ ಮತ್ತೂಂದು ಭಾಗಕ್ಕೆ ಅಧಿಕಾರಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಪಂಚಾಯಿತಿ ಅಧಿಕಾರಿಗಳು ನೀರಿನ ಅಭಾವ ಕುರಿತಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕೊಳವೆ ಬಾವಿ ಕೊರೆಸುವುದಕ್ಕೆ ಅನುಮತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಂಕರ್ ನೀರು ಬಳಕೆಗೆ ಗ್ರಾಮಸ್ಥರ ಹಿಂದೇಟು:
ಬೇವುಕಲ್ಲು ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರಿತಪಿಸುವುದನ್ನು ಮನಗಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವನಹಳ್ಳಿಯಲ್ಲಿರುವ ಖಾಸಗಿ ಕೊಳವೆ ಬಾವಿ ಮಾಲೀಕರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಿದ್ದರು. ಆದರೆ, ಗ್ರಾಮದಲ್ಲಿರುವ ಬಹುತೇಕರು ಲಿಂಗಾಯತರಾಗಿದ್ದು, ಅವರು ಟ್ಯಾಂಕರ್ ನೀರು ಬಳಕೆಗೆ ಹಿಂದೇಟು ಹಾಕುತ್ತಿರುವುದರಿಂದ ಹೊಸ ಕೊಳವೆ ಬಾವಿ ಕೊರೆಸುವುದಕ್ಕೆ ಮುಂದಾಗಿದ್ದಾರೆ. ಬೇವುಕಲ್ಲು, ಬೇವುಕಲ್ಲು ಕೊಪ್ಪಲು, ಬಿ.ಹಟ್ನ, ಬಿಲ್ಲೇನಹಳ್ಳಿ, ಮಲ್ಲೇನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅಲ್ಲಿಂದಲೇ ಸುತ್ತಮುತ್ತಲ ಗ್ರಾಮಸ್ಥರು ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.ಹೊನ್ನೇಹಳ್ಳಿಯಲ್ಲಿ ಒಂದು ಕೊಳವೆ ಬಾವಿಗೆ ಎರಡು ಮೋಟಾರ್ ಅಳವಡಿಸಿದ್ದರೂ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಅಲ್ಲಿಯೂ ನೀರಿಗೆ ತುಂಬಾ ಹಾಹಾಕಾರ ಸೃಷ್ಟಿಯಾಗಿದೆ.
● ಮಂಡ್ಯ ಮಂಜುನಾಥ್